ಚಿಕ್ಕಮಗಳೂರು: ಜಲಜೀವನ್ ಮಿಷನ್ ಯೋಜನೆ(ಜೆಜೆಎಂ) ಪೂರ್ಣಗೊಳ್ಳದೆ ತೊಂದರೆಯಾಗಿದೆ, ಶಾಲಾ ಕಟ್ಟಡಗಳಿಲ್ಲ, ಬಸ್ ಸಂಚಾರಕ್ಕೆ ರಸ್ತೆಯಿಲ್ಲ, ಉದ್ಯೋಗ ಖಾತ್ರಿ ಯೋಜನೆ ಬಿಲ್ ಬಾಕಿ ಇದೆ, ಸ್ಮಶಾನಕ್ಕೆ ಜಾಗ ಬೇಕು... ಇಂತಹ ಹಲವು ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಾರ್ವಜನಿಕರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಅವರ ಬಳಿ ಹೇಳಿಕೊಂಡರು.
‘ಪ್ರಜಾವಾಣಿ’ ವತಿಯಿಂದ ಗುರುವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ದೂರವಾಣಿ ಕರೆಗಳ ಮಾಹಾಪೂರವೇ ಹರಿದು ಬಂತು. ಹಲವು ಸಮಸ್ಯೆಗಳನ್ನು ಜಿಪಂ ಸಿಇಒ ಮುಂದೆ ಜನ ತೆರೆದಿಟ್ಟರು. ಎಲ್ಲವನ್ನೂ ಆಲಿಸಿದ ಅವರು, ಸಮಾಧಾನದಿಂದ ಉತ್ತರಿಸಿದರು.
ಫೋನ್‌ಇನ್ ಕಾರ್ಯಕ್ರಮ ಮುಗಿದ ಕೂಡಲೇ ಕರೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆಯನ್ನೂ ಕೆಲವರಿಗೆ ನೀಡಿದರು. ಕೆಲವರ ದೂರವಾಣಿ ಸಂಖ್ಯೆಯನ್ನು ಸ್ವತಃ ಬರೆದುಕೊಂಡರು. ಸಮಸ್ಯೆ ಬಗೆಹರಿಸಿ ಕರೆ ಮಾಡಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ಹಲವರು ಅಲವತ್ತುಕೊಂಡರು. ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಇಲ್ಲದೆ ಊರಿನ ಕೆಲಸಗಳು ಆಗುತ್ತಿಲ್ಲ ಎಂದು ಮತ್ತೊಬ್ಬರು ತೊಂದರೆ ಹೇಳಿಕೊಂಡರು. ‘ಶಾಲೆಯಲ್ಲಿ ಮಕ್ಕಳಿದ್ದಾರೆ, ಜಾಗವೂ ಇದೆ, ಶಾಲಾ ಕಟ್ಟಡ ಮಾತ್ರ ಸರಿಯಿಲ್ಲ. ಊರಿನ ಮಕ್ಕಳಿಗಾಗಿ ಶಾಲಾ ಕಟ್ಟಡ ನಿರ್ಮಿಸಿಕೊಡಿ’ ಎಂದು ಮಹಲ್ ಗ್ರಾಮ ಮಂಜು ಮನವಿ ಮಾಡಿಕೊಂಡರು.
‘ಜಲಜೀವನ್ ಮಷಿನ್ ಯೋಜನೆ ನಾಲ್ಕು ಹಂತಗಳಲ್ಲಿ ನಡೆಯುತ್ತಿದ್ದು, ನಾಲ್ಕನೇ ಹಂತದಲ್ಲೇ ಶೇ 50ರಷ್ಟು ಕಾಮಗಾರಿಗಳಿವೆ. ಆದಷ್ಟು ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ 226 ಗ್ರಾಮ ಪಂಚಾಯಿಗಳಿದ್ದು, 190 ಗ್ರಾಪಂಗಳಲ್ಲಿ ಪಿಡಿಒಗಳಿದ್ದಾರೆ. ಖಾಲಿ ಇರುವ ಹುದ್ದೆಗಳಿಗೆ ಪಿಡಿಒಗಳನ್ನು ನೇಮಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಒಂದೆರಡು ವಾರಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಮಹಲ್ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಿಸುವ ವಿಷಯದಲ್ಲಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಿಇಒ ಭರವಸೆ ನೀಡಿದರು.
‘ಫೋನ್‌ಇನ್ ಕಾರ್ಯಕ್ರಮದಿಂದ ಸಮಸ್ಯೆ ಎಲ್ಲಿದೆ ಎಂಬುದು ಅರ್ಥವಾಯಿತು. ಪ್ರತಿನಿತ್ಯ ಜನರ ನಡುವೆ ನಮ್ಮ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜನರ ನಿರೀಕ್ಷೆ ಮಟ್ಟಕ್ಕೆ ತಲುಪಲು ಇನ್ನೂ ಕೆಲಸ ಮಾಡಬೇಕಿದೆ ಎನಿಸಿತು. ಜನರು ಹೇಳಿಕೊಂಡಿರುವ ತೊಂದರೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಬಗೆಹರಿಸಲಾಗುವುದು’ ಎಂದು ಹೇಳಿದರು.
ಸಾರ್ವಜನಿಕರು ಕೇಳಿದ ಪ್ರಶ್ನೆ ಮತ್ತು ಸಿಇಒ ನೀಡಿರುವ ಉತ್ತರದ ಆಯ್ದ ಭಾಗ ಇಲ್ಲಿದೆ.
ಸಹಾಯವಾಣಿ ತೆರೆಯಲು ಆಲೋಚನೆ
‘ಜನರ ಕುಂದು–ಕೊರತೆ ಆಲಿಸಲು ಪಾಲಿಕೆಗಳ ಮಾದರಿಯಲ್ಲಿ ಸಹಾಯವಾಣಿ ತೆರೆಯಲು ಆಲೋಚಿಸಲಾಗಿದೆ. ಪ್ರಾಯೋಗಿಕವಾಗಿ ವಾಟ್ಸ್‌ಆ್ಯಪ್ ನಂಬರ್ ನೀಡಿ ಬೆಳಿಗ್ಗೆಯಿಂದ ಸಂಜೆ ತನಕ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು’ ಎಂದು ಡಾ.ಬಿ.ಗೋಪಾಲಕೃಷ್ಣ ತಿಳಿಸಿದರು. ‘ಸದ್ಯಕ್ಕೆ ಜನ ಯಾವುದೇ ಸಮಸ್ಯೆಗಳಿದ್ದರೂ ನನಗೆ ನೇರವಾಗಿ ಕರೆ ಮಾಡಿ(ದೂರವಾಣಿ ಸಂಖ್ಯೆ 9480860000) ಸಮಸ್ಯೆ ಹೇಳಿಕೊಳ್ಳಬಹುದು’ ಎಂದರು.
ನಿವೇಶನ ಹಂಚಿಕೆಗೆ ಕ್ರಮ
ವಸತಿ ರಹಿತರ ಸಂಖ್ಯೆ ಜಿಲ್ಲೆಯಲ್ಲಿ 1 ಲಕ್ಷದಷ್ಟಿದೆ ಎಂಬ ಮಾಹಿತಿ ಪಡೆದುಕೊಂಡಿದ್ದೇನೆ. ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಇಒ ಹೇಳಿದರು. ‘ನಿವೇಶನ ಇದ್ದರೆ ಮಾತ್ರ ವಸತಿ ಯೋಜನೆ ಲಾಭ ಪಡೆಯಬಹುದು. ಆದರೆ ಜಿಲ್ಲೆಯಲ್ಲಿ ಹಲವರಿಗೆ ನಿವೇಶನ ಇಲ್ಲ ನಿವೇಶನ ಕೊಡಿಸುವ ಕೆಲಸ ಆಗಬೇಕಿದೆ’ ಎಂದರು.
ಜಿಪಂ ಕಚೇರಿಯಲ್ಲಿ ಸಂಪೂರ್ಣ ಇ–ಆಡಳಿತ
‘ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಂಪೂರ್ಣ ಇ–ಆಡಳಿತ ಇದೆ. ಯಾರ ಬಳಿಯೂ ಕಡತ ವಿಲೇವಾರಿ ವಿಳಂಬ ಆಗುವುದಿಲ್ಲ. ಆದ್ದರಿಂದ ಜನ ಮಧ್ಯವರ್ತಿಗಳ ಮೊರೆ ಹೋಗಬಾರದು’ ಎಂದು ಸಿಇಒ ಗೋಪಾಲಕೃಷ್ಣ ಮನವಿ ಮಾಡಿದರು. ‘ಶೇ 100ರಷ್ಟು ಇ–ಆಡಳಿತ ವ್ಯವಸ್ಥೆ ಇದೆ. ತಾಲ್ಲೂಕು ಪಂಚಾಯಿತಿಯಲ್ಲೂ ಇ–ಆಡಳಿತ ವ್ಯವಸ್ಥೆ ಇದ್ದು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಇ–ಆಡಳಿತ ಸಂಪರ್ಣ ಬಳಿಕೆಗೆ ಸೂಚನೆ ನೀಡಲಾಗುವುದು. ಶಿಕ್ಷಣ ಇಲಾಖೆ ಸೇರಿ ಜಿಪಂ ಅಡಿಯಲ್ಲಿರುವ ಹಲವು ಇಲಾಖೆಗಳಲ್ಲಿ ಇನ್ನೂ ಇ–ಆಡಳಿತ ಇಲ್ಲ. ಸಂಪೂರ್ಣ ಇ–ಆಡಳಿತವಾದರೆ ಮಧ್ಯವರ್ತಿಗಳ ಹಾವಳಿ ಮತ್ತು ಲಂಚಕ್ಕೆ ಅವಕಾಶ ಇರುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.