ಚಿಕ್ಕಮಗಳೂರು: ಜಿಲ್ಲೆಯ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮಳೆಗಾಲದ ಬಳಿಕ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ನಗರದಲ್ಲೂ ಬಹುತೇಕ ರಸ್ತೆಗಳು ಹಾಳಾಗಿವೆ. ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲೇ ಹೊಂಡಗಳು ನಿರ್ಮಾಣವಾಗಿವೆ. ಈ ರಸ್ತೆಯಲ್ಲಿ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನ್ಯಾಯಾಧೀಶರ ವಸತಿ ಗೃಹಗಳಿವೆ. ಆದರೆ ಈ ರಸ್ತೆಯಲ್ಲಿ ಹೊಂಡಗಳೇ ನಿರ್ಮಾಣವಾಗಿದ್ದು, ವಾಹನ ಚಾಲನೆ ಮಾಡುವುದೇ ಕಷ್ಟವಾಗಿದೆ.
ಬಿದ್ದಿರುವ ಗುಂಡಿಗೆ ಕಟ್ಟಡ ತ್ಯಾಜ್ಯ ತಂದು ಸುರಿಯಲಾಗಿದ್ದು, ಅದರಿಂದ ಇನ್ನಷ್ಟು ಮಣ್ಣು ಗುಡ್ಡೆಗಳು ನಿರ್ಮಾಣವಾಗಿವೆ. ಇದನ್ನು ನೋಡಿಯೂ ಅಧಿಕಾರಿಗಳು ಕಣ್ಮುಚ್ಚಿ ತಿರುಗಾಡುತ್ತಿದ್ದಾರೆ.
ಎಂ.ಜಿ.ರಸ್ತೆಯಿಂದ ಐ.ಜಿ.ರಸ್ತೆಗೆ ಸಂಪರ್ಕ ಕಲ್ಪಿಸುವ ನಾಯ್ಡು ರಸ್ತೆ(ಅಂಚೆ ಕಚೇರಿ ರಸ್ತೆ) ಮತ್ತು ಅದಕ್ಕೆ ಪರ್ಯಾಯವಾಗಿರುವ ನೇಕಾರರ ಬೀದಿಯಲ್ಲಿ ಚೆನ್ನಾಗಿದ್ದ ರಸ್ತೆಗಳನ್ನು ನಗರಸಭೆ ಅಧಿಕಾರಿಗಳು ಅಗೆದು ಬಿಟ್ಟಿದ್ದಾರೆ. ಒಳಚರಂಡಿ ಕಾಮಗಾರಿಗಾಗಿ ಅಗೆದ ನಂತರ ಸಮಪರ್ಕವಾಗಿ ಮರು ನಿರ್ಮಾಣ ಮಾಡಿಲ್ಲ. ಮಣ್ಣು ತುಂಬಿಸಿ ಬಿಟ್ಟು ಹೋಗಿದ್ದಾರೆ. ನಗರಸಭೆ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ಉಂಡೇದಾಸರಹಳ್ಳಿ ರಸ್ತೆಯಲ್ಲಂತೂ ಹೆಜ್ಜೆಗೊಂದು ಗುಂಡಿಗಳಿವೆ. ಕೆಲವೆಡೆ ಹೊಂಡಗಳೇ ನಿರ್ಮಾಣವಾಗಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಗುಂಡಿಗಳು ದಿನದಿಂದ ದಿನಕ್ಕೆ ದೊಡ್ಡವಾಗುತ್ತಿದ್ದು, ವಾಹನ ಚಾಲನೆ ಮಾಡಲು ರಸ್ತೆ ಹುಡುಕಬೇಕಾದ ಸ್ಥಿತಿ ಇದೆ.
ಚಿಕ್ಕಮಗಳೂರು–ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಕಡೂರು ರಸ್ತೆಯಲ್ಲಿ ನಗರ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯ ನೀರು ಚರಂಡಿ ಸೇರದೆ ರಸ್ತೆಯಲ್ಲಿ ನಿಲ್ಲುವ ಸ್ಥಿತಿ ಇದೆ. ಪಾದಚಾರಿ ಮಾರ್ಗಗಳು ನಿರ್ವಹಣೆ ಇಲ್ಲದೆ ಅಲ್ಲಲ್ಲಿ ತ್ಯಾಜ್ಯದ ಗೂಡಾಗಿವೆ. ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನಾದರೂ ಸರ್ಕಾರ ಮಾಡಬೇಕು ಎಂಬುದು ಜನರ ಒತ್ತಾಯ.
ಹೆದ್ದಾರಿಯಲ್ಲೇ ಗುಂಡಿ ರಸ್ತೆ
ಮೂಡಿಗೆರೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲೇ ರಸ್ತೆ ಗುಂಡಿ ಬಿದ್ದಿದ್ದು ವಾಹನ ಸವಾರರು ಜೀವ ಬಿಗಿ ಹಿಡಿದು ತಿರುಗಾಡುವಂತಾಗಿದೆ. ತಾಲ್ಲೂನಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಜನ್ನಾಪುರದಿಂದ ಜಿಲ್ಲೆಯ ಗಡಿಭಾಗವಾದ ಕಿರುಗುಂದ ತನಕ ಮಾರುದ್ದ ಗುಂಡಿ ಬಿದ್ದು ನಿತ್ಯವು ತಿರುಗಾಡುವ ಸಾವಿರಾರು ವಾಹನಗಳ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ರಸ್ತೆಗಳ ಹಾನಿ ಪ್ರಮಾಣವೂ ಹೆಚ್ಚಾಗಿದೆ. ರಸ್ತೆ ಇಕ್ಕೆಲದ ಚರಂಡಿಗಳು ಮುಚ್ಚಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲಾಗದೇ ರಸ್ತೆ ಮೇಲೆ ಸಂಗ್ರಹವಾಗುವುದರಿಂದ ಗುಂಡಿ ಬೀಳುತ್ತಿವೆ. ತಾಲ್ಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಕುದುರೆಗುಂಡಿ ಆಲದಗುಡ್ಡ ಸೇರಿದಂತೆ ವಿವಿಧೆಡೆ ಗುಂಡಿ ಬಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ದಶಕದಿಂದ ಅನುದಾನ ಕಾಣದ ಗ್ರಾಮೀಣ ರಸ್ತೆಗಳ ಸ್ಥಿತಿಯಂತೂ ಹೇಳತೀರದು. ತಾಲ್ಲೂಕಿನ ಸಾರಗೋಡಿನಿಂದ ಆಲ್ದೂರು ಸಂಪರ್ಕಿಸುವ ಗ್ರಾಮೀಣ ರಸ್ತೆ ಐದು ವರ್ಷಗಳಿಂದ ಗುಂಡಿ ಬಿದ್ದಿದ್ದರೂ ಕನಿಷ್ಠ ಗುಂಡಿ ಮುಚ್ಚುವ ಕಾರ್ಯವನ್ನೂ ಮಾಡಿಲ್ಲ. ಸಾರಗೋಡು - ಕೂವೆ ರಸ್ತೆಯೂ ಗುಂಡಿಗಳಿಂದ ಕೂಡಿದೆ. ಮತ್ತಿಕಟ್ಟೆ ಬಿ. ಹೊಸಳ್ಳಿ ರಸ್ತೆ ಬಿ. ಹೊಸಳ್ಳಿ - ಕುಂಡ್ರ ರಸ್ತೆ ಮೂಡಿಗೆರೆ - ತತ್ಕೊಳ ರಸ್ತೆ ಕಡೆಮಾಡ್ಕಲ್- ಘಟ್ಟದಹಳ್ಳಿ ರಸ್ತೆ ಹೊಯ್ಸಳಲು ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಸವಾರರು ಹೈರಾಣಾಗುವಂತಾಗಿದೆ.
ಹೊಂಡ– ಗುಂಡಿಗಳ ರಸ್ತೆ
ಶೃಂಗೇರಿ ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಗ್ರಾಮಸ್ಥರು ಮತ್ತು ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೆರೆಯಿಂದ ಕೆರೆಮನೆಗೆ ಹೋಗುವ ರಸ್ತೆ ಧರೇಕೊಪ್ಪ ಪಂಚಾಯಿತಿಯ ಕೈಮನೆಯಿಂದ ಮೀಗಾ ರಸ್ತೆಗೆ ಹೋಗುವ ರಸೆ ಮೆಣಸೆ ಪಂಚಾಯಿತಿಯ ಕಾನೋಳ್ಳಿ ರಸ್ತೆ ತಾರೋಳ್ಳಿಕೊಡಿಗೆ ರಸ್ತೆ ಕಲಿಗೆ ರಸ್ತೆ ಕೆರೆ ಮತ್ತು ನೆಮ್ಮಾರ್ ಪಂಚಾಯಿತಿಯಲ್ಲಿ ಅತಿ ಹೆಚ್ಚು ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ಚರಂಡಿ ಎಲ್ಲಿವೆ ಎಂಬುದನ್ನು ಹುಡುಕಬೇಕು. ಜೋರು ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿ ಸಂಚಾರವೇ ದುಸ್ತರವಾಗಿದೆ. ರಸ್ತೆ ಹಾಳಾಗುತ್ತಿರುವ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಅರ್ಜಿ ನೀಡಿ ಒತ್ತಾಯಿಸಿದ್ದರು. ಆದರೆ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ದಿನ ಇದೇ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಪ್ರತಿ ದಿನವೂ ತಾಲ್ಲೂಕು ಕೇಂದ್ರಕ್ಕೆ ಬರುವ ಅನಿವಾರ್ಯತೆ ಇದ್ದು ಜನ ಪರದಾಡುತ್ತಿದ್ದಾರೆ. ಗ್ರಾಮೀಣ ರಸ್ತೆ ಅಭಿವೃದ್ಧಿ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂಬುದು ಕೆರೆಮನೆ ಗ್ರಾಮಸ್ಥರಾದ ರಮೇಶ್ ಹೆಗ್ಡೆ ಚಂದ್ರಶೇಖರ್ ವಾಸು ಮಂಜುನಾಥ್ ರಮೇಶ್ ಸಂತೋಷ್ ಹೆಗ್ಡೆ ಅನಿಲ್ ಅಭಿಜಿತ್ ಸುರೇಶ ಒತ್ತಾಯ. ಗ್ರಾಮೀಣ ರಸ್ತೆಗಳಿಗೆ ಯಾವುದೇ ಸರ್ಕಾರವಿರಲಿ ಹೆಚ್ಚಿನ ಆದ್ಯತೆ ನೀಡಬೇಕು. ಮಲೆನಾಡಿನಲ್ಲಿ ಪ್ರತಿ ವರ್ಷ 150 ರಿಂದ 180 ಇಂಚು ಮಳೆಯಾಗುತ್ತಿದ್ದು ರಸ್ತೆಗಳು ಹಾಳಾಗುತ್ತಿವೆ. ಗ್ರಾಮೀಣ ಭಾಗಕ್ಕೆ ಅನುದಾನ ನೀಡಿದರೆ ರಸ್ತೆಗಳು ಅಭಿವೃದ್ಧಿಯಾಗುತ್ತದೆ ಎಂದು ಕೆರೆಮನೆ ಅಂಜಲಿ ಹೇಳಿದರು.
ಎಲ್ಲೆಲ್ಲೂ ಗುಂಡಿ
ತರೀಕೆರೆ ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿ ರಸ್ತೆಗಳು ಮಳೆಗಾಲದ ಮುನ್ನವೇ ಹಾಳಾಗಿದ್ದವು. ಈಗ ಮಳೆಗಾಲದ ನಂತರ ಈ ರಸ್ತೆಗಳಲ್ಲಿ ಸಂಚಾರವೇ ದುಸ್ತರವಾಗಿದೆ. ರಾಷ್ಟ್ರೀಯ ಹೆದ್ದಾರಿ 206 ಕಾಮಗಾರಿಗಳಿಂದ ಭಾರಿ ವಾಹನಗಳ ಸಂಚಾರವೂ ಹೆಚ್ಚಾಗಿದ್ದು ರಸ್ತೆಗಳು ಛಿದ್ರಗೊಂಡಿವೆ. ದ್ವಿಚಕ್ರ ವಾಹನ ಮತ್ತು ಕಾರುಗಳ ಚಾಲಕರು ಸಂಚರಿಸುವುದೇ ಕಷ್ಟವಾಗಿದೆ. ಕೋಡಿ ಕ್ಯಾಂಪ್‌ನಿಂದ ಮಹಾತ್ಮ ಗಾಂಧಿ ವೃತ್ತದ ತನಕ ₹20 ಕೋಟಿ ಅಂದಾಜಿನಲ್ಲಿ ನಾಲ್ಕುಪಥದ ರಸ್ತೆ ಕಾಮಗಾರಿಗೆ ಟೆಂಡರ್ ಅನುಮೋದನೆಯಾಗುತ್ತಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಕಾಮಗಾರಿಯ ಆರಂಭವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗೇಂದ್ರಪ್ಪ ತಿಳಿಸಿದರು. ಅದೇ ರೀತಿ ಮಹಾತ್ಮ ಗಾಂಧಿ ವೃತ್ತದಿಂದ ದರ್ಗಾ ತನಕ ₹4 ಕೋಟಿ ವೆಚ್ಚದಲ್ಲಿ ನಾಲ್ಕುಪಥದ ರಸ್ತೆ ನಿರ್ಮಾಣದ ಯೋಜನೆಯೂ ಸರ್ಕಾರದ ಮುಂದಿದೆ. ಈ ರಸ್ತೆಗಳು ನಿರ್ಮಾಣವಾದರೆ ಪಟ್ಟಣದ ವಾಹನ ಸವಾರರ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜ್ಜೆಗೊಂದು ಗುಂಡಿ
ಶೃಂಗೇರಿ ಕೊಪ್ಪ ಬಾಳೆಹೊನ್ನೂರು ರಂಭಾಪುರಿ ಪೀಠ ಕಳಸ ಮುಂತಾದವುಗಳ ಊರುಗಳಿಗೆ ಆಲ್ದೂರು ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ 27ರ ಸಂಪೂರ್ಣ ಹದಗೆಟ್ಟಿದೆ. ಆಲ್ದೂರು ಬಿರಂಜಿ ಹೊಳೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ಮುಂಭಾಗ ಬನ್ನೂರು ಮಾಗೋಡು ಬಸರವಳ್ಳಿ ಮುಂತಾದ ಕಡೆಗಳಲ್ಲಿ ರಸ್ತೆಯಲ್ಲಿ ಹೊಂಡಗಳೇ ನಿರ್ಮಾಣವಾಗಿದೆ. ಪ್ರತಿದಿನವೂ ವಾಹನ ಸವಾರರು ಪ್ರಯಾಣಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಳೆಗಾಲ ಮುಗಿದ ಬಳಿಕ ದುರಸ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದು ಮಳೆಗಾಲ ಆರಂಭಕ್ಕೂ ಮುನ್ನವೇ ಕಾಮಗಾರಿ ನಡೆಸಲು ತೊಂದರೆ ಏನಿತ್ತು ಎಂಬುದು ಜನರ ಪ್ರಶ್ನೆ. ಮಳೆಗಾಲದಲ್ಲಿ ಹೆದ್ದಾರಿ ರಸ್ತೆಯ ಡಾಂಬರು ಕಿತ್ತು ಬರಲು ಮೂಲ ಕಾರಣ ಎಂದರೆ ನೀರು ಹರಿಯಲು ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದು. ಚರಂಡಿ ನಿರ್ಮಾಣ ಮಾಡಿದರೆ ರಸ್ತೆ ಹಾಳಾಗುವುದು ತಪ್ಪಲಿದೆ ಎಂದು ಹೇಳುತ್ತಾರೆ.
ಮುಖ್ಯ ರಸ್ತೆಗಳಲ್ಲಿ ಗುಂಡಿ
ಕೊಪ್ಪ ಗ್ರಾಮೀಣ ಭಾಗದ ರಸ್ತೆಗಳು ಮಾತ್ರವಲ್ಲದೆ ತಾಲ್ಲೂಕು ಕೇಂದ್ರವನ್ನು ಹಾದು ಹೋಗುವ ರಾಜ್ಯ ಹೆದ್ದಾರಿ ಜಿಲ್ಲಾ ಕೇಂದ್ರ ಮುಖ್ಯ ರಸ್ತೆಗಳೂ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರ ಜೀವಕ್ಕೆ ಕುತ್ತು ತರುವಂತಿವೆ. ಮಲ್ಪೆ ಮೊಳಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ತಾಲ್ಲೂಕಿನ ಕುದುರೆಗುಂಡಿ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಯೂ ಕಲ್ಕೆರೆ ಲೋಕನಾಥಪುರ ಜಯಪುರ ಬಳಿ ಅಲ್ಲಲ್ಲಿ ಗುಂಡಿ ಬಿದ್ದಿದ್ದು ಅದನ್ನು ತಪ್ಪಿಸಿ ವಾಹನ ಚಲಾಯಿಸುವುದು ಸವಾಲಿನ ಕೆಲಸವಾಗಿದೆ. ಇಲ್ಲಿ ಆಟೊ ಬೈಕ್ ಸವಾರರಿಗಂತೂ ಬಹು ಪ್ರಯಾಸದ ಪ್ರಯಾಣವಾಗಿದೆ. ಪಟ್ಟಣದ ಮೇಲಿನಪೇಟೆಯಿಂದ ಕೆಳಪೇಟೆವರೆಗೂ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದೆ. ವಾಟರ್ ಟ್ಯಾಂಕ್ ವೃತ್ತದಲ್ಲಿ ಪೊಲೀಸ್ ಠಾಣೆ ಬಳಿ ಮಾರ್ಕೆಟ್ ರಸ್ತೆಯಲ್ಲಿ ಗುಂಡಿ ತಪ್ಪಿಸಿ ಚಲಿಸುವುದು ಸವಾರರಿಗೆ ಸವಾಲಿನ ಕೆಲಸ. ಗುಂಡಿ ಬಿದ್ದ ರಸ್ತೆ ಬೈಕ್ ಸವಾರರ ಪ್ರಾಣಕ್ಕೆ ಕುತ್ತು ತರುವಂತಿದೆ. ಸಾಕಷ್ಟು ವರ್ಷಗಳ ಹಿಂದೆ ಇದ್ದ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರಿನ ರಸ್ತೆ ಮಾಡಲಾಗಿದೆ. ಇದು ಪ್ರತಿ ವರ್ಷ ಗುಂಡಿ ಬೀಳುತ್ತಿದ್ದು ಅದನ್ನು ಮುಚ್ಚುವ ಕೆಲಸ ನಿರಂತರವಾಗಿದೆ. 'ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ದುರಸ್ಥಿ ನಿರ್ವಹಣೆಗೆ ₹4 ಕೋಟಿ ವೆಚ್ಛದ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ದವಾಗಿ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಗುಂಡಿಮಯ
ಕಡೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಪರಿಸ್ಥಿತಿ ಸಮಾಧಾನಕರವಾಗಿದೆ. ಆದರೂ ಪಟ್ಟಣದೊಳಗೆ ಬಹಳಷ್ಟು ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆ ಎದುರಾಗಿದೆ. ಕಡೂರು ಪಟ್ಟಣದೊಳಗೆ ರಸ್ತೆಗಳು ಗುಂಡಿ ಬಿದ್ದು ಬಹುಕಾಲವಾದರೂ ಅದರತ್ತ ಸಂಬಂಧಿಸಿದವರ ಗಮನ ಹರಿದಿಲ್ಲ. ಇದರಿಂದ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 176 ಹಾದು ಹೋಗಿರುವ ಪಟ್ಟಣದಲ್ಲಿ ಶಾಸಕರ ಕಚೇರಿ ಎದುರೇ ಗುಂಡಿಗಳಾಗಿ ಎಷ್ಟೋ ದಿನವಾದರೂ ಅದನ್ನು ಮುಚ್ಚುವ ಕಾರ್ಯವಾಗಿಲ್ಲ. ಬಸವೇಶ್ವರ ವೃತ್ತದಲ್ಲಿ ವಿಜಯಲಕ್ಷ್ಮಿ ಚಿತ್ರಮಂದಿರ ಬಳಿ ರಸ್ತೆಯಲ್ಲಿ ಅರ್ಧ ಅಡಿಗೂ ಹೆಚ್ಚು ಆಳದ ಗುಂಡಿಗಳಾಗಿವೆ. ಬಸವೇಶ್ವರ ವೃತ್ತದ ಬಳಿ ರಸ್ತೆಯೊಳಗೆ ಇರುವ ನೀರಿನ ಪೈಪ್ ಒಡೆದು ಸದಾ ಕಾಲ ನೀರು ಹರಿಯುತ್ತಿರುತ್ತದೆ. ಅಂಬೇಡ್ಕರ್ ವೃತ್ತದ ಬಳಿ ಶಾಸಕರ ಕಚೇರಿಯೆದುರು ರಸ್ತೆ ಗುಂಡಿಗಳಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ತಂಗಲಿ ಕ್ರಾಸ್ ಬಳಿ ಆರಂಭವಾಗಿರುವ ಬೈ ಪಾಸ್ ರಸ್ತೆ ಬಳಿಯಿಂದ ಉಳುಕಿನಕಲ್ಲು ತನಕ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳಾಗಿದ್ದರೂ ಅದನ್ನು ಸರಿಪಡಿಸುವ ಕಾರ್ಯವಾಗಿಲ್ಲ. ಪಟ್ಟಣದ 2 ನೇ ವಾರ್ಡಿನಲ್ಲಿ ಕಲ್ಲುಹೊಳೆ ರಸ್ತೆ ಕಾಣೆಯಾಗಿ ಬಹು ದಿನಗಳಾಗಿವೆ. ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ವಾರ್ಡ್‌ಗಳಲ್ಲಿ ಈ ಪರಿಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ಎಮ್ಮೆ ದೊಡ್ಡಿಗೆ ಹೋಗುವ ರಸ್ತೆ ಪೂರ್ಣ ಹಾಳಾಗಿದೆ. ಖಂಡಗದಹಳ್ಳಿಯಿಂದ ಯಲ್ಲಂಬಳಸೆಗೆ ಹೋಗುವ ರಸ್ತೆಯೂ ಪೂರ್ಣ ಹದಗೆಟ್ಟಿದೆ. ಬಂಟಗನಹಳ್ಳಿಯಿಂದ ಸಿದ್ದರಹಳ್ಳಿ- ಲಕ್ಕಡೀಕೋಟೆಗೆ ಹೋಗುವ ರಸ್ತೆ ದುರಸ್ತಿಯಾಗಬೇಕಿದೆ.
ಎಲ್ಲ ಪ್ರಮುಖ ರಸ್ತೆಗಳಿಗೂ ಹಾನಿ
ಕಳಸ ತಾಲ್ಲೂಕು ವ್ಯಾಪ್ತಿಯ ಎಲ್ಲ ರಾಜ್ಯ ಹೆದ್ದಾರಿಗಳು ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಈ ಬಾರಿಯ ಮಳೆಯಿಂದ ಹಾನಿಗೀಡಾಗಿವೆ. ಮೊದಲೇ ಹದಗೆಟ್ಟಿದ್ದ ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಸ್ತೆಯ ದುಸ್ಥಿತಿಗೆ ಮಳೆ ಇನ್ನಷ್ಟು ಕೊಡುಗೆ ನೀಡಿದೆ. ಕಳಸ-ಕಳಕೋಡು ಕಳಸ-ಹೊರನಾಡು ಹೊರನಾಡು-ಬಲಿಗೆ ಹಳುವಳ್ಳಿ-ಹೊರನಾಡು ಕಳಸ-ಕೊಟ್ಟಿಗೆಹಾರ ರಸ್ತೆಗಳಿಗೆ ಅಪಾರ ಹಾನಿ ಉಂಟಾಗಿದೆ. ಈ ಪ್ರಮುಖ ರಸ್ತೆಗಳ ಪಕ್ಕದ ಚರಂಡಿಯನ್ನು ಮಳೆಗಾಲಕ್ಕೆ ಮುನ್ನವೇ ನಿರ್ವಹಣೆ ಮಾಡದ ಕಾರಣ ರಸ್ತೆಗಳು ಹಾಳಾಗಿವೆ. ಇದರೊಂದಿಗೆ ಕಳಸ ತಾಲ್ಲೂಕಿನ ಎಲ್ಲ ಗ್ರಾಮೀಣ ರಸ್ತೆಗಳು ಕೂಡ ತಮ್ಮ ಮೂಲ ಸ್ವರೂಪ ಕಳೆದುಕೊಂಡಿವೆ. ಮಳೆಗಾಲದ ನೀರೆಲ್ಲ ರಸ್ತೆ ಮೇಲೆಯೇ ಹರಿದಿದೆ. ಇದರಿಂದ ರಸ್ತೆ ಮೇಲೆ ಗುಂಡಿಗಳು ಮೂಡಿದ್ದು ರಸ್ತೆ ಪಕ್ಕದಲ್ಲೂ ಕಂದಕಗಳು ಸೃಷ್ಟಿ ಆಗಿವೆ. ಲೋಕೋಪಯೋಗಿ ಇಲಾಖೆಯು ಚರಂಡಿ ನಿರ್ವಹಣೆ ಕಾಮಗಾರಿಯನ್ನು ನವೆಂಬರ್ ತಿಂಗಳಿಂದ ಆರಂಭಿಸುತ್ತದೆ. ಆದರೆ ಮಲೆನಾಡಿನಲ್ಲಿ ಮಳೆಗಾಲಕ್ಕೂ ಮುನ್ನವೇ ರಸ್ತೆ ಪಕ್ಕದ ಚರಂಡಿ ತೆರೆಯುವ ಕೆಲಸ ಆಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ಮರಿಚಿಕೆಯಾದ ರಸ್ತೆ ಅಭಿವೃದ್ಧಿ
ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ 14 ಗ್ರಾಮ ಪಂಚಾಯಿತಿಗಳಿದ್ದು ಸುಮಾರು 400 ಕಿ.ಮೀ ಅಧಿಕ ಉದ್ದದ ಗ್ರಾಮೀಣ ಸಂಪರ್ಕ ರಸ್ತೆಗಳಿವೆ. ಇವುಗಳಲ್ಲಿ ಬಹುತೇಕ ಗ್ರಾಮಗಳ ರಸ್ತೆಗಳ ಅಭಿವೃದ್ಧಿ ಮರಿಚಿಕೆಯಾಗಿಯೇ ಉಳಿದಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಗ್ರಾಮೀಣ ಸಂಪರ್ಕ ಕಲ್ಪಿಸುವ ರಸ್ತೆಗಳು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಹಲವು ವಿವಿಧ ಯೋಜನೆಗಳಲ್ಲಿ ಅಭಿವೃದ್ಧಿಹೊಂದಿದೆ. ಹಿಂದೆ ಅಭಿವೃದ್ಧಿ ಹೊಂದಿದ್ದ ರಸ್ತೆಗಳು ಬಹುತೇಕ ರಸ್ತೆಗಳಿ ದುಸ್ಥಿತಿಗೆ ತಲುಪಿವೆ. ವಗ್ಗಡೆ ಕಬ್ಬಿಣ ಸೇತುವೆ ಚಿಬ್ಬುನಕುಡಿಗೆ ಕೆಳಸಸುತ್ತ ಮಾವಿನಮನೆ ಕವಲುವಾನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗುಬ್ಬಿಗಾ ಮತ್ತು ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ರಸ್ತೆ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಮಳೆಗಾಲದಲ್ಲಂತಲೂ ಗ್ರಾಮದ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಸಾಕಷ್ಟು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಮಾವಿನಮನೆ ಮಂಜುನಾಥ್ ತಿಳಿಸಿದರು. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳದಮನೆ ಬಕ್ರಿಹಳ್ಳ ಏತನೀರಾವರಿಗೆ ಹೋಗುವ ರಸ್ತೆ. ಸೂಸಲವಾನಿ ಗ್ರಾಮದ ವ್ಯಾಪ್ತಿಯ ಹಲವು ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಹಲವು ರಸ್ತೆಗಳ ಅಭಿವೃದ್ಧಿ ಕಂಡಿಲ್ಲ. ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಕೆಲವು ರಸ್ತೆಗಳು ಮಾತ್ರ ಅಭಿವೃದ್ಧಿ ಹೊಂದಿದೆ. ಬಹುತೇಕ ರಸ್ತೆಗಳು ಹಿಂದೆ ಜಲ್ಲಿಕಂಡಿದ್ದು ಬಿಟ್ಟರೆ ಡಾಂಬರ್ ಸಹ ಕಂಡಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಪೂರಕ ಮಾಹಿತಿ: ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್, ಬಾಲು ಮಚ್ಚೇರಿ, ಜೋಸೆಫ್ ಆಲ್ದೂರು, ಸತೀಶ್ ಜೈನ್, ರಾಘವೇಂದ್ರ ಕೆ.ಎನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.