ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಅಖಾಡದಲ್ಲಿ ಪೈಲ್ವಾನ್ ಹೊನ್ನಪ್ಪ

ದೇಸಿ ಕ್ರೀಡೆಯ ಉಳಿವಿಗೆ ಟೊಂಕ ಕಟ್ಟಿದ ಬೀರೂರಿನ ಕುಸ್ತಿಪಟು
Last Updated 3 ಜುಲೈ 2022, 1:57 IST
ಅಕ್ಷರ ಗಾತ್ರ

ಕಡೂರು: ಕುಸ್ತಿ ಎನ್ನುವುದು ಕೇವಲ ಕ್ರೀಡೆ ಮಾತ್ರವಲ್ಲ. ಅದು ನಮ್ಮ ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತೀಕ ಎನ್ನುತ್ತಾರೆ ಬೀರೂರಿನ ಕುಸ್ತಿಪಟು ಪೈಲ್ವಾನ್ ಹೊನ್ನಪ್ಪ.

ಬೀರೂರಿನಲ್ಲಿಯೇ ಹುಟ್ಟಿ ಬೆಳೆದ ಹೊನ್ನಪ್ಪನವರಿಗೆ ವಿದ್ಯೆ ಅಷ್ಟಕ್ಕಷ್ಟೆ. ಆದರೆ, ಮೊದಲಿನಿಂದಲೂ ಕುಸ್ತಿಯ ಬಗ್ಗೆ ಕುತೂಹಲ. ಅದಕ್ಕಾಗಿಯೇ ಬೀರೂರಿನ ಛತ್ರಪತಿ ಶಿವಾಜಿ ವ್ಯಾಯಾಮ ಶಾಲೆ ಸೇರಿದರು. ಅಲ್ಲಿ ಪೈಲ್ವಾನ್ ಓಂಕಾರಪ್ಪ ಇವರ ಗುರುಗಳು. ಜತೆಗೆ ಇನ್ನಿಬ್ಬರು ಫೈಲ್ವಾನ್‌ಗಳಾದ ಮಂಜಣ್ಣ ಮತ್ತು ದೇವರಾಜ್ ಹಾಗೂ ಸಾಹಿತಿ ಚಂದ್ರಶೇಖರ ಮೋಹಿತೆ ಅವರ ಪ್ರೋತ್ಸಾಹವೂ ದೊರೆಯಿತು. ಕಠಿಣ ವ್ಯಾಯಾಮದಲ್ಲಿ ತೊಡಗಿಸಿಕೊಂಡರು.

ಕೆಮ್ಮಣ್ಣಿನ ಅಂಕಣದಲ್ಲಿ 82 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾಗವಹಿಸುವ ಹೊನ್ನಪ್ಪ ಅವರಿಗೆ ಈಗ 55 ವರ್ಷ. ಜಿಲ್ಲೆ ಹೊರ ಜಿಲ್ಲೆಗಳಲ್ಲಿ ಎಲ್ಲಿಯಾದರೂ ಕುಸ್ತಿ ಪಂದ್ಯಾವಳಿ ನಡೆದರೆ ಅಲ್ಲಿ ಪೈಲ್ವಾನ್ ಹೊನ್ನಪ್ಪ ಹಾಜರು. ಅಲ್ಲಿವರಿಗೆ ಒಂದಾದರೂ ಪ್ರಶಸ್ತಿ ಕಾಯಂ. ಹೀಗೆ ಅವರಿಗೆ ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಆದರೆ, ಹೊನ್ನಪ್ಪ ಅವರಿಗೆ ಈ ಪ್ರಶಸ್ತಿಗಳ ಬಗ್ಗೆ ಮೋಹವಿಲ್ಲ. ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಈ ಕುಸ್ತಿ ಕಲೆ ಉಳಿಯಬೇಕು, ಉಳಿಸಬೇಕು ಎಂಬ ತುಡಿತ ಅವರಲ್ಲಿದೆ.

ಗಾರೆ ಕೆಲಸ ಮಾಡುತ್ತಿದ್ದ ಹೊನ್ನಪ್ಪ ಕೋವಿಡ್ ಸಮಯದಲ್ಲಿ ಕೆಲಸವಿಲ್ಲದಂತಾದಾಗ ಜೀವನೋಪಾಯಕ್ಕಾಗಿ ನಾಯಿಮರಿಗಳ ಮಾರಾಟ ಆರಂಭಿಸಿದರು. ನಿಧಾನವಾಗಿ ಆ ವ್ಯವಹಾರದಲ್ಲಿ ತೃಪ್ತಿಕರವಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ತಳಿಗಳ ಶ್ವಾನ ಸಂವರ್ಧನೆಯಲ್ಲಿ ಯಶಸ್ಸು ಕಂಡಿದ್ದಾರೆ.

ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿಯೂ ಭಾಗವಹಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ 1991ರಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಮಲೆನಾಡ ಕಲಿ ಪ್ರಶಸ್ತಿ, 2002ರಲ್ಲಿ ಅಂಜ್ಜಂಪುರದ ಕಿರಾಳಮ್ಮ ಜಾತ್ರೆಯಲ್ಲಿ ನಡೆದ ಕುಸ್ತಿಯಲ್ಲಿ ಬಂಗಾರದ ಪದಕ, ಬೀರೂರಿನ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ, 2003ರಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕ ಕೇಸರಿ ಪ್ರಶಸ್ತಿ, 2020ರಲ್ಲಿ ಚಿಕ್ಕಮಗಳೂರು ಹಬ್ಬದಲ್ಲಿ ನಡೆದ 90 ಕೆ.ಜಿ‌ ವಿಭಾಗದಲ್ಲಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ಕುಸ್ತಿ ಕಲೆ ಮೆಚ್ಚಿ ಇವರ ಅಭಿಮಾನಿಗಳಿಂದ ಬೆಳ್ಳಿ ಗದೆಯೂ ದೊರೆತಿದೆ.ಕ್ಷತ್ರಿಯ ಮರಾಠ ಸಮಾಜ ಹೊನ್ನಪ್ಪ ಅವರನ್ನು ಗೌರವಿಸಿದೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಕುಸ್ತಿಯಲ್ಲಿ ಭಾಗವಹಿಸಿದರೆ ಗೆಲ್ಲಲೇಬೇಕೆಂಬ ಛಲ ಮುಖ್ಯ. ಏಕೆಂದರೆ ನಾವು ಸೋತರೆ ಅದು ನಮಗೆ ಪಟ್ಟು ಕಲಿಸಿದ ಶಾಲೆಗೆ ಅವಮಾನ. ಆದರೆ, ಪ್ರಶಸ್ತಿ ಗೆಲ್ಲುವ ತವಕದಲ್ಲಿ ವಾಮಮಾರ್ಗ ಸಲ್ಲದು ಎನ್ನುವ ಅವರು, ಈಗಿನ ಮಕ್ಕಳು ಬರೀ ಕ್ರಿಕೆಟ್ ಮುಂತಾದ ವುಗಳನ್ನು ಮಾತ್ರ ನೋಡುತ್ತಾರೆ‌. ಮಕ್ಕಳಿಗೆ ಕುಸ್ತಿಯಂತಹ ನಮ್ಮ ದೇಸಿ ಕ್ರೀಡೆಗಳ ಬಗ್ಗೆ ತಿಳಿಸುವುದಿಲ್ಲ. ಇದು ವಿಪರ್ಯಾಸ. ಕ್ರೀಡಾ ಇಲಾಖೆಯೂ ಕುಸ್ತಿಯ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ. ಕ್ರೀಡೆಯಲ್ಲಿ ಭಾಗವಹಿಸಿದರೆ ಪ್ರಶಸ್ತಿಯೊಂದೇ ಅಲ್ಲ.
ದೈಹಿಕವಾಗಿ ಆರೋಗ್ಯ ನೀಡುವ ಕ್ರೀಡೆ ಇದು. ಇದನ್ನು ಕಲಿಯಲು ಯಾರೇ ಆಸಕ್ತಿ ತೋರಿದರೂ ಅವರಿಗೆ ಕುಸ್ತಿ ಪಟ್ಟುಗಳನ್ನು ಕಲಿಸಲು ಸಿದ್ಧನಿದ್ದೇನೆ ಎನ್ನುತ್ತಾರೆ
ಹೊನ್ನಪ್ಪ. ಅವರ ಸಂಪರ್ಕಕ್ಕೆ
ಮೊ: 99803 63501.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT