ಭಾನುವಾರ, ಡಿಸೆಂಬರ್ 4, 2022
19 °C

ಎಲ್ಲ ಸಮುದಾಯಗಳಿಗೆ ಬಿಜೆಪಿ ಪ್ರಾತಿನಿಧ್ಯ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಹಿಂದುತ್ವ ಬಿಜೆಪಿಯ ಸಿದ್ಧಾಂತ, ಹಿಂದುತ್ವ ಯಶಸ್ವಿಯಾಗಬೇಕು ಎಂದು ಇಡೀ ದೇಶದಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕಲಬುರಗಿಯಲ್ಲಿ ನಡೆಯಲಿರುವ ಬಿಜೆಪಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಿಟ್ಟಿನಲ್ಲಿ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ‘ಹಿಂದೂ ಸಂಸ್ಕೃತಿಯಲ್ಲಿ ಗೊಂದಲ ಇಲ್ಲ. ರಾಷ್ಟ್ರಪ್ರೇಮಿಗಳ ಸ್ವಾಭಾವಿಕ ಅಭಿಪ್ರಾಯಗಳನ್ನು ಕೋಮುವಾದ ಎಂದು ಹೇಳುತ್ತಾರೆ. ಅದಕ್ಕೆ ನಾವು ಜಗ್ಗಲ್ಲ. ಮುಂದೊಂದು ದಿನ ಈ ದೇಶ ಅಖಂಡ ಭಾರತ ಆಗುತ್ತದೆ’ ಎಂದು ಪ್ರತಿಪಾದಿಸಿದರು.

‘ಕೇಂದ್ರ ಬಿಜೆಪಿ ಸರ್ಕಾರವು ಹಿಂದುಳಿದ ಸಮುದಾಯಗಳ 27 ಮಂದಿಗೆ ಸಂಪುಟದಲ್ಲಿ ಸ್ಥಾನ ನೀಡಿದೆ. ಎಲ್ಲ ಸಮುದಾಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ವಿಶಾಲ ಮನೋಭಾವ ಪ್ರಧಾನಿ ಮೋದಿ ಅವರಿಗೆ ಇದೆ’ ಎಂದರು.

‘ಬಿಜೆಪಿಯವರು ಏನು ಮಾಡಿದರೂ ಕಾಂಗ್ರೆಸ್‌ನವರು ಅದನ್ನು ಟೀಕಿಸುತ್ತಾರೆ. ಅವರ ಟೀಕೆಗಳಿಗೆ ಹೆದರಲ್ಲ. ಕಾಂಗ್ರೆಸ್‌ ದಿನೇದಿನೇ ಕುಗ್ಗುತ್ತಿದೆ’ ಎಂದು ಕುಟುಕಿದರು.

‘ಹಿಂದುಳಿದವರು, ದಲಿತರ, ಅಲ್ಪಸಂಖ್ಯಾತರ ಉದ್ಧಾರ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಇಷ್ಟು ವರ್ಷ ಅಧಿಕಾರ ಮಾಡಿ ಯಾಕೆ ಉದ್ಧಾರ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ರಾಜ್ಯ ಉಪಾಧ್ಯಕ್ಷ ಅಶೋಕ್ ಮೂರ್ತಿ ಮಾತನಾಡಿ, ‘ಕಲಬುರ್ಗಿ ಸಮಾವೇಶ ನಿಟ್ಟಿನಲ್ಲಿ 6 ಜಿಲ್ಲೆಗಳಲ್ಲಿ ಈಶ್ವರಪ್ಪ ಅವರ ತಂಡ ಪ್ರವಾಸ ಮಾಡುತ್ತಿದೆ. ಒಟ್ಟು ಐದು ತಂಡಗಳಲ್ಲಿ ವಿವಿಧ ಮುಖಂಡರು ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿದರು. ಶಾಸಕ ಎಂ.ಪಿ.ಕುಮಾರ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ವೆನಿಲ್ಲಾ ಭಾಸ್ಕರ್, ಪ್ರೇಂಕುಮಾರ್, ವರಸಿದ್ಧಿ ವೇಣುಗೋಪಾಲ್, ರಾಜಪ್ಪ, ಕನಕರಾಜ್, ನಾರಾಯಣ್ ಆಚಾರ್ಯ, ಪುಷ್ಪರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು