ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಚಿಕಿತ್ಸೆಗೆ ಅವಕಾಶ: ಡಾ.ಬಗಾದಿ ಗೌತಮ್‌

ಕೋವಿಡ್‌ ಸೋಂಕಿನ ಲಕ್ಷಣ, ಅನ್ಯಕಾಯಿಲೆ ಇಲ್ಲದ ಪಾಸಿಟಿವ್‌ ಪ್ರಕರಣ
Last Updated 23 ಜುಲೈ 2020, 16:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕೋವಿಡ್‌ ದೃಢಪಟ್ಟಿದ್ದು, ಸೋಂಕಿನ ಲಕ್ಷಣಗಳಾಗಲಿ, ಅನ್ಯ ಕಾಯಿಲೆಗಳಾಗಲಿ ಇಲ್ಲದವರಿಗೆ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯಲು ಅವಕಾಶ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

‘ಮನೆಯಲ್ಲಿ ಪ್ರತ್ಯೇಕ ಕೋಣೆ ಇರಬೇಕು. ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು. ಅದರೊಳಗೆ ಶೌಚಾಲಯ ಇರಬೇಕು. ಕೋವಿಡ್‌ ಖಾತ್ರಿಯಾಗಿರುವ ವ್ಯಕ್ತಿಯ ಆರೈಕೆಗೆ ಮನೆಯಲ್ಲಿ ಒಬ್ಬರು ಇರಬೇಕು. ಆ ವ್ಯಕ್ತಿಗೆ ಮಧುಮೇಹ, ಅಧಿಕ/ಕಡಿಮೆ ರಕ್ತದೊತ್ತಡ, ಹೃದಯ, ಶ್ವಾಸಕೋಶ, ಮೂತ್ರಕೋಶಕ್ಕೆ ಸಂಬಂಧಿಸಿದ ರೋಗಗಳು, ರಕ್ತಹೀನತೆ, ಉಬ್ಬಸ, ಪಾರ್ಶ್ವವಾಯ ಮೊದಲಾದ ಗಂಭೀರ ಕಾಯಿಲೆಗಳು ಇರಬಾರದು ಎಂದು ಮಾರ್ಗಸೂಚಿಯಲ್ಲಿ ಇದೆ’ ಎಂದು ತಿಳಿಸಿದ್ದಾರೆ.

‘ಲಕ್ಷಣಗಳಿರುವವರು, ಇಲ್ಲದವರು, ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯಬಹುದಾದವರ ವಿಂಗಡಣೆ ನಿಟ್ಟಿನಲ್ಲಿ ಈ ಕಾರ್ಯಪ್ರವೃತವಾಗಿದ್ದೇವೆ. ತಾಲ್ಲೂಕು ಮಟ್ಟದಲ್ಲೂ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

‘ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುವವರು ನಿಗದಿತ ಅವಧಿ ಮುಗಿಯುವವರೆಗೆ ಮನೆಯಿಂದ ಹೊರಗೆ ಹೋಗುವಂತಿಲ್ಲ. ಮಾರ್ಗಸೂಚಿ ಉಲ್ಲಂಘಿಸಿದರೆ ಅವರ ವಿರುದ್ಧ ಪ್ರಕರಣ (ಎಫ್‌ಐಆರ್‌) ದಾಖಲಿಸಲಾಗುವುದು. ಮನೆಯಲ್ಲೇ ಚಿಕಿತ್ಸೆ ಅವಧಿ ಮುಗಿದ ನಂತರ ಎರಡು ವಾರ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಈ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದ್ದಾರೆ.

ಕಾರ್ಯಪಡೆ ಗಮನಕ್ಕೆ ತನ್ನಿ: ಡಿ.ಸಿ
ಯಾರಿಗಾದರೂ ಶೀತ ಜ್ವರ ಮಾದರಿ (ಐಎಲ್‌ಐ), ಉಸಿರಾಟದ ತೀವ್ರ ಸಮಸ್ಯೆ (ಎಸ್‌ಎಆರ್‌ಐ) ಲಕ್ಷಣಗಳಿದ್ದರೆ ತಕ್ಷಣ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ವಾರ್ಡ್‌, ಬೂತ್‌ಮಟ್ಟದ ಕಾರ್ಯಪಡೆ (ಟಾಸ್ಕ್‌ ಫೋರ್ಸ್‌) ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮನವಿ ಮಾಡಿದ್ದಾರೆ.

ಪ್ರಕಣಗಳನ್ನು ಮುಚ್ಚಿಡಲು ಪ್ರಯತ್ನಿಸಬಾರದು. ತಕ್ಷಣ ತಿಳಿಸುವುದರಿಂದ ಚಿಕಿತ್ಸೆ ಕೊಡಿಸಲು ಅನುಕೂಲವಾಗುತ್ತದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳು ಜಾಸ್ತಿಇವೆ. ಎಲ್ಲಿಗೂ ಪ್ರಯಾಣ ಮಾಡಬೇಡಿ. ಅನಿವಾರ್ಯ ಕೆಲಸ ಇದ್ದರೆ ಮಾತ್ರ ಪರ ಊರುಗಳಿಗೆ ಹೋಗಿ. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಕಾಫಿನಾಡಿನಲ್ಲಿ ದೃಢಪಟ್ಟಿರುವ ಒಟ್ಟು ಪ್ರಕರಣಗಳಲ್ಲಿ ಹೊರದೇಶ, ರಾಜ್ಯ, ಜಿಲ್ಲೆಗಳಿಂದ ಬಂದವರೇ ಜಾಸ್ತಿ ಇದ್ದಾರೆ ಎಂದು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT