ಬಂದ್‌: ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

7

ಬಂದ್‌: ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

Published:
Updated:

ಚಿಕ್ಕಮಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇದೇ 10ರಂದು ಬಂದ್‌ಗೆ ಕರೆ ನೀಡಿವೆ. ಜೆಡಿಎಸ್‌, ಬಿಎಸ್‌ಪಿ,ಸಿಪಿಐ ಮತ್ತು ವಿವಿಧ ಸಂಘಟನೆಗಳು ಬಂದ್‌ ಬೆಂಬಲಿಸಿವೆ.

ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರಿಗೆ ಬಂದ್‌ ನಡೆಯಲಿದೆ. ಕರವೇ ಯುವಸೇನೆ ಘಟಕ, ಆಟೊ–ಲಾರಿ ಮಾಲೀಕರು, ಚಾಲಕರ ಸಂಘ, ಇತರ ಕೆಲ ಸಂಘಟನೆಗಳು ಬಂದ್‌ಗೆ ಬಂಬಲ ವ್ಯಕ್ತಪಡಿಸಿವೆ. ಆಸ್ಪತ್ರೆ, ಔಷಧ ಅಂಡಿಗಳು, ಹಾಲು ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಬಂದ್‌ ನೇತೃತ್ವ ವಹಿಸಿರುವ ಮುಖಂಡರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನೋಡಿಕೊಂಡು ಬಸ್‌ಗಳ ಸಂಚಾರ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಂದೋಬಸ್ತ್‌ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ನಿಗಾ ವಹಿಸಿದೆ. ಆಯಕಟ್ಟಿನ ಸ್ಥಳಗಳು, ಪ್ರಮುಖ ವೃತ್ತಗಳು ಇತರೆಡೆಗಳಲ್ಲಿ ಭದ್ರತೆ ನಿಯೋಜಿಸಲು ಕ್ರಮ ವಹಿಸಿದೆ.

ಬಂದ್ ಕರೆಗೆ ಜಿಲ್ಲೆಯ ವರ್ತಕರು ಸೇರಿದಂತೆ ವಾಹನ ಚಾಲಕರು ಸ್ಪಂದಿಸಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವು ಪೆಟ್ರೋಲ್, ಡಿಸೆಲ್, ಎಲ್‌ಪಿಜಿ ದರ ಏರಿಕೆ ಮಾಡಿರುವುದು ಎಷ್ಟು ಸರಿ? ಇದರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ ಇಂದು

ಬಂದ್‌ ನಿಮಿತ್ತ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಶ್ರೀರಂಗಯ್ಯ ತಿಳಿಸಿದ್ದಾರೆ.

ಬಂದ್‌ನಿಂದಾಗಿ ವಾಹನ, ಬಸ್ಸುಗಳ ಸಂಚರಿಸದಿರುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಬಂದ್ ಕರೆ ಹಾಸ್ಯಾಸ್ಪದ: ವರಸಿದ್ಧಿ

ಕಾಂಗ್ರೆಸ್ ಪಕ್ಷವು ಭಾರತ್ ಬಂದ್ ಕರೆ ನೀಡಿರುವುದ ಹಾಸ್ಯಾಸ್ಟದವಾಗಿದೆ ಎಂದು ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಟೀಕಿಸಿದ್ದಾರೆ.

ರಾಜ್ಯಸರ್ಕಾರ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೆಸ್‍ ಏರಿಸಿ ಸಾರ್ವಜನಿಕರಿಗೆ ಹೊರೆ ಮಾಡಿದೆ. ಈಗ ಕೇಂದ್ರಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಪೆಟ್ರೋಲ್, ಡೀಸೆಲ್‍ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಒಪ್ಪಿಗೆ ಸೂಚಿಸಬೇಕೆಂದು ಮನವಿ ಮಾಡಿತ್ತು. ಇದಕ್ಕೆ? ರಾಜ್ಯದ ಸಮ್ಮಿಶ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಯ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಾಟಕವಾಡುತ್ತಿದೆ ಎಂದು ಪ್ರಕಟಣೆಯಲ್ಲಿ ದೂಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !