ಮಂಗಳವಾರ, ಮಾರ್ಚ್ 2, 2021
31 °C
ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ರೇಣುಕಾ ಪ್ರಸಾದ್

ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸ್ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ಹಸಿರು ವಲಯದ ಜಿಲ್ಲೆಗಳಿಂದ ಹಸಿರು ವಲಯದ ಜಿಲ್ಲೆಗಳಿಗೆ ಹೋಗಬೇಕಾದರೂ ಪಾಸ್ ಕಡ್ಡಾಯ ಎಂದು ತರೀಕೆರೆ ಉಪ ವಿಭಾಗಾಧಿಕಾರಿ ರೇಣುಕಾ ಪ್ರಸಾದ್ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ಕೋವಿಡ್ 19 ನಿಯಂತ್ರಣ ತಾಲ್ಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಮಾಹಿತಿ ನೀಡಿದರು. ‘ಅಂತರರಾಜ್ಯಕ್ಕೆ ಹೋಗುವವರು ಸೇವಾಸಿಂಧು ಆ್ಯಪ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅಂತರ ಜಿಲ್ಲೆಗೆ ಹೋಗುವವರೂ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಕಾರ್ಮಿಕರಿಗೆ ಅರ್ಜಿ ಭರ್ತಿ ಮಾಡಲು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಯೇ ಭರ್ತಿ ಮಾಡಿಕೊಡಬೇಕು. ಬಸ್‌ನಲ್ಲಿ ಹೋಗುವ ಕಾರ್ಮಿಕರಿಗೆ ಕಡ್ಡಾಯವಾಗಿ ಮಾಸ್ಕ್ ಕೊಡಬೇಕು. ಆರೋಗ್ಯ ತಪಾಸಣೆ ನಡೆಸಬೇಕು’ ಎಂದರು.

‘ಅಂತರರಾಜ್ಯಕ್ಕೆ ಹೋಗುವವರು ಸಹ ಸೇವಾಸಿಂಧು ಆ್ಯಪ್ ನಲ್ಲಿ ಎಸ್ಪಿ ಕಚೇರಿಗೂ ಅರ್ಜಿ ಸಲ್ಲಿಸಬಹುದು. ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವಿವಾಹಕ್ಕೆ, ಯಾರಾದರೂ ಮರಣ ಹೊಂದಿದರೆ ಅಥವಾ ತುರ್ತುಚಿಕಿತ್ಸೆಗೆ ಹೋಗಲು ಸಹ ಪಾಸ್ ಅಗತ್ಯ. ಇದನ್ನು ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಪಾಸ್ ನೀಡಲಾಗುತ್ತದೆ. ಅಂತರ ಜಿಲ್ಲೆಗೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗಿನ ಪಾಸ್ ಅನ್ನು ಇಲಾಖೆಯ ಮೂಲಕ ನೀಡಲಾಗುತ್ತದೆ’ ಎಂದರು.

‘ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ್ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ಹಾಗೂ ಒಂದು ಕಾರ್ಡ್ ಗೆ 1ಕೆಜಿ ತೊಗರಿ ಬೆಳೆ ನೀಡಲಾಗುತ್ತದೆ. ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೂ ಅಕ್ಕಿ ಮತ್ತು ಬೆಳೆ ಪೂರೈಕೆಯಾದ ಕೂಡಲೇ ವಿತರಣೆ ಆರಂಭವಾಗಲಿದೆ. ಒಟಿಪಿ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ವಿತರಣೆಗೆ ಬಳಸಿಕೊಳ್ಳಲಾಗುತ್ತದೆ’ ಎಂದು ಆಹಾರ ನಿರೀಕ್ಷಕರು ಮಾಹಿತಿ ನೀಡಿದರು.

‘ಒಂದು ವೇಳೆ ಆಹಾರ ವಿತರಣೆಗೆ ಒಟಿಪಿ ಮೂಲಕ ಅಥವಾ ಇತರೆ ಮಾನದಂಡಗಳ ಮೂಲಕ ವಿತರಿಸಲು ಸಾಧ್ಯವಾಗದಿದ್ದರೆ ನೇರವಾಗಿ ವಿತರಿಸುವ ವ್ಯವಸ್ಥೆ ಮಾಡಬೇಕು. ಪಡಿತರ ಅಕ್ಕಿಯನ್ನು ಫಲಾನುಭವಿಗಳು ಬೇರೆಯವರಿಗೆ ಮಾರಾಟ ಮಾಡುವುದು ಕಂಡುಬಂದರೆ ಮೊಕದ್ದಮೆ ದಾಖಲಿಸಿ ಪಡಿತರ ಚೀಟಿ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿ ಇಲ್ಲದವರಿಗೆ, ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸಬೇಕು. ಎಲ್ಲಾ ಎಪಿಎಲ್ ಕುಟುಂಬಗಳಿಗೆ ನಿಗದಿತ ದರ ಪಡೆದುಕೊಂಡು ಪಡಿತರ ವಿತರಿಸಲು ಕ್ರಮಕೈಗೊಳ್ಳಬೇಕು’ ಎಂದು ಸಭೆ ಸೂಚಿಸಿತು.

‘ಬೇರೆ ರಾಜ್ಯದಿಂದ ಮತ್ತು ವಿದೇಶದಿಂದ ಬರುವವರಿಗೆ ಕ್ವಾರೆಂಟೈನ್ ಮಾಡಲು ವಿದ್ಯಾರ್ಥಿ ನಿಲಯಗಳನ್ನು ಸಜ್ಜುಗೊಳಿಸಿಕೊಳ್ಳಬೇಕು. ಕ್ವಾರಂಟೈನ್‌ ನಲ್ಲಿ ಆಹಾರವೂ ಸೇರಿದಂತೆ ಸಕಲ ಸೌಲಭ್ಯಗಳನ್ನು ಒದಗಿಸಬೇಕು. ಅಂತರ ರಾಜ್ಯ ದಿಂದ ಬಂದವರನ್ನು ಚೆಕ್‌ಪೋಸ್ಟ್ ನಲ್ಲಿಯೇ ಥರ್ಮಲ್ ಸ್ಕ್ಯಾನರ್ ಮೂಲಕ ಜ್ವರ ತಪಾಸಣೆ ನಡೆಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲೂ ಬೇರೆ ಜಿಲ್ಲೆ, ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಒಳಗೊಳಪಡಿಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಿ ಕ್ವಾರಂಟೈನ್ ಇದ್ದವರು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ವಿದೇಶದಿಂದ ಬರುವವರಿರುವುದರಿಂದ ಸೂಕ್ಷ್ಮ ವಿಷಯವಾಗಿದ್ದು ಎಲ್ಲರೂ ಎಚ್ಚರದಿಂದ ಇರಬೇಕು’ ಎಂದರು.

ತಹಶೀಲ್ದಾರ್ ಪರಮೇಶ್ವರ, ತಾಲ್ಲೂಕು ಪಂಚಾಯಿತಿ ಇಒ ಎಸ್.ನಯನಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು