ಬುಧವಾರ, ಅಕ್ಟೋಬರ್ 20, 2021
24 °C

ಚಿಕ್ಕಮಗಳೂರು: ಮತ್ತೊಂದು ಆಮ್ಲಜನಕ ಉತ್ಪಾದನಾ ಘಟಕ ಒದಗಿಸಲು ಕ್ರಮ-ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಗೆ ಇನ್ನೊಂದು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಚೆನ್ನೈ ಆಯಿಲ್‌ ಕಾರ್ಪೋರೇಷನ್‌ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ನೆರವಿನಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ (960 ಎಲ್‌ಪಿಎಂ ಸಾಮರ್ಥ್ಯ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾಸ್ಪತ್ರೆಯಲ್ಲಿ ಈಗ 196 ಹಾಸಿಗೆಗೆ ಆಮ್ಲಜನಕ ವ್ಯವಸ್ಥೆ ಲೇನ್‌ ಮಾಡಲಾಗಿದೆ. ಈಗ ಸ್ಥಾಪಿರುವ ಘಟಕ ಏಕಕಾಲದಲ್ಲಿ 100 ಹಾಸಿಗೆಗೆ ಪೂರೈಕೆ ಸಾಮರ್ಥ್ಯ ಹೊಂದಿದೆ ಎಂದರು.

ಇನ್ನೊಂದು ಘಟಕ ಸ್ಥಾಪಿಸಿದರೆ ಬಾಕಿ 96 ಹಾಸಿಗೆಗಳಿಗೂ ಆಮ್ಲಜನಕ ಪೂರೈಗೆ ವ್ಯವಸ್ಥೆಯಾಗಲಿದೆ. ಚೆನ್ನೈ ಆಯಿಲ್‌ ಕಾರ್ಪೋರೇಷನ್‌ನವರಿಗೆ ಇನ್ನೊಂದು ಘಟಕಕ್ಕೆ ನೆರವು ಕೋರಿದ್ದೇವೆ. ಅವರು ಲಿಖಿತವಾಗಿ ಮನವಿ ಸಲ್ಲಿಸುವಂತೆ ಸಂಸ್ಥೆ ವ್ಯವಸ್ಥಾ‍ಪಕ ನಿರ್ದೇಶಕರು ತಿಳಿಸಿದ್ದಾರೆ. ಮನವಿ ಸಲ್ಲಿಸಿ, ಇನ್ನೊಂದು ಘಟಕದ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪೆಟ್ರೋಲಿಯ ಘಟಕಗಳು ಲಾಭದಾಯಕ ಸ್ಥಿತಿಯಲ್ಲಿ ಇವೆ. ಸಂಸ್ಥೆಗಳು ನೆರವು ನೀಡುತ್ತಿವೆ. ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲೂ ಆಮ್ಲಜನಕ ಉತ್ಪಾದನಾ ಘಟಕಗಳ ಆರಂಭಕ್ಕೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌ ಮೂರನೇ ಅಲೆಯ ಎದುರಾದರೆ ನಿಭಾಯಿಸಲು ತಯಾರಿ ನಡೆದಿದೆ. ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು. ಅನಗತ್ಯವಾಗಿ ಹೊರಗೆ ಯಾರೂ ಓಡಾಡಬಾರದು ಎಂದು ಸಲಹೆ ನೀಡಿದರು.

ದೇಶದ ವಿವಿಧೆಡೆ ಸ್ಥಾಪಿಸಿರುವ ಆಮ್ಲಜನಕ ಘಟಕಗಳನ್ನು ಪ್ರಧಾನಿ ಮೋದಿ ಅವರು ಆನ್‌ಲೈನ್‌ ಮೂಲಕ ಉದ್ಘಾಟಿಸುವ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ (ಎಲ್ಇಡಿ ಪರದೆ) ಮಾಡಲಾಗಿತ್ತು.

ಚನ್ನೈ ಆಯಿಲ್‌ ಕಾರ್ಪೊರೇಷನ್‌ನ ವ್ಯವಸ್ಥಾಪಕ ಪ್ರದೀಪ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು