ಶುಕ್ರವಾರ, ನವೆಂಬರ್ 22, 2019
19 °C

ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸದ ಮೋದಿ: ಸಿದ್ದರಾಮಯ್ಯ

Published:
Updated:
Prajavani

ಚಿಕ್ಕಮಗಳೂರು: ‘ಪ್ರಧಾನಿ ಮೋದಿ ಅವರದು 56 ಇಂಚಿನ ಎದೆ ಎಂದು ಹೇಳುತ್ತಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಮಾತೃ ಹೃದಯ ಇಲ್ಲದಿದ್ದರೆ, ಎಷ್ಟು ಇಂಚಿನ ಎದೆ ಇದ್ದರೂ ಪ್ರಯೋಜನ ಇಲ್ಲ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅತಿವೃಷ್ಟಿ, ಅನಾವೃಷ್ಟಿಯಿಂದ ರಾಜ್ಯ ನಲುಗಿದ್ದರೂ ಪರಿಸ್ಥಿತಿ ವೀಕ್ಷಣೆಗೆ ಮೋದಿ ಅವರು ಕರ್ನಾಟಕಕ್ಕೆ ಬರಲೇ ಇಲ್ಲ. ವಿದೇಶ ಸುತ್ತಿಕೊಂಡು ಟ್ರಂಪ್‌ ಪ್ರಚಾರಕ್ಕೆ ಹೋಗಿದ್ದರು’ ಎಂದು ಕಟಕಿಯಾಡಿದರು.

‘ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯ ಹಾಕಿದ್ದೆ. ಆದರೆ ಸರ್ಕಾರ ಒಪ್ಪಲೇ ಇಲ್ಲ. ರಾಜ್ಯದ 39ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. 22 ಜಿಲ್ಲೆಗಳಲ್ಲಿ ನೆರೆಯಿಂದ ಹಾನಿ ಸಂಭವಿಸಿದೆ. ಅತಿವೃಷ್ಟಿ ಸಂಭವಿಸಿದ 60 ದಿನಗಳ ನಂತರ ಕೇಂದ್ರ ಸರ್ಕಾರವು ಧೂಪ ಹಾಕಿದಂತೆ ₹ 1200 ಕೋಟಿ ನೆರವು ಮಂಜೂರು ಮಾಡಿದೆ’ ಎಂದು ವ್ಯಂಗ್ಯವಾಡಿದರು.

ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು ಸರಿಯಲ್ಲ. ಮಾಧ್ಯಮಗಳನ್ನು ಹತ್ತಿಕ್ಕುವ ಕೆಲಸ ಇದು. ಬಿಜೆಪಿಯವರಿಗೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಹೀಗಾಗಿ, ಈ ರೀತಿ ಮಾಡಿದ್ದಾರೆ. ಅವರದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು.

‘ಪ್ರತಿಪಕ್ಷ ನಾಯಕ ಮಾತನಾಡುವಾಗ ನಿರ್ಬಂಧ ಹಾಕಿದ ನಿದರ್ಶನ ಕರ್ನಾಟಕದ ವಿಧಾನಸಭೆ ಅಧಿವೇಶನ ಇತಿಹಾಸದಲ್ಲಿ ಇರಲಿಲ್ಲಿ. ಈ ಅಧಿವೇಶನದಲ್ಲಿ ಸ್ಪೀಕರ್‌ ಈ ಕೆಲಸ ಮಾಡಿದರು. ಮೋದಿ, ಅಮಿತ್‌ ಶಾ ಯಾರಿಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ’ ಎಂದು ಚುಚ್ಚಿದರು.

‘ಈ ಜಿಲ್ಲೆಯ ಕಳಸ ಭಾಗದಲ್ಲಿ ಅತಿವೃಷ್ಟಿ ಸಂತ್ರಸ್ತ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈವರೆಗೆ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಆ ರೈತರ ಮನೆಗಳಿಗೆ ಭೇಟಿ ನೀಡಿಲ್ಲ. ಇನ್ನು ಇಲ್ಲಿನ ಸಂಸದೆ ಶೋಭಾ ಕರಂದ್ಲಾಜೆ ಎಲ್ಲಿದ್ದಾರೊ ಗೊತ್ತಿಲ್ಲ?’ ಎಂದು ತಿವಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್‌ಗೆ ಒಲ್ಲದ ಶಿಶು ಎಂದು ಅವರದ್ದೇ ಪಕ್ಷದ ಯತ್ನಾಳ್‌ ಹೇಳಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ನಿಷ್ಕ್ರಿಯವಾಗಿದೆ’ ಎಂದರು.

‘ಅನರ್ಹ ಶಾಸಕರು ಕಾಂಗ್ರೆಸ್‌ ತತ್ವ, ಸಿದ್ದಾಂತ ಒಪ್ಪಿ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ಖಾತ್ರಿ ನೀಡಲ್ಲ. ಟಿಕೆಟ್‌ ಯಾರಿಗೆ ನೀಡಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಉತ್ತರಿಸಿದರು.

‘ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ವಿಕ್ಷಕರು ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಿದ್ದಾರೆ. ಶೀಘ್ರದಲ್ಲಿ ಅಂತಿಮಗೊಳಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಮುಖಂಡರಾದ ಡಾ.ಡಿ.ಎಲ್‌.ವಿಜಯಕುಮಾರ್‌, ಗಾಯಿತ್ರಿ ಶಾಂತೇಗೌಡ, ಎಂ.ಸಿ.ಶಿವಾನಂದ ಸ್ವಾಮಿ, ಎಂ.ಎಲ್‌.ಮೂರ್ತಿ, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)