ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭ

Last Updated 3 ಡಿಸೆಂಬರ್ 2021, 4:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪಿ.ಆರ್‌. ತಿಪ್ಪೇಸ್ವಾಮಿ ಅವರು ಚಿತ್ರಕಲೆ, ಜಾನಪದ, ಸಾಹಿತ್ಯ, ಸಮಾಜ ಕಾರ್ಯ ಈ ನಾಲ್ಕು ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಅವರು ಕಲಾವಿದರಿಗೆ ಮಾತ್ರವಲ್ಲ ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಬಣ್ಣಿಸಿದರು.

ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಶಾಂತಿ ನಿಕೇತನ ಚಿತ್ರಕಲಾ ವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಂಸ್ಕಾರ, ಸಂಸ್ಕೃತಿಗಳು ಲಲಿತ ಕಲೆಗಳ ಮೂಲ. ವಿಷಯ ಕಲಿಕೆಗೆ ಆದ್ಯತೆ ನೀಡಿದ್ದೇವೆ, ಸಂಸ್ಕೃತಿ, ಸಂಸ್ಕಾರ ಕಲಿಸುವುದನ್ನು ಮರೆತಿದ್ದೇವೆ. ಶಿಕ್ಷಣದಲ್ಲಿ ಸಂಸ್ಕೃತಿ, ಸಂಸ್ಕಾರ ಕಲಿಸುವ ಕಡೆಗೆ ಒತ್ತು ನೀಡಬೇಕಿದೆ’ ಎಂದು ಹೇಳಿದರು.

ಪಿ.ಆರ್‌.ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪ್ರತಿಷ್ಠಾನವು ಏಳು ವರ್ಷಗಳಿಂದ ತಿಪ್ಪೇಸ್ವಾಮಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನ ಆಯೋಜಿಸುತ್ತಿದೆ. ಪ್ರತಿ ವರ್ಷ ಒಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಅಧ್ಯಕ್ಷತೆ ವಹಿಸಿದ್ದರು. ಶಾಂತಿ ನಿಕೇತನ ಚಿತ್ರಕಲಾ ವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌, ಪಿಆರ್‌ಟಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ, ಕಾರ್ಯದರ್ಶಿ ಕೆ.ಸಿ. ಮಹದೇವ ಶೆಟ್ಟಿ, ಕೋಶಾಧ್ಯಕ್ಷ ಪ್ರೊ.ಎಚ್‌.ಎಂ.ಪರಮೇಶ್ವರಯ್ಯ, ಸಂಚಾಲಕ ರುದ್ರಣ್ಣ ಹರ್ತಿಕೋಟೆ, ನಿರ್ದೇಶಕ ಸಿ.ಚಿಕ್ಕಣ್ಣ, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಜಾನಪದ ಕಲಾವಿದ ಮೈಲನಹಳ್ಳಿ ರೇವಣ್ಣ, ಶಿಲ್ಪಾ ಆಚಾರ್ಯ ಇದ್ದರು.

ಪ್ರಶಸ್ತಿ ಪ್ರದಾನ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜಾನಪದ ವಿದ್ವಾಂಸ ಪ್ರೊ.ಪಿ.ತುಕಾರಾಂ ಪೂಜಾರಿ ಅವರಿಗೆ ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಸ್ಕಾರವು ₹ 25 ಸಾವಿರ ನಗದು, ಫಲಕ ಒಳಗೊಂಡಿದೆ.

ಪ್ರಶಸ್ತಿಗೆ ಭಾಜನರಾದ ಮತ್ತೊಬ್ಬರಾದ ಧಾರವಾಡದ ಚಿತ್ರಕಲಾವಿದರಾದ ಗಾಯಿತ್ರಿ ದೇಸಾಯಿ ಅವರು ಗೈರು ಹಾಜರಾಗಿದ್ದರು. ಅವರ ಪರವಾಗಿ ಕಲಾವಿದ ವಿಠ್ಠಲ ರೆಡ್ಡಿ ಝಳಕಿ ಅವರು ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT