ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನ ಗಿರೀಶ್‌ಗೆ ಕಂಚಿನ ಗರಿ

ಕ್ರೀಡೆಯಲ್ಲಿ ಸಾಧನೆಯ ಹೆಜ್ಜೆಗುರುತು
Last Updated 2 ಅಕ್ಟೋಬರ್ 2022, 5:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಏಳನೇ ಅಖಿಲ ಭಾರತ ಪೊಲೀಸ್‌ ಜೂಡೊ ಕ್ಲಸ್ಟರ್‌ ಟೂರ್ನಿಯಲ್ಲಿ ಚಿಕ್ಕಮಗಳೂರಿನ ಮಹಿಳಾ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಟಿ.ಎಸ್‌.ಗಿರೀಶ್ ಅವರು ಪೆಂಕಾಕ್‌ ಸಿಲಾತ್‌ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪೆಂಕಾಕ್‌ ಸಿಲಾತ್‌, ಕರಾಟೆ, ಟೆಕ್ವಾಂಡೊ ಸಹಿತ ಹಲವು ಕ್ರೀಡೆಗಳಲ್ಲಿ ಸಾಧನೆಯ ಹೆಜ್ಜೆಗುರುತು ಮೂಡಿಸಿದ್ದಾರೆ.

2018ರಲ್ಲಿ ಕೊಪ್ಪಳದಲ್ಲಿ ವಿಜಯ್‌ ಹಂಚಿನಾಳ್‌, ಆಕಾಶ್‌ ದೊಡ್ಡವಾಡ ಅವರಿಂದ ಪೆಂಕಾಕ್‌ ಸಿಲಾತ್‌ ತರಬೇತಿ ಪಡೆದರು. ಸತತ ಅಭ್ಯಾಸ ಮಾಡಿ ಕಲೆಯಲ್ಲಿ ಪಳಗಿ, ಜಿಲ್ಲೆಯ ಪೊಲೀಸ್‌ ಸಾಧನೆಯ ಹಾದಿಯಲ್ಲಿ ಮೈಲುಗಲ್ಲು ದಾಖಲಿಸಿದರು.
‘ಪೆಂಕಾಂಕ್‌ ಸಿಲಾತ್‌ ಸಂಸ್ಥೆಯ ಸಂಸ್ಥಾಪಕ ಅಬ್ದುಲ್‌ ರಜಾಕ್‌ ಅವರು ಈ ಕ್ರೀಡೆ ನನಗೆ ಪರಿಚಯಿಸಿದರು. ಕರಾಟೆ, ಟೆಕ್ವಾಂಡೊ, ಕುಸ್ತಿ ಮಿಳಿತದ ಕ್ರೀಡೆ ಪೆಂಕಾಕ್‌ ಸಿಲಾತ್‌. ಇದು ಇಂಡೊನೇಷ್ಯಾ ಮಾರ್ಷಲ್‌ ಆರ್ಟ್‌. ಈ ಕ್ರೀಡೆಯ ಆವಿರ್ಭಾವದ ಹಿಂದೆ ಭಾರತದ ಒಡಿಶಾದ ಕಳಿಂಗದ ಮೂಲ ಇದೆ’ ಎಂದು ಗಿರೀಶ್‌ ಹೇಳುತ್ತಾರೆ.
ಗಿರೀಶ್‌ ಅವರು ಚಿಕ್ಕಮಗಳೂರು ತಾಲ್ಲೂಕಿನ ತೊಂಡುವಳ್ಳಿಯ ಸಣ್ಣೇಗೌಡ ಮತ್ತು ಇಂದಿರಮ್ಮ ದಂಪತಿಯ ಪುತ್ರ. ನಗರದ ಬಸವನಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ, ವಿಶ್ವವಿದ್ಯಾಲಯ ಶಾಲೆಯಲ್ಲಿ ಪ್ರೌಢಶಾಲಾ, ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ (ಸಿವಿಲ್‌) ವಿದ್ಯಾಭ್ಯಾಸ ಮಾಡಿದ್ದಾರೆ. ಮುಕ್ತ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಕೊಕ್ಕೊ, ಕಬ್ಬಡಿ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಶಂಕರ್‌ನಾಗ್‌, ಬ್ರೂಸ್ಲಿ ಅವರ ಆ್ಯಕ್ಷನ್‌ ಸಿನಿಮಾಗಳನ್ನು ನೋಡಿ ಕರಾಟೆ ಕಲಿಯುವ ಹುಮ್ಮಸ್ಸು ಮೂಡಿ, ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಕರಾಟೆ ಕ್ಲಾಸ್‌ ಸೇರಿದರು.
‘ಕರಾಟೆ ಕಲಿಯಲೇಬೇಕು ಎಂದು ನಿರ್ಧರಿಸಿದ್ದೆ. ಆದರೆ, ಪೋಷಕರಿಗೆ ಕರಾಟೆ ಕಲಿಯುವುದು ಇಷ್ಟ ಇರಲಿಲ್ಲ. ದಿನಪತ್ರಿಕೆ, ಹಾಲು ಮನೆಗಳಿಗೆ ವಿತರಿಸಿ, ಮಂಡಿಯಲ್ಲಿ ತರಕಾರಿ ಚೀಲ ಹೊತ್ತು ಹಣ ಸಂಪಾದಿಸಿ ಕ್ರೀಡಾವಸ್ತ್ರ ಖರೀದಿಸಿದ್ದೆ, ತರಬೇತಿ ಶುಲ್ಕ ಪಾವತಿಸಿದ್ದೆ. ಡಿಪ್ಲೊಮಾ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾಗ ಗೊಜೊರಿಯಾ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದೆ’ ಎಂದು ಗಿರೀಶ್‌ ನೆನಪಿಸಿಕೊಳ್ಳುತ್ತಾರೆ.
1996ರಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್ ಆಗಿ ಕಳಸ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದೆ. ಆಗಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರೇಖರ್‌ ಅವರು ಕ್ರೀಡಾ ಪ್ರತಿಭೆ ಗುರುತಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಬಣಕಲ್‌, ಚಿಕ್ಕಮಗಳೂರು ನಗರ ಠಾಣೆ, ಸಂಚಾರ ಠಾಣೆ, ಗುಪ್ತಚರ ದಳ, ಡಿಸಿಐಬಿಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಅವರು ವೃತ್ತಿ ಬದುಕಿನ ಯಾನ ವಿವರಿಸುತ್ತಾರೆ.
ಕಳಸದಲ್ಲಿ ಕಾರ್ಯನಿರ್ವಹಿಸುವಾಗ ಕರಾಟೆ ಕ್ಲಾಸ್‌ ನಡೆಸಿ ಹಲವರಿಗೆ ತರಬೇತಿ ನೀಡಿದ್ದಾರೆ. 2005ರಲ್ಲಿ ಬೆಂಗಳೂರಿನಲ್ಲಿ ಪೊಲೀಸ್‌ ಟೆಕ್ವಾಂಡೊ ತಂಡ ನೋಡಿ ಅತ್ತ ಆಸಕ್ತಿ ಬೆಳೆಸಿಕೊಂಡು ಅದನ್ನು ಕಲಿತು ಆ ಕ್ರೀಡೆಯಲ್ಲೂ ಪಳಗಿ ಫೋರ್‌ ಡಾನ್‌ ಬ್ಲಾಕ್‌ ಬೆಲ್ಟ್‌ ಪದವಿ ಗೆದ್ದಿದ್ದಾರೆ. ಕರಾಟೆಯಲ್ಲಿ ಬ್ಲಾಕ್‌ ಬೆಲ್ಟ್‌ ಪಡೆದಿದ್ದಾರೆ. ಟೆಕ್ವಾಂಡೊ ಕ್ಲಬ್‌ ಸ್ಥಾಪಿಸಿ ಹಲವರಿಗೆ ಕಲಿಸಿದ್ದಾರೆ.
ವಿವೇಕಾನಂದ ಫಿಟ್‌ನೆಸ್‌ ಅಂಡ್‌ ಮಾರ್ಷಲ್‌ ಆರ್ಟ್‌ ಅಕಾಡೆಮಿ ಸ್ಥಾಪಿಸಿದ್ದಾರೆ. ಜೂಡೊ, ಕರಾಟೆ, ಟೆಕ್ವಾಂಡೊ, ಪೆಂಕಾಕ್‌ ಸಿಲಾತ್‌, ಸೇಲಂ ಬಾಂಬ್‌ (ದೊಣ್ಣೆವರಸೆ), ಜಂಪ್‌ರೋಪ್‌ (ಸ್ಕಿಪಿಂಗ್‌) ಸಹಿತ 10 ಕ್ರೀಡೆಗಳ ತರಬೇತಿ ನೀಡುತ್ತಾರೆ.

‘ಚಿನ್ನ ಗೆಲ್ಲುವ ಗುರಿ’

‘ಪೆಂಕಾಕ್‌ ಸಿಲಾತ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಇದೆ. ಆ ನಿಟ್ಟಿನಲ್ಲಿ ಅಭ್ಯಾಸದಲ್ಲಿ ತೊಡಗಿದ್ದೇನೆ. ಕಲಿತ ವಿದ್ಯೆ ಇನ್ನೊಬ್ಬರಿಗೆ ತಲುಪಬೇಕು ಎಂಬುದು ಆಶಯ. ಸುಮಾರು 10 ಸಾವಿರ ಮಂದಿಗೆ ತರಬೇತಿ ನೀಡಿದ್ದೇನೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಮಾನ್ಯತೆ ಪಡೆದ ಆಟಗಳ ತರಬೇತಿ ನೀಡುತ್ತೇವೆ. ಕೆಲವರು ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮೆರೆದು ಪ್ರಶಸ್ತಿ ಪಡೆದಿದ್ದಾರೆ. ಕ್ರೀಡಾ ಕೋಟಾದಲ್ಲಿ ವಿದ್ಯಾಭ್ಯಾಸಕ್ಕೆ ಸೀಟು, ಉದ್ಯೋಗ ಪಡೆದುಕೊಂಡಿದ್ದಾರೆ’ ಎಂದು ಗಿರೀಶ್‌ ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT