ಸೋಮವಾರ, ಅಕ್ಟೋಬರ್ 21, 2019
26 °C
ಅತಿವೃಷ್ಟಿ; ಸಂತ್ರಸ್ತರ ಅರ್ಜಿಗಳ ತ್ವರಿತ ವಿಲೇವಾರಿಗೆ ಒತ್ತಾಯ

ಮನೆಬಾಡಿಗೆ ಪಾವತಿ ವಿವರ ನೀಡಿ: ಭೋಜೇಗೌಡ

Published:
Updated:

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಮನೆ ಕಳೆದುಕೊಂಡಿರುವ ಎಷ್ಟು ಮಂದಿಗೆ ತಿಂಗಳಿಗೆ ₹ 5,000 ಮನೆ ಬಾಡಿಗೆ ಪಾವತಿಸಲಾಗಿದೆ ಎಂಬ ವಿವರವನ್ನು ನೀಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌.ಭೋಜೇಗೌಡ ಇಲ್ಲಿ ಬುಧವಾರ ಒತ್ತಾಯಿಸಿದರು.

‘ಮನೆ ಕಳೆದುಕೊಂಡವರಿಗೆ ತಿಂಗಳಿಗೆ ಐದು ಸಾವಿರ ಪಾವತಿಸುವುದಾಗಿ ಸರ್ಕಾರ ಹೇಳಿದೆ. ಈ ಬಾಬ್ತಿನಲ್ಲಿ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಪಾವತಿಸಲಾಗಿದೆ ಎಂಬ ಬಗ್ಗೆ ವಿವರ ನೀಡಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರಕೃತಿ ವಿಕೋಪದಿಂದ ಮಲೆನಾಡು ಭಾಗ ತತ್ತರಿಸಿದೆ. ತೋಟಗಳು ನಾಶವಾಗಿವೆ, ಜಮೀನುಗಳು ಕೊಚ್ಚಿ ಹೋಗಿವೆ. ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಳಸ ಭಾಗದಲ್ಲಿ ಇಬ್ಬರು ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಸಿಗದೆ ರೈತರು ಆತ್ಮಹತ್ಯೆ ಹಾದಿಹಿಡಿದಿದ್ದಾರೆ. ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ಒದಗಿಸಲು ಸರ್ಕಾರ ಗಮನ ಕ್ರಮಹಿಸಬೇಕು’ ಎಂದು ಆಗ್ರಹಿಸಿದರು.

‘ಪರಿಹಾರ ಕೋರಿ ಜಿಲ್ಲಾಡಳಿತಕ್ಕೆ ಸಹಸ್ರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರಕರಣಗಳ ಅಸಲಿಯುತ್ತು ಪರಿಶೀಲನೆ ನಂತರ ಮಾಡಿ, ಮೊದಲು ಪರಿಹಾರ ಕೊಡಿ. ಮನೆ, ಆಸ್ತಿ ಎಲ್ಲವನ್ನು ಕೆಳದುಕೊಂಡು ಜೀವನ ಸಾಗಿಸುವುದು ದುರ್ಬರವಾಗಿದೆ’ ಎಂದರು.

‘ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿಯೇ ತಿಂಗಳುಗಟ್ಟಲೇ ಇದ್ದಾರೆ. ಪರಿಹಾರ ಕೇಂದ್ರಗಳಿಗೆ ಹೋಗದೆ ಕೆಲವರು ನೆಂಟರ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಂತ್ರಸ್ತರನ್ನು ಗುರುತಿಸಿ ಪರಿಹಾರ ಒದಗಿಸಲು ಸರ್ಕಾರ ವಿಫಲವಾಗಿದೆ’ ಎಂದು ದೂಷಿಸಿದರು.

‘ಅರ್ಜಿಗಳ ವಿಲೇವಾರಿ ಸರ್ಕಾರ ಉತ್ಸಾಹ ತೋರುತ್ತಿಲ್ಲ. ಸಂತ್ರಸ್ತರ ಎಷ್ಟು ಬಾರಿ ಕಚೇರಿಗಳಿಗೆ ಅಲೆಯಲು ಸಾಧ್ಯ? ಅವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಈಗಲೂ ಕಾಲ ಮಿಂಚಿಲ್ಲ ತಕ್ಷಣವೇ ಪರಿಹಾರ ನೀಡಲು ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಜಮೀಲ್‌ ಅಹಮದ್‌, ಚಂದ್ರಪ್ಪ, ಸೋಮೇಗೌಡ, ಸಿರಾಜ್‌ ಹುಸೇನ್‌, ಹೊಲದಗದ್ದೆ ಗಿರೀಶ್‌ ಇದ್ದರು.

Post Comments (+)