ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ನಗರದ ರಸ್ತೆಗಳು ಗುಂಡಿ, ದೂಳುಮಯ

ಅನಾರೋಗ್ಯಕ್ಕೆ ತುತ್ತಾಗುತ್ತಿರುವ ನಿವಾಸಿಗಳು
Last Updated 23 ಡಿಸೆಂಬರ್ 2018, 19:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ ‘24*7ಅಮೃತ್ ಕುಡಿಯುವ ನೀರಿನ ಯೋಜನೆ’ ಕಾಮಗಾರಿ ಪ್ರಗತಿಯಲ್ಲಿದ್ದು, ದೂಳಿನಿಂದ ಕೆಲ ಬಡಾವಣೆ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಜಯನಗರ, ಬಸವನಹಳ್ಳಿ, ಕುವೆಂಪುನಗರ, ಕೋಟೆ, ರಾಮನಹಳ್ಳಿ, ಕೆಂಪನಹಳ್ಳಿ, ಕ್ರಿಶ್ಚಿಯನ್ ಕಾಲೋನಿ, ವಿಜಯಪುರ, ಗೌರಿ ಕಾಲುವೆ, ಕಾಳಿದಾಸನಗರ ಒಳಗೊಂಡಂತೆ ಬಹುತೇಕ ವಾರ್ಡ್‌ಗಳಲ್ಲಿ ಅಮೃತ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಪೈಪ್ ಅಳವಡಿಸಲು ಗುಂಡಿ ಅಗೆದು, ಮುಚ್ಚಿದ ಮೇಲೆ ದೂಳಿನ ಅಬ್ಬರ ನಿತ್ಯ ಹೆಚ್ಚಾಗಿದೆ. ದೂಳಿನಿಂದಾಗಿ ನಿವಾಸಿಗಳು ಕೆಮ್ಮು, ನೆಗಡಿ, ಕಫ, ವಾಂತಿ, ಭೇದಿ, ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಕಾಮಗಾರಿಗೆ ಅಗೆದ ಮಣ್ಣನ್ನು ಪಕ್ಕದಲ್ಲಿಯೇ ಹಾಕುವುದರಿಂದ ರಸ್ತೆಗಳು ಕಿರಿದಾಗಿವೆ. ರಸ್ತೆಗಳಲ್ಲಿ ಮಣ್ಣಿನ ದಿಣ್ಣೆಗಳು ಏರ್ಪಟ್ಟಿವೆ. ರಸ್ತೆಗೆ ಅಡ್ಡಲಾಗಿ ಕಾಮಗಾರಿ ನಡೆಸಿರುವ ಕಡೆ, ಮಣ್ಣು ಕುಸಿದು ಗುಂಡಿಗಳು ಆಗಿವೆ. ಬೈಕ್, ಆಟೋ ಹಾಗೂ ತೆರೆದ ವಾಹನಗಳ ಸವಾರರು ವಾಹನ ಚಲಾಯಿಸಲು ಹರಸಾಹಸ ಪಡುವುದರ ಜತೆಗೆ, ದೂಳಿನಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಕಾಮಗಾರಿ ನಡೆಯುತ್ತಿರುವ ಬಡಾವಣೆಗಳಲ್ಲಿ ಸಣ್ಣ ಪ್ರಮಾಣದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪಾದಾಚಾರಿಗಳು ದೂಳು ಸಹಿಸಿಕೊಂಡು ಓಡಾಡುವಂತಾಗಿದೆ. ಮನೆಯ ಎದುರು ನಿಲ್ಲಿಸುವ ವಾಹನಗಳಿಗೆ ದೂಳು ಆವರಿಸಿರುತ್ತದೆ. ರಸ್ತೆಯ ದೂಳು ಉಸಿರಾಡುವ ಗಾಳಿ ಒಳಗೊಂಡಂತೆ ಮನೆಯಲ್ಲಿನ ಕುಡಿಯುವ ನೀರು, ತೆರೆದಿಟ್ಟ ಆಹಾರ ಸೇರುತ್ತಿದೆ. ಅದರ ಪರಿಣಾಮ ಜನರು ಆಸ್ಪತ್ರೆಗೆ ಹೆಚ್ಚೆಚ್ಚು ಅಲೆದಾಡುವಂತಾಗಿದೆ.

‘ದೂಳಿನಿಂದಾಗಿ ಸಾಮಾನ್ಯವಾಗಿ ಕೆಮ್ಮು, ನೆಗಡಿ, ವಾಂತಿ, ಭೇದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೂಳಿನ ಕಣಗಳಿಂದ ಕಣ್ಣು ಕೆಂಪಾಗಿ, ಚುಚ್ಚಿದಂತಾಗುತ್ತಾದೆ. ಕಣ್ಣಿನಿಂದ ನೀರು ಹಾಗೂ ಕೀವು ರೀತಿಯ ದ್ರವ ಹೊರಬರುತ್ತದೆ. ಅದು ಹಾಗೇಯೆ ಮುಂದುವರಿದಲ್ಲಿ ದೃಷ್ಠಿಗೆ ಹಾನಿಯಾಗುತ್ತದೆ. ದೂಳಿನಿಂದ ಮೂಗಿನಲ್ಲಿ ಅಲರ್ಜಿ ಉಂಟಾಗುತ್ತದೆ. ದೂಳು ಉಸಿರಾಟದ ನಾಳ ಸೇರಿದರೆ ಅಸ್ತಮ ಬರುತ್ತದೆ’ ಎಂದು ಕಣ್ಣು, ಮೂಗು, ಗಂಟಲು ತಜ್ಞೆ ಡಾ.ಗೀತಾವೆಂಕಟೇಶ್ ಹೇಳಿದರು.

ಕಾಮಗಾರಿಯಿಂದಾಗಿ ಡಾಂಬರು ರಸ್ತೆಯು, ಮಣ್ಣಿನ ರಸ್ತೆಯಂತಾಗಿದೆ. ಮನೆಯ ಅಡುಗೆ ಕೋಣೆಗೂ ದೂಳು ಬರುತ್ತದೆ. ಅಂಗಡಿಯಲ್ಲಿನ ವಸ್ತುಗಳು ಮತ್ತು ತೆರೆದಿಟ್ಟ ತರಕಾರಿಗಳ ಮೇಲೆ ದೂಳು ಕೂರುತ್ತದೆ. ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಮತ್ತೆ ದೂಳು ಕೂರುತ್ತದೆ ಎಂದು ಜಯನಗರದ ಶಿವು ಸ್ಟೋರ್ ಮಾಲೀಕ ಶಿವು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT