ಬೀರೂರು: ಶಾಲೆಯ ವಿರುದ್ಧ ಪೋಷಕರ ಆಕ್ರೋಶ: ಪ್ರತಿಭಟನೆ, ದೂರು

ಬುಧವಾರ, ಏಪ್ರಿಲ್ 24, 2019
34 °C
ಹಣಕ್ಕಾಗಿ ಫಲಿತಾಂಶ ತಡೆ ಹಿಡಿದ ಅನುದಾನಿತ ಶಾಲೆ ಆಡಳಿತ ಮಂಡಳಿ

ಬೀರೂರು: ಶಾಲೆಯ ವಿರುದ್ಧ ಪೋಷಕರ ಆಕ್ರೋಶ: ಪ್ರತಿಭಟನೆ, ದೂರು

Published:
Updated:
Prajavani

ಬೀರೂರು: ಪಟ್ಟಣದ ಡಿ.ವಿ.ಹಾಲಪ್ಪ ರಸ್ತೆಯ ಅಕ್ಕಮಹಾದೇವಿ ಹಿರಿಯ ಪ್ರಾಥಮಿಕ ಶಾಲೆಯು ಅನುದಾನಿತವಾಗಿದ್ದು, ಶಾಲಾಭಿವೃದ್ಧಿ ದೇಣಿಗೆ ಪಾವತಿಸದ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಶಾಲೆಯಲ್ಲಿ ಬುಧವಾರ ಬೆಳಿಗ್ಗೆ ಫಲಿತಾಂಶ ನೋಡಲು ಬಂದಿದ್ದ ಹಲವು ವಿದ್ಯಾರ್ಥಿಗಳು ತಮ್ಮ ಹೆಸರಿನ ಮುಂದೆ ಫಲಿತಾಂಶ ತಡೆ ಹಿಡಿಯಲಾಗಿದೆ ಎಂದು ಲಗತ್ತಿಸಿ ನೋಟಿಸ್ ಫಲಕದಲ್ಲಿ ಪ್ರಕಟಿಸಿದ್ದನ್ನು ಪೋಷಕರ ಗಮನಕ್ಕೆ ತಂದಿದ್ದರು.

ಈ ಹಂತದಲ್ಲಿ ಶಾಲಾ ಮುಖ್ಯಶಿಕ್ಷಕರ ಜತೆ ದೂರವಾಣಿಯಲ್ಲಿ ಮಾತನಾಡಿದ ಪೋಷಕ ಮೈಲಾರಪ್ಪ ಅವರಿಗೆ, ‘ಆಡಳಿತ ಮಂಡಳಿ ಆದೇಶದ ಅನುಸಾರ ಶಾಲಾಭಿವೃದ್ಧಿ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಹಣ ಪಾವತಿಸಿದ ಬಳಿಕ ಪ್ರಕಟಿಸುವಂತೆ ಶಾಲಾ ಕಾರ್ಯನಿರ್ವಹಣಾಧಿಕಾರಿ ಸಿ.ದಯಾನಂದ್ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫಲಿತಾಂಶ ತಡೆ ಹಿಡಿಯಲಾಗಿದೆ’ ಎಂದು ತಿಳಿಸಿದ್ದಾರೆ.

ವಿಷಯವನ್ನು ಪೋಷಕರು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅವರು ಶಾಲೆಯ ಬಳಿ ಬಂದು ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದರೂ, ಅವರಿಂದ ಸೂಕ್ತ ಸಮಜಾಯಿಷಿ ದೊರೆತಿಲ್ಲ.

ಈ ಹಂತದಲ್ಲಿ ಮಾಹಿತಿ ದೊರೆತು ಶಾಲೆಯ ಬಳಿ ಪತ್ರಕರ್ತರು ತೆರಳಿದಾಗ ಅಲ್ಲಿ ಒಂದರಿಂದ ಏಳನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪ್ರತಿ ತರಗತಿಯ ಹಲವು ವಿದ್ಯಾರ್ಥಿಗಳ ಹೆಸರು ನಮೂದಿಸಿ ಶಾಲಾ ಶಿಕ್ಷಕರ ಸಹಿಯೊಂದಿಗೆ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿತ್ತು.

‘ಫಲಿತಾಂಶ ಏಕೆ ತಡೆ ಹಿಡಿಯಲಾಗಿದೆ’ ಎಂದು ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸುವ ವೇಳೆಯಲ್ಲಿ ಕೆಲ ಪೋಷಕರು ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಆಗ ಏಕಾಏಕಿ ಅಂಟಿಸಿದ್ದ ಪಟ್ಟಿಯನ್ನು ಕಿತ್ತು ಹಾಕಿದ ಕಾರ್ಯನಿರ್ವಹಣಾಧಿಕಾರಿ ಪೋಷಕರನ್ನು ಕುರಿತು, ‘ಸೀಟು ಬೇಕು ಅಂತ ಕೈ ಕಾಲು ಹಿಡೀತೀರ, ನೀವು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಒರಟಾಗಿ ಉತ್ತರಿಸಿದರು.

ಈ ಶಾಲೆಯು 2009ರಿಂದ ಅನುದಾನಿತ ಶಾಲೆಯಾಗಿದ್ದು, ಇಲ್ಲಿ 7 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಬಿಸಿಯೂಟ, ಪುಸ್ತಕ ಸರ್ಕಾರದ ವತಿಯಿಂದ ಬರುತ್ತಿದೆ.

‘ಈ ಹಿಂದೆ ಬೀರೂರು ಶೈಕ್ಷಣಿಕ ವಲಯ ಶಿಕ್ಷಣಾಧಿಕಾರಿಯಾಗಿದ್ದ ಎಂ.ವಿ.ರಾಜಣ್ಣ ಅವರು ಈ ಮೊದಲೂ ಇದೇ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ ಮತ್ತು ನಿರ್ವಾಹಕರಿಗೆ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಸಂಗ್ರಹಿಸದಂತೆ ಎಚ್ಚರಿಕೆ ನೀಡಿ, ಶಾಲೆಯ ಮುಂದೆ ‘ಇಲ್ಲಿ ಡೊನೇಷನ್ ಪಡೆಯುವುದಿಲ್ಲ' ಎನ್ನುವ ಬೋರ್ಡ್ ಕೂಡ ಹಾಕಿಸಿದ್ದರು. ಅವರ ವರ್ಗಾವಣೆಯ ನಂತರ ಹೊಸ ಬಿಇಒ ಗಮನಕ್ಕೆ ಈ ವಿಷಯಗಳನ್ನು ಗಮನಕ್ಕೆ ತಂದಾಗ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸುವುದಾಗಿ ಹೇಳಿದ್ದರು. ವಿಶೇಷವಾಗಿ ಪರಿಶಿಷ್ಟ ಪಂಗಡದ ಹಲವು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ಪೋಷಕರು ಬಿಸಿಲು-ಮಳೆ ಎನ್ನದೇ ಕೂಲಿ ಮಾಡಿ ಮಕ್ಕಳ ಶುಲ್ಕ ಭರ್ತಿ ಮಾಡುವಂತೆ ಆಗಿದೆ. ಈ ವಿಷಯವಾಗಿ ಮುಖ್ಯಮಂತ್ರಿಗಳಿಗೂ ದೂರು ಸಲ್ಲಿಸಲಾಗಿದೆ. ಈ ವಿಷಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಬಡ ಜನರಿಗೆ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ' ಎಂದು ಬಿ.ಟಿ.ಚಂದ್ರಶೇಖರ್ ಆರೋಪಿಸಿದರು.

‘ಹಣ ಪಾವತಿಸದ ಮಕ್ಕಳ ವಿಷಯವಾಗಿ ಶಾಲೆಯ ನಿರ್ವಹಣಾ ಮಂಡಳಿ ಧೋರಣೆ ಹೊಸದೇನಲ್ಲ. ಹಲವು ಬಾರಿ ಮಕ್ಕಳನ್ನು ತರಗತಿಯಿಂದ ಹೊರಗೆ ನಿಲ್ಲಿಸುವುದು, ಪರೀಕ್ಷೆ ಬರೆಯಲು ಬಿಡುವುದಿಲ್ಲ, ಶೌಚಾಲಯ ಬಳಸುವಂತಿಲ್ಲ ಎಂದು ಬೆದರಿಸುವುದು ಇಲ್ಲಿ ಸಾಮಾನ್ಯವಾಗಿದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ನಾವು ಹಾತೊರೆದರೆ ಇಲ್ಲಿ ಇಂತಹ ಸನ್ನಿವೇಶ ಇದೆ. ಅನುದಾನಿತ ಶಾಲೆಯಲ್ಲಿ ಶಾಲಾ ಮೂಲಸೌಕರ್ಯ ಅಭಿವೃದ್ಧಿ ನೆಪದಲ್ಲಿ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ಶುಲ್ಕ ವಸೂಲಿ ಮಾಡುತ್ತಿದ್ದು, ಇದರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಾ ನಿರತ ಪೋಷಕರು ಒತ್ತಾಯಿಸಿದರು.

ಈ ಘಟನೆಯ ಬಳಿಕ ಶಾಲೆಯ ಶಿಕ್ಷಕರು ಬಿಇಒ ಕಚೇರಿಯಿಂದ ಅನುಮೋದಿಸಲಾಗಿದ್ದ ಫಲಿತಾಂಶ ಪಟ್ಟಿ ಪ್ರಕಟಿಸಲು ಮುಂದಾದರು. ಪ್ರತಿಭಟನೆಯಲ್ಲಿ ಪೋಷಕರಾದ ಶಿವು, ಪ್ರದೀಪ್, ರವಿಕುಮಾರ್, ವಿಜಯಕುಮಾರ್, ಶಿವಕುಮಾರ್, ಸುರೇಶ್, ರಮೇಶ್ ಪಾಲ್ಗೊಂಡಿದ್ದರು.

‘ಡಿಡಿಪಿಐ ಗಮನಕ್ಕೂ ತರಲಾಗುವುದು’

ಫಲಿತಾಂಶ ತಡೆ ಹಿಡಿದಿರುವ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಬಿಇಒ ಸಿದ್ದರಾಜು ನಾಯ್ಕ, ‘ಅನುದಾನಿತ ಶಾಲೆಯು ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳ ಬಳಿ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ, ಫಲಿತಾಂಶ ತಡೆ ಹಿಡಿಯುವಂತಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿದ್ದು, ಮಾಹಿತಿ ಪಡೆಯುವಂತೆ ಸಿಆರ್‍ಪಿಗೆ ಸೂಚಿಸಲಾಗುವುದು. ಇದನ್ನು ಡಿಡಿಪಿಐ ಗಮನಕ್ಕೂ ತರಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !