ಮಂಗಳವಾರ, ಮೇ 24, 2022
30 °C
ರೈತ ಸಂಘ–ಹಸಿರು ಸೇನೆ, ಬಿಎಸ್‌ಪಿಯಿಂದ ರಸ್ತೆ ತಡೆದು ಆಕ್ರೋಶ

ಪ್ರತಿಭಟನಕಾರರ ವಶ, ಬಿಡುಗಡೆ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕೇಂದ್ರ ಸರ್ಕಾರವು ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ರೈತ ಸಂಘ–ಹಸಿರು ಸೇನೆ, ಬಿಎಸ್‌ಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ರಸ್ತೆ ತಡೆ ನಡೆಯಿತು.

ಹಿರೇಮಗಳೂರಿನ ವೃತ್ತದ ಬಳಿ ರೈತ ಸಂಘ–ಹಸಿರು ಸೇನೆ, ಬಿಎಸ್‌ಪಿ ಕಾರ್ಯಕರ್ತರು, ರಸ್ತೆಗೆ ಅಡ್ಡಲಾಗಿ ಕುಳಿತರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆ ಕೈ ಬಿಡುವಂತೆ ‍ಪೊಲೀಸರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ಪ್ರತಿಭಟನಕಾರರು ಅದಕ್ಕೆ ಸ್ಪಂದಿಸಲಿಲ್ಲ. ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು. ರಾಮನಹಳ್ಳಿಯ ಪೊಲೀಸ್ ಕವಾಯತು ಮೈದಾನಕ್ಕೆ ಕರೆದೊಯ್ದರು. ಮಧ್ಯಾಹ್ನ ಬಿಡುಗಡೆಗೊಳಿಸಿದರು.

ರೈತ ಸಂಘ– ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ ಮಾತನಾಡಿ, ‘ಕೃಷಿ, ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳನ್ನು ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಲಾಗಿದೆ. ಅದನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ದಿನ ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಂಡು ರೈತರ ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿತು. ಸರ್ಕಾರ ರೈತ ವಿರೋಧಿ ನಿಲುವು ಬದಲಿಸಿಕೊಳ್ಳಬೇಕು ಎಂದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ‘ರೈಲ್ವೆ, ಎಲ್‌ಐಸಿ, ವಿಮಾನ ನಿಲ್ದಾಣ ಸಹಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಸರ್ಕಾರ ಖಾಸಗೀಕರಣಗೊಳಿಸುತ್ತಿದೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ರೈತರು, ಬಡವರು, ಶೋಷಿತರನ್ನು ನಿರ್ಲಕ್ಷಿಸುತ್ತಿದೆ’ ಎಂದು ಆರೋಪಿಸಿದರು.

ರೈತ ಸಂಘದ ಎಂ.ಸಿ.ಬಸವರಾಜ್, ಕೆ.ಕೆ.ಕೃಷ್ಣೇಗೌಡ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ರಸೂಲ್‌ಖಾನ್, ಶಿವಣ್ಣ ಇದ್ದರು.

‌ರಕ್ತದಲ್ಲಿ ಸಹಿ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಕೃಷಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಕಿಸಾನ್‌ ವಿಭಾಗದ ವತಿಯಿಂದ ಅಂಚೆಪತ್ರಕ್ಕೆ ರಕ್ತದಲ್ಲಿ ಸಹಿ ಹಾಕಿ, ಪ್ರಧಾನಿಗೆ ಪೋಸ್ಟ್‌ ಮಾಡಲಾಯಿತು.

ನಗರದ ಪ್ರಧಾನ ಅಂಚೆ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಕಿಸಾನ್‌ ವಿಭಾಗದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಿ.ಎಂ.ವಿಜಯ್ ಮಾತನಾಡಿ, ‘ರೈತರಿಗೆ ಬೇಡವಾದ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರಕ್ಕೆ ಏಕೆ ಬೇಕು? ಸರ್ಕಾರ ಹಠಮಾರಿತನ ಬಿಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಫಿ ಅಹಮದ್, ಪ್ರದೀಪ್, ಗುರುದೇವ್, ಹಾರೂನ್, ನರೇಂದ್ರ, ಈರೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.