ಮಂಗಳವಾರ, ಮೇ 17, 2022
25 °C
ಎನ್‌.ಆರ್‌.ಪುರ ಜೆಡಿಎಸ್ ತಾಲ್ಲೂಕು ಘಟಕದ ಕಚೇರಿ ಉದ್ಘಾಟನೆ

ಪ್ರಾದೇಶಿಕ ಪಕ್ಷದಿಂದ ರಾಜ್ಯದ ಅಭಿವೃದ್ಧಿ: ಎಚ್.ಟಿ.ರಾಜೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ಬರುವುದು ಅವಶ್ಯಕ ಎಂದು ಜೆಡಿಎಸ್ ಮುಖಂಡ ಎಚ್.ಟಿ.ರಾಜೇಂದ್ರ ತಿಳಿಸಿದರು.

ಪಟ್ಟಣದ ಹಳೇಪೇಟೆಯಲ್ಲಿ ಗುರುವಾರ ತಾಲ್ಲೂಕು ಜೆಡಿಎಸ್ ಘಟಕದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ‘ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ರಾಜ್ಯದ 23 ಸಂಸದರಿದ್ದಾರೆ. ಈ ಭಾಗದ ಸಂಸದೆ ಶೋಭಾ ಕರಂದ್ಲಾಜೆ ಸಚಿವರಾಗಿದ್ದರೂ, ರಾಜ್ಯದ ಬಗ್ಗೆಯಾಗಲಿ, ಕ್ಷೇತ್ರದ ಸಮಸ್ಯೆ ಬಗ್ಗೆಯಾಗಲಿ ಸಂಸತ್‌ನಲ್ಲಿ ಚಕಾರ ಎತ್ತಿಲ್ಲ’ ಎಂದು ಆರೋಪಿಸಿದರು.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮದೇ ಆದ ಗೌಪ್ಯ ಕಾರ್ಯಚರಣೆ ಮೂಲಕ ಕಾರ್ಯನಿರ್ವಹಿಸುತ್ತಿವೆ. ಜನರ ಸಮಸ್ಯೆ ಬಗೆಹರಿಸುವ ಬದಲು ಹಿಜಾಬ್, ಹಲಾಲ್ ವಿಚಾರ ಮುನ್ನೆಲೆಗೆ ತರುವ ಮೂಲಕ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಬದುಕುವ, ವ್ಯಾಪಾರ ಮಾಡುವ, ಉದ್ಯೋಗ ಮಾಡುವ ಹಕ್ಕಿದೆ. ಸಂವಿಧಾನದ ವಿರುದ್ಧ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ,  ನೈತಿಕ ಪೊಲೀಸ್ ಗಿರಿ ಮಾಡುವ ಸಂಘಟನೆಗಳನ್ನು ನಿಯಂತ್ರಿಸುವಲ್ಲಿ ಮುಖ್ಯ ಮಂತ್ರಿ ವಿಫಲರಾಗಿದ್ದಾರೆ ಎಂದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ, ‘ಕ್ಷೇತ್ರದ ವ್ಯಾಪ್ತಿಯಲ್ಲಿ ಅರಣ್ಯ ಸಮಸ್ಯೆ, ಆಶ್ರಯ ಸಮಸ್ಯೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳಿದ್ದರೂ ಹಾಲಿ ಶಾಸಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಇದರ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡದೆ ಮತ  ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ, ಬಡವರ ಧ್ವನಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹೋರಾಟ ರೂಪಿಸುತ್ತಿದೆ’ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಎಚ್. ದಿವಾಕರ ಭಟ್, ವಿನಯ್ ಕಣಿವೆ, ಅಬ್ದುಲ್ ಸುಬಾನ್, ಎಂ.ಓ.ಜೋಯಿ, ಕೆ.ಎನ್.ಶಿವದಾಸ್, ಕೆ.ವಿ.ವಸಂತಕುಮಾರ್, ಸತ್ಯನಾರಾಯಣ ಶ್ರೇಷ್ಠಿ, ಉಪೇಂದ್ರ, ಸಿಜು, ನಾಗೇಶ್, ಜಾನಕೀರಾಂ, ಎಂ.ಮಹೇಶ್ ಇದ್ದರು.

‘ಬೆಂಕಿ ಹಚ್ಚುವುದೇ ಕೆಲಸ’
‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನುಷ್ಯತ್ವ ಮರೆತು ವರ್ತಿಸುತ್ತಿದ್ದಾರೆ. ಅವರಿಗೆ ಸಮಾಜದಲ್ಲಿ ಬೆಂಕಿ ಹಚ್ಚುವುದೇ ಕೆಲಸವಾಗಿದೆ’ ಎಂದು ಜೆಡಿಎಸ್ ಮುಖಂಡ ಎಚ್.ಟಿ.ರಾಜೇಂದ್ರ ದೂರಿದರು.

ಸಮಾಜದಲ್ಲಿ ಸಾಮರಸ್ಯ ಮುಖ್ಯವಾಗಿದೆ. ಧರ್ಮಗಳ ನಡುವೆ ಒಡಕು ಉಂಟಾದರೆ ಅಭಿವೃದ್ಧಿ ಸಾಧ್ಯವಿಲ್ಲ. ಉದ್ಯೋಗ ಭದ್ರತೆ, ಸಾಮರಸ್ಯ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.