ಅಧಿಕಾರ, ಅವಕಾಶ, ಸಂಪತ್ತು ಎಲ್ಲರ ಸ್ವತ್ತು: ಜಾರ್ಜ್‌

7
72ನೇ ಸ್ವಾತಂತ್ರ್ಯ ದಿನಾಚರಣೆ ಸಡಗರ

ಅಧಿಕಾರ, ಅವಕಾಶ, ಸಂಪತ್ತು ಎಲ್ಲರ ಸ್ವತ್ತು: ಜಾರ್ಜ್‌

Published:
Updated:
Deccan Herald

ಚಿಕ್ಕಮಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ತಲುಪಿಸುವುದೇ ನಿಜವಾದ ಸ್ವಾತಂತ್ರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಅಧಿಕಾರ, ಅವಕಾಶ ಮತ್ತು ಸಂಪತ್ತು ಸಮಾಜದ ಎಲ್ಲ ಸಮುದಾಯದವರಿಗೂ ಹಂಚಿಕೆ ಆಗಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಇದು ನಮ್ಮ ಸರ್ಕಾರದ ಧ್ಯೇಯವು ಆಗಿದೆ ಎಂದು ಹೇಳಿದರು.

1927ರ ಆಗಸ್ಟ್‌ 18ರಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ ಅವರು ಯವಕರಿಗೆ ಸಂದೇಶ ನೀಡಿರುವುದನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಗಾಂಧೀಜಿ, ಮೌಲನಾ ಅಬುಲ್ ಕಲಮ್ ಆಜಾದ್, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಲಾಲಾಲಜಪತ ರಾಯ್, ಚಂದ್ರಶೇಖರ್ ಆಜಾದ್, ಜವಹರಲಾಲ್ ನೆಹರೂ, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್‌ಬಹದ್ದೂರ್ ಶಾಸ್ತ್ರಿ, ರಾಜೇಂದ್ರ ಪ್ರಸಾದ್, ಗೋಪಾಲಕೃಷ್ಣ ಗೋಖಲೆ, ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೊದಲಾದವರು ಬ್ರಿಟಿಷರ ಸಂಕೋಲೆಯಿಂದ ದೇಶವನ್ನು ಬಿಡಿಸಲು ಹೋರಾಡಿದರು. ಈ ಮಹನೀಯರ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಈ ಜಿಲ್ಲೆಯು ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಪ್ರಸಿದ್ದವಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರ. ಕುವೆಂಪು, ಪೂರ್ಣಚಂದ್ರ ತೇಜಸ್ವಿ ಮೊದಲಾದ ಸಾಹಿತಿಗಳು ಸಾಹಿತ್ಯ ಸಮೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದ್ದು, ಈವರೆಗೆ 90 ಸಾವಿರ ಹೆಕ್ಟೇರ್‌ನಲ್ಲಿ (ಶೇ 60) ಬಿತ್ತನೆಯಾಗಿದೆ. ಜಿಲ್ಲೆಯ ಕೆಲವು ಹೋಬಳಿಗಳಲ್ಲಿ ಕಡಿಮೆ ಮಳೆಯಾಗಿರುವುದರ ಬಗ್ಗೆಯೂ ಗಮನ ಹರಿಸಲಾಗುವುದು. ರಾಜ್ಯ ಸರ್ಕಾರವು ರೈತರ ₹ 43,448 ಕೋಟಿ ಸಾಲಮನ್ನಾಕ್ಕೆ ತೀರ್ಮಾನಿಸಿರುವುದು ಬಹಳಷ್ಟು ರೈತರಿಗೆ ಪ್ರಯೋಜನವಾಗಲಿದೆ ಎಂದರು.

ಬಜೆಟ್‌ನಲ್ಲಿ ಹಸಿರು ಕರ್ನಾಟಕ ಯೋಜನೆ ಘೋಷಣೆ ಮಾಡಲಾಗಿದೆ. ಸಾಮಾಜಿಕ ಅರಣ್ಯ ಬೆಳವಣಿಗೆಗೆ ಒತ್ತು ನೀಡಿ ಸಣ್ಣಗುಡ್ಡಗಳು, ಗೋಮಾಳಗಳು, ಕೆರೆಗಳ ಸುತ್ತಮುತ್ತಲಿನ ಸರ್ಕಾರಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಯಶಸ್ವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಗ್ರಾಮೀಣ ಪ್ರದೇಶ ಕುಡಿಯುವ ನೀರು ಶುದ್ಧೀಕರಣ ಸಮಸ್ಯೆಗೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಜಲಧಾರೆ ಯೋಜನೆ ಘೋಷಿಸಲಾಗಿದೆ. ಐದು ವರ್ಷಗಳಲ್ಲಿ ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಆಡಳಿತ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.

***
ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನ ರದ್ದು
ಮಳೆಯಿಂದಾಗಿ ಜಿಲ್ಲಾ ಆಟದ ಮೈದಾನ ಕೆಸರುಮಯವಾಗಿದೆ. ಬೆಳಿಗ್ಗೆಯಿಂದಲೂ ತುಂತುರ ಮಳೆ ಇತ್ತು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪಥಸಂಚಲನ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.

ಗೌರವ ವಂದನೆ : ಸಚಿವ ಜಾರ್ಜ್‌ ಅವರು ತೆರೆದ ವಾಹನದಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.

ಲ್ಯಾಪ್‌ ಟಾಪ್‌ ವಿತರಣೆ: ಎಸ್ಸೆಸ್ಸಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !