ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ವಿರೋಧಿ ನೀತಿ ವಾಪಸ್‌ಗೆ ಒತ್ತಾಯ

ಚಿಕ್ಕಮಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮುಷ್ಕರ
Last Updated 27 ನವೆಂಬರ್ 2020, 3:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಗುರುವಾರ ಮುಷ್ಕರ ನಡೆಸಲಾಯಿತು.

ಕಟ್ಟಡ ಕಾರ್ಮಿಕರು, ಅಕ್ಷರ ದಾಸೋಹ ಕಾರ್ಯಕರ್ತರು, ಅಂಗನ ವಾಡಿ ಕಾರ್ಯಕರ್ತೆಯರು ನಗರದ ತಮಿಳು ಕಾಲೊನಿಯ ಎಐಟಿಯುಸಿ ಕಚೇರಿ ಬಳಿ ಜಮಾಯಿಸಿದರು. ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಕಾರ್ಮಿಕರ 44 ಕಾನೂನುಗಳನ್ನು 4 ಸಂಹಿತೆಗಳಾಗಿ ಮಾರ್ಪಾಡು ಮಾಡಿ ರುವುದನ್ನು ಹಿಂಪಡೆಯಬೇಕು. ಎಪಿಎಂಸಿ, ಭೂ ಸುಧಾರಣೆ, ಕಾರ್ಮಿಕ ಕಾಯ್ದೆ ಗಳ ತಿದ್ದುಪಡಿ ರದ್ದುಗೊಳಿಸ ಬೇಕು. ಬ್ಯಾಂಕು, ವಿಮೆ, ರೈಲ್ವೆ, ವಿಮಾನ ನಿಲ್ದಾಣ, ಬಂದರು, ವಿದ್ಯುತ್ ಸಹಿತ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಬಾರದು. ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ವಿಸ್ತರಿಸಬೇಕು. ವಾರ್ಷಿಕ ಕನಿಷ್ಠ 200 ದಿನಗಳು ಉದ್ಯೋಗ ನೀಡಬೇಕು. ಅಂಗ ನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕಾಯಂಗೊಳಿಸ ಬೇಕು. ಕನಿಷ್ಠ ₹18 ಸಾವಿರ ವೇತನ ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಗುಣಶೇಖರನ್ ಮಾತನಾಡಿ, ‘ಕೈಗಾರಿಕೆಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುವ 14 ದಿನಗಳ ಮುಂಚೆ ಆಡಳಿತ ಮಂಡಳಿಗೆ ನೋಟಿಸ್ ನೀಡಬೇಕಿತ್ತು. ಆದರೆ, ಕೇಂದ್ರ ಸರ್ಕಾರ 60 ದಿನಗಳ ಮುಂಚೆ ನೋಟಿಸ್ ನೀಡುವಂತೆ ಹಾಗೂ ಪ್ರತಿಭಟನೆಯಲ್ಲಿ ಹೊರಗಿನವರು ಭಾಗವಹಿಸಬಾರದು ಎಂದು ಕಾನೂನು ರೂಪಿಸಿದೆ. ಸರ್ಕಾರವು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಕಾರ್ಮಿಕರಿಗೆ ನೀಡಿದ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿದೆ’ ಎಂದು ಆಪಾದಿಸಿದರು.

ಸಿಪಿಐ ರಾಜ್ಯ ಘಟಕದ ಕಾರ್ಯಕಾರಿಣಿ ಸದಸ್ಯ ಬಿ.ಅಮ್ಜದ್ ಮಾತನಾಡಿ, ‘1928ರಲ್ಲಿ ಬ್ರಿಟೀಷರ ಆಡಳಿತಾವಧಿಯಲ್ಲಿಯೇ ದೇಶದಲ್ಲಿ 44 ಕಾರ್ಮಿಕ ಕಾನೂನು ಜಾರಿಯಲ್ಲಿದ್ದವು. ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು 4 ಸಂಹಿತೆಗಳನ್ನಾಗಿ ಮಾಡಿದೆ. ಕಾರ್ಮಿಕರ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ’ ಎಂದು ದೂಷಿಸಿದರು.

ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ರಘು, ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ್, ಸಿಪಿಐ ಮುಖಂಡರಾದ ಎಚ್.ಎಂ. ರೇಣುಕಾರಾಧ್ಯ, ರಾಧಾ ಸುಂದರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT