2ನೇ ದಿನವೂ ತರಗತಿ ಬಹಿಷ್ಕಾರ

7
ಖಾಸಗಿ ಕೃಷಿ ಕಾಲೇಜು ರದ್ಧತಿಗೆ ಒತ್ತಾಯಿಸಿ ಪ್ರತಿಭಟನೆ

2ನೇ ದಿನವೂ ತರಗತಿ ಬಹಿಷ್ಕಾರ

Published:
Updated:
ಮೂಡಿಗೆರೆ ಪಟ್ಟಣದ ಹ್ಯಾಂಡ್‌ಪೋಸ್ಟಿನಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಖಾಸಗಿ ಕೃಷಿ ಕಾಲೇಜನ್ನು ಬಂದ್‌ ಮಾಡುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು

ಮೂಡಿಗೆರೆ: ಖಾಸಗಿ ಕೃಷಿ ಕಾಲೇಜನ್ನು ಮುಚ್ಚುವಂತೆ ಒತ್ತಾಯಿಸಿ ತೋಟಗಾರಿಕೆ ವಿದ್ಯಾರ್ಥಿಗಳು ಮಂಗಳವಾರವೂ ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಹ್ಯಾಂಡ್‌ಪೋಸ್ಟಿನಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿಯ 200ಕ್ಕೂ ಅಧಿಕ ವಿದ್ಯಾರ್ಥಿಗಳು, ಮಹಾವಿದ್ಯಾಲಯದಿಂದ ಹೊರಟು ಸುಮಾರು 2 ಕಿ.ಮೀ. ಕಾಲ್ನಡಿಗೆಯಲ್ಲಿ ಪಟ್ಟಣದ ಲಯನ್ಸ್‌ ವೃತ್ತಕ್ಕೆ ಬಂದು ಪ್ರತಿಭಟನೆ ನಡೆಸಿದರು. ಜಾಥಾದುಕ್ಕೂ ಸರ್ಕಾರದ ವಿರುದ್ಧ ಹಾಗೂ ಬೆಂಗಳೂರಿನಲ್ಲಿರುವ ಖಾಸಗಿ ಕೃಷಿ ಕಾಲೇಜನ್ನು ಕೂಡಲೇ ಬಂದ್‌ಗೊಳಿಸಬೇಕು ಎಂಬ ಒತ್ತಾಯದ ಘೋಷಣೆ ಕೂಗಿದರು.

ಲಯನ್ಸ್‌ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನೆಯಲ್ಲಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿ ಅಮೋಘ್‌ ಮಾತನಾಡಿ, ‘ಖಾಸಗಿ ಕೃಷಿ ಕಾಲೇಜು ಸ್ಥಾಪನೆಯು ರೈತರಿಗೆ ಬಗೆದ ದ್ರೋಹವಾಗಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಕಾಲೇಜು ತೆರೆಯುವುರಿಂದ ಗುಣಮಟ್ಟದ ಶಿಕ್ಷಣ ಸಿಗದೇ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವ ಕೆಲಸವಾಗುತ್ತದೆ. ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಿಇಟಿ ಬರೆದು ಉತ್ತೀರ್ಣರಾಗಿ ಬೇರೆ ಬೇರೆ ಪ್ರದೇಶಗಳಿಂದ ಬಂದು ಶಿಕ್ಷಣ ಪಡೆಯುತ್ತಿದ್ದು, ಖಾಸಗಿ ಕಾಲೇಜುಗಳಿಂದ ಪದವೀಧರರ ಸಂಖ್ಯೆ ಹೆಚ್ಚಳವಾಗುವುದಲ್ಲದೇ, ಕೃಷಿ ಪದವೀಧರರಿಗೆ ಬೇಡಿಕೆ ಕುಗ್ಗುತ್ತದೆ’ ಎಂದು ಆರೋಪಿಸಿದರು.

ಒಂದು ತಿಂಗಳಿನಿಂದ ರಾಜ್ಯದ ಎಲ್ಲ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಹಾಗೂ ಕೇಂದ್ರ ಸರ್ಕಾರವು ಪ್ರತಿಭಟನೆಯನ್ನು ಲಘುವಾಗಿ ಪರಿಗಣಿಸಿವೆ. ಕೂಡಲೇ ಯಲಹಂಕದಲ್ಲಿರುವ ಖಾಸಗಿ ಕೃಷಿ ಕಾಲೇಜನ್ನು ಬಂದ್‌ಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ವಿದ್ಯಾರ್ಥಿ ಯಶಸ್‌ ಮಾತನಾಡಿ, ‘ಖಾಸಗಿ ಕೃಷಿ ಕಾಲೇಜಿಗೆ ಯಾವುದೇ ನಿಬಂಧನೆಗಳಿಲ್ಲದೇ ಪ್ರವೇಶಾತಿ ನೀಡಿ, ಮನಸೋ ಇಚ್ಛೆ ಪದವಿ ನೀಡಿ, ಸ್ನಾತಕೋತ್ತರ ಪದವಿಗೆ ಸರ್ಕಾರಿ ಕಾಲೇಜುಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸರ್ಕಾರಿ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರಗಳು ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಖಾಸಗಿ ಕೃಷಿ ಕಾಲೇಜು ಸ್ಥಾಪನೆಯು ರೈತರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಕೂಡಲೇ ಖಾಸಗಿ ಕಾಲೇಜುಗಳನ್ನು ಮುಚ್ಚಬೇಕು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳೆಲ್ಲರೂ ಮಳೆಯ ನಡುವೆಯೇ ಕೊಡೆಹಿಡಿದು ಪ್ರತಿಭಟನೆ ನಡೆಸಿದರು. ಯಶಸ್‌, ಶ್ರೀಕಾಂತ್‌, ವರುಣ್‌, ರಾಘವೇಂದ್ರ, ಸಾಗರ್‌, ಮಂದಿರ, ಮೇಘನ ಮುಂತಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !