ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಉಂಡೇದಾಸರಹಳ್ಳಿ ರಸ್ತೆ ದುರಸ್ತಿಗೆ ಒತ್ತಾಯ

Published:
Updated:
Prajavani

ಚಿಕ್ಕಮಗಳೂರು:ನಗರದ ಉಂಡೆದಾಸರಹಳ್ಳಿಯ ಮುಖ್ಯರಸ್ತೆ ದುರಸ್ತಿಗೆ ಒತ್ತಾಯಿಸಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.

ಉಂಡೇದಾಸರಹಳ್ಳಿಯಿಂದ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ಪಾಯಸ್ ಕಾಂಪೌಂಡ್ ಬಳಿಯಿಂದ ಉಂಡೇದಾಸರಹಳ್ಳಿ, ಎರೇಹಳ್ಳಿ ಮೂಲಕ ನಲ್ಲೂರು ಗೇಟಿಗೆ ಮುಖ್ಯ ರಸ್ತೆ ಹಾದುಹೋಗುತ್ತದೆ. ಐದು ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಏರ್ಪಟ್ಟಿವೆ. ವಾಹನಗಳಲ್ಲಿ ಸಂಚರಿಸಲು ಸವಾರರು ಹರಸಾಹಸ ಪಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ವಿಧಾನಪರಿಷತ್ತಿನ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಮಾತನಾಡಿ, ಉಂಡೇದಾಸರಹಳ್ಳಿನ ಮುಖ್ಯರಸ್ತೆಗಳು, ಅಡ್ಡ ರಸ್ತೆಗಳಲ್ಲಿನ ಹೊಂಡಗಳಲ್ಲಿ ನೀರು ತುಂಬಿಕೊಂಡು, ಕೆಸರುಮಯವಾಗಿವೆ. ಪಾದಾಚಾರಿ ಮಾರ್ಗವು ಇಲ್ಲ. ಈ ಬಡಾವಣೆಯಲ್ಲಿನ ಖಾಸಗಿ ಶಾಲೆಯ 30ರಿಂದ 35ಬಸ್ಸುಗಳು ರೈಲು ಬೋಗಿಗಳಂತೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಸಂಚರಿಸುತ್ತವೆ. ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ನಗರದ ರಸ್ತೆಗಳನ್ನು ಅಗೆಯಲಾಗಿದೆ. ಅವಧಿ ಮುಗಿದರೂ ಕಾಮಗಾರಿ ಪೂರ್ಣವಾಗಿಲ್ಲ. ಕುಡಿಯುವ ನೀರಿಗೆ ಶೌಚದ ನೀರು ಬೆರೆಕೆಯಾಗುತ್ತಿದೆ. ಈ ಬಗ್ಗೆ ನಗರಸಭೆ, ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದರು ಆಗ್ರಹಿಸಿದರು.
ಜಿಲ್ಲಾಕಾಂಗ್ರೆಸ್ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ನಗರದ ರಸ್ತೆ ಅಭಿವೃದ್ಧಿಗೆ ಸಚಿವ ಸಿ.ಟಿ.ರವಿ ಆಸಕ್ತಿ ತೋರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಉಂಡೇದಾಸರಹಳ್ಳಿಯ ಖಾಸಗಿ ಶಾಲೆ ಬಸ್ಸುಗಳು ವೇಗವಾಗಿ ಚಲಿಸುತ್ತವೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ವರದರಾಜು ಮಾತನಾಡಿ, ನಗರದ ಹೃದಯಭಾಗದಲ್ಲಿರುವ ಉಂಡೇದಾಸರಹಳ್ಳಿಯ ರಸ್ತೆಗಳು, ಸೇತುವೆ 40 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯಲ್ಲಿಯೇ ಈಗಳು ಇವೆ. ಮೂಲ ಸೌಕರ್ಯ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದರು. ಸ್ಥಳೀಯರಾದ ಹೊನ್ನೇಶ್, ಶಾರದಾ, ಗೌರಮ್ಮ, ಸುಧಾ, ಲೋಕೇಶ್ ಇದ್ದರು.

 

Post Comments (+)