ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಮೀಸಲು: ಕನ್ನಡಪರ ಸಂಘಟನೆಗಳಿಂದ ವಿರೋಧ

Published : 21 ಸೆಪ್ಟೆಂಬರ್ 2024, 13:27 IST
Last Updated : 21 ಸೆಪ್ಟೆಂಬರ್ 2024, 13:27 IST
ಫಾಲೋ ಮಾಡಿ
Comments

ಮೂಡಿಗೆರೆ: ಪಟ್ಟಣದ 5ನೇ ವಾರ್ಡ್‌ನ ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗೆ ಉರ್ದು ಭಾಷೆ ಮೀಸಲುಗೊಳಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಒತ್ತಾಯಿಸಿದರು.

ಪಟ್ಟಣದ ಶಿಶು ಅಭಿವೃದ್ಧಿ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

‘ಅಂಗನವಾಡಿ ಸುತ್ತಮುತ್ತಲೂ ಎಲ್ಲಾ ಸಮುದಾಯಗಳ ಮನೆಗಳಿದ್ದು, ಆ ಮಕ್ಕಳೆಲ್ಲ ಈ ಅಂಗನವಾಡಿಗೆ ಬರುತ್ತಾರೆ. ಆದರೆ, ಅಧಿಕಾರಿಗಳು ಕಾರ್ಯಕರ್ತೆ ಹುದ್ದೆಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿ, ಉದ್ದೇಶಪೂರ್ವಕವಾಗಿ ಹುದ್ದೆಯನ್ನು ಪ್ರಭಾವಿ ವ್ಯಕ್ತಿಗಳಿಗೆ ನೀಡಲು ಹುನ್ನಾರ ನಡೆಸಿದ್ದಾರೆ. ಅಧಿಸೂಚನೆ ಹೊರಡಿಸಿ, ಪ್ರಸ್ತಾವನೆ ಸಲ್ಲಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ವಿನೋದ್ ಬಿದರಹಳ್ಳಿ ಮಾತನಾಡಿ, ‘ಅಂಗನವಾಡಿ ಕೇಂದ್ರದಲ್ಲಿ ಇದುವರೆಗೂ ಇಲ್ಲದ ಮೀಸಲಾತಿ ಈ ಬಾರಿ ನೇಮಕಕ್ಕೆ ಜಾರಿಗೊಳಿಸಲಾಗಿದೆ. ಉರ್ದು ಭಾಷೆಯನ್ನು ಕಡ್ಡಾಯ ಮಾಡಿರುವುದಕ್ಕೆ ಅಧಿಕಾರಿಗಳಿಂದ ಇದುವರೆಗೂ ಸಮರ್ಪಕವಾದ ಉತ್ತರ ಬಂದಿಲ್ಲ. ಕೂಡಲೇ ನೇಮಕಾತಿ ಅಧಿಸೂಚನೆ ಹಿಂಪಡೆದು, ಕನ್ನಡ ಭಾಷೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಜಿಲ್ಲಾಮಟ್ಟದಲ್ಲಿ ಹೋರಾಟ ನಡೆಸಲಾವುದು’ ಎಂದರು.

ಕನ್ನಡ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಹೊರಟ್ಟಿ ರಘು ಮಾತನಾಡಿ, ‘ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ನೀಡುವುದು ಸಹಜ. ಆದರೆ, ಈ ನೇಮಕಾತಿಯಲ್ಲಿ ಉದ್ದೇಶಪೂರ್ವಕವಾಗಿಯೇ ಉರ್ದು ಭಾಷೆಯ ಮೀಸಲಾತಿ ಕಲ್ಪಿಸಲಾಗಿದೆ’ ಎಂದು ಆರೋಪಿಸಿದರು.

ಮನವಿ ನೀಡುವಾಗ ಎಂ.ವಿ. ಶ್ರೇಷ್ಟಿ, ವಿಶ್ವ ಹಾರ್ಲಗದ್ದೆ, ಗೀತಾ ಛತ್ರಮೈದಾನ, ಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT