ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೇಶಪ್ಪನ ಮಠ ಪ್ರದೇಶ: ವಿಷ ಸೇವನೆಗೆ ಮುಂದಾದ ಗ್ರಾಮಸ್ಥರು

ತೆರವಿಗೆ ಆಕ್ಷೇಪ; ಪರಿಹಾರಕ್ಕೆ ಆಗ್ರಹ
Last Updated 4 ಆಗಸ್ಟ್ 2022, 16:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭದ್ರಾ ವನ್ಯಜೀವಿ ಅರಣ್ಯ ಸಿಬ್ಬಂದಿ ತಂಡವು ಗುರುವಾರ ತಾಲ್ಲೂಕಿನ ಬೊಗಸೆ ಸಮೀಪದ ಪರದೇಶಪ್ಪನ ಮಠ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಗೆ ಮುಂದಾದಾಗ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.

ಅರಣ್ಯ ಸಿಬ್ಬಂದಿ ಪೊಲೀಸ್‌ ಭದ್ರತೆಯಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಯಂತ್ರಗಳಿಂದ ಕಾಫಿ ಗಿಡಗಳನ್ನು ಕತ್ತರಿಸಲು ಶುರುಮಾಡಿದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಸ್ಪರ ಮಾತಿನ ಜಟಾಪಟಿ ನಡೆದಿದೆ.

ಪರದೇಶಪ್ಪನ ಮಠ ಪ್ರದೇಶದಲ್ಲಿ ನೆಲೆಸಿರುವ ಕುಟುಂಬಗಳವರು ಕಾರ್ಯಾಚರಣೆ ಕೈಬಿಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜನರ ಮಾತನ್ನುತು ಲೆಕ್ಕಿಸದೆ

ಕೆಲವು ಗಿಡಗಳನ್ನು ಕತ್ತರಿಸಿದಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿ ಕೆಲವರು ವಿಷ ಸೇವನೆಗೆ ಮುಂದಾಗಿದ್ದಾರೆ. ಮೂವರು ಮಹಿಳೆಯರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು.

ಪರದೇಶಪ್ಪನ ಮಠದ ಅರಣ್ಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ವಿರೂಪಾಕ್ಷಯ್ಯ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಭದ್ರಾ ಅಭಯಾರಣ್ಯ, ಹುಲಿ ಯೋಜನೆಗೆ ನಮ್ಮ ಜಮೀನು, ಮನೆಗಳನ್ನು ಅರಣ್ಯ ಇಲಾಖೆ ಸ್ವಾಧೀನಪಡಿಸಿಕೊಂಡಿರುವುದಕ್ಕೆ ಎಲ್ಲರಿಗೂ ಒಟ್ಟಿಗೆ ಪರಿಹಾರ, ಪುನವರ್ಸತಿ ಕಲ್ಪಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಈವರೆಗೆ ಕ್ರಮ ವಹಿಸಿಲ್ಲ. ಈಗ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇದು ಸರಿಯಲ್ಲ’ ಎಂದು ದೂರಿದರು.

‘ಪರಿಹಾರ ನೀಡಿರುವವರ ಜಾಗ ತೆರವು ಮಾಡಿಸಲು ಈಗ ಕ್ರಮ ವಹಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಎಲ್ಲ ಕುಟುಂಬಗಳಿಗೂ ಒಟ್ಟಿಗೆ ಪರಿಹಾರ ನೀಡಿ ತೆರವು ಮಾಡಿಸಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಅಧಿಕಾರಿಗಳ ನಡೆ ವಿರೋಧಿಸಿ ಕಡವಂತಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇದೇ 5ರಂದು ಬೆಳಿಗ್ಗೆ 10.30ಕ್ಕೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

8ರಂದು ಸಭೆ: ಪರದೇಶಪ್ಪನ ಮಠ ಪ್ರದೇಶದ ವಿಚಾರಕ್ಕೆ ಸಂಬಂಧಿಸಿದಂತೆ ಇದೇ 8 ರಂದು ಸಭೆ ನಡೆಸಲಾಗುವುದು.

ಈಗಾಗಲೇ ಪರಿಹಾರ ಪಡೆದಿರವವರಿಗೆ ಸಭೆಗೆ ಹಾಜರಾಗಲು ತಿಳಿಸಲಾಗುವುದು ಎಂದು ಭದ್ರಾ ವನ್ಯಜೀವಿ ವಿಭಾಗದ ಉಪಅರಣ್ಯಸಂರಕ್ಷಣಾಧಿಕಾರಿ ಪ್ರಭಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂತ್ರಸ್ತರ ಆಕ್ಷೇಪಣೆಗಳನ್ನು ಆಲಿಸಲಾಗುವುದು. ಅಗತ್ಯ ಬಿದ್ದರೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಭೆಯನ್ನೂ
ನಡೆಸಲಾಗುವುದು. ಸಮಸ್ಯೆ ಪರಿಹರಿಸಿ ತೆರವು ಕಾರ್ಯಚರಣೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT