ಮಂಗಳವಾರ, ಜನವರಿ 25, 2022
24 °C

ಪಿ.ಆರ್. ತಿಪ್ಪೇಸ್ವಾಮಿ ನೆನಪಿನ ಕಲಾ ಸಂಭ್ರಮ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ - 2021ಹಾಗೂ ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ ಸಮಾರಂಭ ನ.30ರಿಂದ ಡಿ.2ರವರೆಗೆ ನಡೆಯಲಿದೆ.

ಜಿಲ್ಲಾ ಆಟದ ಮೈದಾನದ ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದಲ್ಲಿ ನ.30ರಂದು ಬೆಳಿಗ್ಗೆ 11.30ಕ್ಕೆ ಕಲಾ ಸಂಭ್ರಮವನ್ನು ಭಾರತ್‌ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಎಚ್‌.ನರೇಂದ್ರ ಪೈ ಉದ್ಘಾಟಿಸುವರು. ಹೆ‌ಚ್ಚುವರಿ ಜಿಲ್ಲಾಧಿಕಾರಿ ಡಿ.ರೂಪಾ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಉದ್ಯಮಿ ಡಿ.ಎಚ್‌.ನಟರಾಜ್‌ ಅವರು ಪಿಆರ್‌ಟಿ ಭಾವಚಿತ್ರ ಅನಾವರಣಗೊಳಿಸುವರು. ಶಿಲ್ಪ ಕಲಾವಿದ ಎಂ. ರಾಮಮೂರ್ತಿ ಚಿತ್ರಕಲಾ ಕಾರ್ಯಾಗಾರ ಉದ್ಘಾಟಿಸುವರು.

ಮಧ್ಯಾಹ್ನ 3 ಗಂಟೆಗೆ ಹಿರಿಯ ಕಲಾವಿದರ ಚಿತ್ರ ಪದರ್ಶನ ಉದ್ಘಾಟನೆ ನಡೆಯಲಿದೆ. ಮೈಸೂರಿನ ವಿದ್ವತ್‌ ಇನ್ನೊವೆಟಿವ್‌ ಸಲ್ಯೂಷನ್ಸ್‌ನ ರೊಹಿತ್‌ ಎಂ. ಪಾಟೀಲ್‌ ಆನ್‌ಲೈನ್‌ನಲ್ಲಿ ಉದ್ಘಾಟನೆ ನೆರವೇರಿಸುವರು.

ಡಿ.1ರಂದು ಯುವ ಕಲಾವಿದರ ನಿಸರ್ಗ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ಬೆಳಿಗ್ಗೆ 11.30ಕ್ಕೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮಕ್ಕಳ ಚಿತ್ರಕಲಾ ಪ್ರದರ್ಶನ ನಡೆಯಲಿದೆ.

ಡಿ.2ರಂದು ಸಂಜೆ 4 ಗಂಟೆಗೆ ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಧಾರವಾಡದ ಚಿತ್ರಕಲಾವಿದರಾದ ಗಾಯಿತ್ರಿ ದೇಸಾಯಿ ಹಾಗೂ ಜಾನಪದ ವಿದ್ವಾಂಸ ಪ್ರೊ.ತುಕಾರಾಂ ಪೂಜಾರಿ ಪಿ. ಅವರಿಗೆ ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ ಮಾಡುವರು.

ಅಪರೂಪದ ಕಲಾವಿದ ತಿಪ್ಪೇಸ್ವಾಮಿ

ಪಿ.ಆರ್.ತಿಪ್ಪೇಸ್ವಾಮಿ ಅವರು ಅಪರೂದ ಕಲಾವಿದರು. ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಯವರು. ಪಟೇಲ್ ರುದ್ರಪ್ಪ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರ.

ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್‍ಸ್ಟಿಟ್ಯೂಟ್‍ನಲ್ಲಿ ಚಿತ್ರ ಕಲೆಅಧ್ಯಯನ ಮಾಡಿದರು. ಮೈಸೂರನ್ನು ಕಾರ್ಯ ಕ್ಷೇತ್ರವಾಗಿಸಿಕೊಂಡು ಚಿತ್ರಕಲೆ, ಸಾಹಿತ್ಯ, ಜಾನಪದದಲ್ಲಿ ತೊಡಗಿಸಿಕೊಂಡರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಕಟ್ಟಿದ ಜಾನಪದ ವಸ್ತು ಸಂಗ್ರಹಾಲಯ ಅಂತಾರಾಷ್ಟ್ರೀಯ ಮನ್ನಣೆ ಪಡೆಯಿತು.ಸುತ್ತೂರು, ಧರ್ಮಸ್ಥಳದ ಮ್ಯೂಸಿಯಂ ಸ್ಥಾಪನೆಗಾಗಿ ಶ್ರಮಿಸಿದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಅಭೂತಪೂರ್ವ ಕಾರ್ಯಗಳನ್ನು ಮಾಡಿದರು. ನಾಲ್ಕು ವರ್ಷಗಳ ಅವಧಿಯಲ್ಲಿ ಕಲೆಗೆ ಸಂಬಂಧಿಸಿದ 47 ಗ್ರಂಥಗಳನ್ನು ಪ್ರಕಟಿಸಿದರು. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ರಾಜೋತ್ಸವ ಸಹಿತ ಅನೇಕ ಪುರಸ್ಕಾರಗಳು ಸಂದಿವೆ. 78ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅಭಿಮಾನಿಗಳು ಪಿಆರ್‌ಟಿ ಟ್ರಸ್ಟ್‌ ಸ್ಥಾಪಿಸಿ ಕಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು