ಅಳತೆಯಲ್ಲಿ ಗೋಲ್‌ಮಾಲ್‌– ದೂರು: ಜನಾಕ್ರೋಶ

7
ಕೆಎಸ್‌ಆರ್‌ಟಿಸಿ ನಿಲ್ದಾಣ ಬಳಿಯ ಎಚ್‌ಪಿ ಪೆಟ್ರೋಲ್‌ ಬಂಕ್‌

ಅಳತೆಯಲ್ಲಿ ಗೋಲ್‌ಮಾಲ್‌– ದೂರು: ಜನಾಕ್ರೋಶ

Published:
Updated:
Deccan Herald

ಚಿಕ್ಕಮಗಳೂರು: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಹಿಂದೂಸ್ತಾನ್‌ ಪೆಟ್ರೋಲಿಯಂನ ಬಂಕ್‌ನಲ್ಲಿ ಅಳತೆಯಲ್ಲಿ ಗೋಲ್‌ಮಾಲ್‌ ಮಾಡಿ ಗ್ರಾಹಕರಿಗೆ ವಂಚಿಸಲಾಗುತ್ತಿದೆ ಎಂದು ಗುರುವಾರ ಜನರು ಆಕ್ರೋಶ ವ್ಯಕ್ತಪಡಿಸಿದರು. ಬಂಕ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಅಳತೆಯಲ್ಲಿ ಪೆಟ್ರೋಲ್‌ ವಂಚಿಸಿದ್ದಾರೆ ಎಂದು ಗ್ರಾಹಕರೊಬ್ಬರು ಬಂಕ್‌ನಲ್ಲಿ ಸಿಬ್ಬಂದಿಯೊಂದಿಗೆ ತಕರಾರು ಮಾಡಿದರು. ಸುತ್ತಮುತ್ತಲಿನ ಜನರು ಬಂಕ್‌ ಆವರಣದಲ್ಲಿ ಜಮಾಯಿಸಿದರು. ಬಂಕ್‌ ಸಿಬ್ಬಂದಿ ಮತ್ತು ಜನರ ನಡುವೆ ಕೆಲಕಾಲ ಜಟಾಪಟಿ ನಡೆಯಿತು. ಪೆಟ್ರೋಲ್‌ ಹಾಕುವ ಹುಡುಗ ಗಿಮಿಕ್‌ ಮಾಡಿರಬಹುದು ಎಂದು ಬಂಕ್‌ ಸಿಬ್ಬಂದಿ ಸಮಜಾಯಿಷಿ ನೀಡಿದರು.

ನಗರದ ರಾಮನಹಳ್ಳಿಯ ಶಿವರಾಜ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘₹ 100ಕ್ಕೆ ಅರ್ಧ ಲೀಟರ್‌ ಪೆಟ್ರೋಲ್ ಹಾಕಿದ್ದಾರೆ. ಬೈಕಿಗೆ ಹಾಕಿಸಿದ ಪೆಟ್ರೋಲ್‌ ಅಳತೆ ಮಾಡಿದಾಗ ಗೋಲ್‌ಮಾಲ್‌ ಗೊತ್ತಾಯಿತು. ಅಳತೆಯಲ್ಲಿ ವಂಚಿಸಿ, ಗ್ರಾಹಕರಿಂದ ಲೂಟಿ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಡಾಕ್‌– ಎಕ್ಸ್‌ಎಲ್‌ನ ಸಹಯೋಗಿ ಬಂಕ್‌ ಇದು. ಈ ಬಂಕ್‌ ಅನ್ನು ನಾನು ನಡೆಸುತ್ತಿದ್ದೇನೆ. ನಾವು ವಂಚನೆ ಮಾಡಿಲ್ಲ. ಮೋಸ ಆಗಿದ್ದರೆ ಸಂಬಂಧಪಟ್ಟವರು ಪರಿಶೀಲಿಸಿ ಕ್ರಮಕೈಗೊಳ್ಳಲಿ’ ಎಂದು ಬಂಕ್‌ ನಿರ್ವಹಿಸುತ್ತಿರುವ ಶಯಿಬ್‌ ಅಲಿ ಹೇಳಿದರು.

ಬಂಕ್‌ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಇತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಪೊಲೀಸರು ಜನರನ್ನು ನಿಯಂತ್ರಿಸಿದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಜಮಾಯಿಸಿದ್ದ ಜನರು ಪಟ್ಟು ಹಿಡಿದರು. ವಿವಿಧ ಪೆಟ್ರೋಲ್‌ ಬಂಕ್‌ಗಳ ಮಾಲೀಕರು ಸ್ಥಳದಲ್ಲಿ ಇದ್ದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಭಾರ ಉಪನಿರ್ದೇಶಕ ಮಹೇಶ್ವರಪ್ಪ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ‘ಬಂಕ್‌ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ ನೀಡಿದ್ದೇನೆ. ತೂಕ ಮತ್ತು ಮಾಪನ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಪ್ರಸನ್ನ ಅವರು ಮಾಪನ ಯಂತ್ರ ಪರಿಶೀಲಿಸುವರು. ಗೋಲ್‌ಮಾಲ್‌ ಪತ್ತೆಯಾದರೆ ಕ್ರಮ ಜರುಗಿಸಲಾಗುವುದು’ ಎಂದು ಮಹೇಶ್ವರಪ್ಪ ತಿಳಿಸಿದರು.

ಪೆಟ್ರೋಲ್‌ ಅಳತೆ ಮಾಡಿ ಪರಿಶೀಲನೆ ಮಾಡಬೇಕು. ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಜನರು ಆಗ್ರಹಿಸಿದರು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಜನರನ್ನು ಚದುರಿಸಿದರು.

 

 

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !