ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಇದ್ದೂ ಇಲ್ಲದಂತಾದ ಶುದ್ಧಗಂಗಾ ಘಟಕ

ಘಟಕಗಳ ಅಕ್ಕಪಕ್ಕ ಗಿಡಗಂಟಿ, ಕಸರಾಶಿ
Last Updated 16 ಮೇ 2022, 3:22 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಕೆಲವೆಡೆ ಶುದ್ಧಗಂಗಾ ಘಟಕಗಳು ಇದ್ದೂ ಇಲ್ಲದಂತಾಗಿವೆ. ನೀರಿನ ಕೊರತೆ, ಯಾಂತ್ರಿಕ ತೊಡಕು, ನಿರ್ವಹಣೆ ಸಮಸ್ಯೆಗಳಿಂದ ಬಳಕೆಯಾಗುತ್ತಿಲ್ಲ.

ದಂಟರಮಕ್ಕಿ, ಹಿರೇಮಗಳೂರು, ಉಂಡೇದಾಸರಹಳ್ಳಿ, ಲಕ್ಷ್ಮೀಶನಗರ, ವಿಜಯಪುರ, ಉಪ್ಪಳ್ಳಿ, ಕೋಟೆ, ಗೃಹಮಂಡಳಿ ಬಡಾವಣೆ, ರಾಮನಹಳ್ಳಿ, ನಗರ ಪೊಲೀಸ್‌ ಠಾಣೆ ಹಿಂಭಾಗ (ಮಾರುಕಟ್ಟೆ ರಸ್ತೆ), ಕೆಂಪನಹಳ್ಳಿ, ಕಲ್ದೊಡ್ಡಿ ಸಹಿತ 13 ಕಡೆಗಳಲ್ಲಿ ಈ ಘಟಕಗಳು ಇವೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು (ಕೆಯುಡಿಡಬ್ಲ್ಯುಎಸ್‌) ದಂಟರಮಕ್ಕಿ, ಹಿರೇಮಗಳೂರು, ಉಂಡೇದಾಸರಹಳ್ಳಿ, ಘಟಕಗಳನ್ನು ನಿರ್ಮಿಸಿದ್ದಾರೆ. ನಗರಸಭೆಗೆ ಹಸ್ತಾಂತರಿಸಿಲ್ಲ. ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.

ಶೀತಲ ಸಮರ: ಶುದ್ಧಗಂಗಾ ಘಟಕಗಳ ವಿಚಾರದಲ್ಲಿ ನಗರಸಭೆ ಮತ್ತು ಕೆಯುಡಿಡಬ್ಲ್ಯುಎಸ್‌ ನಡುವೆ ಶೀತಲ ಸಮರ ಏರ್ಪಟ್ಟಿದೆ. ಮೂರು ಘಟಕ ನಿರ್ಮಿಸಿ ಮೂರು ವರ್ಷವಾದರೂ ನಗರಸಭೆಗೆ ಹಸ್ತಾಂತರಿಸಿಲ್ಲ.

ಘಟಕ ನಿರ್ಮಾಣ ನಮ್ಮ ಜವಾಬ್ದಾರಿ, ನಿರ್ವಹಣೆ ನಗರಸಭೆ ಹೊಣೆ ಎಂದು ಮಂಡಳಿಯವರು ಹೇಳುತ್ತಾರೆ. ಘಟಕಗಳನ್ನು ಈವರೆಗೆ ಹಸ್ತಾಂತರಿಸಿಯೇ ಇಲ್ಲ ಎಂದು ನಗರಸಭೆಯವರು ಹೇಳುತ್ತಾರೆ. ‘ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತಾಗಿದೆ ಈ ಮೂರು ಘಟಕಗಳ ಸ್ಥಿತಿ.

‘ಕೆಯುಡಿಡಬ್ಲ್ಯುಎಸ್‌ ನಿರ್ಮಿಸಿರುವ ಘಟಕಗಳಲ್ಲಿ ಸಮಸ್ಯೆ ಇದ್ದರೆ ಪರಿಶೀಲಿಸಿ ಪರಿಹರಿಸಲಾಗುವುದು. ವಾರದ ಹಿಂದೆ ಪರಿಶೀಲಿಸಿ ಕಾರ್ಯನಿರ್ವಹಿಸುವಂತೆ ಮಾಡಿದ್ದೆವು’ ಎಂದು ಕೆಯುಡಿಡಬ್ಲ್ಯುಎಸ್‌ ಎಂಜಿನಿಯರ್‌ ಶಿಲ್ಪಾ ತಿಳಿಸಿದರು.

ಲಕ್ಷ್ಮೀಶನಗರ, ವಿಜಯಪುರ, ಕೋಟೆ, ಉಪ್ಪಳ್ಳಿ ಘಟಕಗಳ ನಿರ್ವಹಣೆ ಯೂನಿವರ್ಸಲ್‌ ಅಕ್ವಾ ಸಂಸ್ಥೆಗೆ ವಹಿಸಲಾಗಿದೆ. ಲಕ್ಷ್ಮೀಶ ನಗರ ಘಟಕದಲ್ಲಿ ನೀರಿನ ಸಮಸ್ಯೆ ಇದ್ದರೆ, ವಿಜಯಪುರದಲ್ಲಿ ಕೊಳವೆ ಬಾವಿ ಸಮಸ್ಯೆ ಇದೆ.

‘ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಎರಡರಲ್ಲಿ ನೀರಿನ ಸಮಸ್ಯೆ ಇದೆ. ಯಂತ್ರಕ್ಕೆ ₹ 5 ನಾಣ್ಯ ಹಾಕಿದರೆ 20 ಲೀಟರ್‌ ಕ್ಯಾನ್‌ ತುಂಬಿಸಿಕೊಳ್ಳಬಹುದು. ಕಾರ್ಡ್‌ ವ್ಯವಸ್ಥೆ ಇದೆ. ಕಾರ್ಡ್‌ ಇದ್ದವರಿಗೆ ₹ 4ಕ್ಕೆ 20 ಲೀಟರ್‌ ಪಡೆದುಕೊಳ್ಳಬಹುದು. ಬೇಸಿಗೆಯಲ್ಲಿ ಒಂದು ಘಟಕದಿಂದ ನಿತ್ಯ ಸರಾಸರಿ 150 ಕ್ಯಾನ್‌ ನೀರು ಖರ್ಚಾಗುತ್ತದೆ’ ಎಂದು ಯೂನಿವರ್ಸಲ್‌ ಅಕ್ವಾ ಸಿಬ್ಬಂದಿ ರಜತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗಿಡಗಂಟಿ, ಕಸ ರಾಶಿ: ಉಂಡೇದಾಸರಹಳ್ಳಿ, ದಂಟರಮಕ್ಕಿಯ ಮುಖ್ಯ ವೃತ್ತ ಮತ್ತು ಬೇಲೂರು ಮಾರ್ಗದ ಹಿರೇಮಗಳೂರು ಘಟಕಗಳ ಅಕ್ಕಪಕ್ಕ ಕಸಕಡ್ಡಿ, ಪ್ಲಾಸ್ಟಿಕ್‌ ಕವರ್‌ಗಳು, ಖಾಲಿ ಬಾಟಲಿಗಳು ಬಿದ್ದಿವೆ.

ಹಿರೇಮಗಳೂರು ಘಟಕದ ಅಕ್ಕಪಕ್ಕ ಪ್ರದೇಶ ಗಲೀಜು ಕೊಂಪೆಯಾಗಿದೆ. ದುರ್ನಾತ ಬೀರುತ್ತಿದೆ. ಕಟ್ಟಡದ ಸುತ್ತ ಹುಲ್ಲು, ಪಾರ್ಥೆನಿಯಂ ಸಸ್ಯಗಳು ಬೆಳೆದಿವೆ.

‘ಒಂದೂವರೆ ತಿಂಗಳಿನಿಂದ ನೀರಿನ ಘಟಕದ ಬಾಗಿಲು ತೆರೆದಿಲ್ಲ. ನೀರು ಒಯ್ಯಲು ಜನರು ಬರುತ್ತಾರೆ, ಬಾಗಿಲು ಮುಚ್ಚಿರುವುದನ್ನು ನೋಡಿ ವಾಪಸ್‌ ಹೋಗುತ್ತಾರೆ. ಘಟಕಕ್ಕೆ ನೀರು ಪೂರೈಕೆಯಾಗುತ್ತಿಲ್ಲ’ ಎಂದು ದಂಟರಮಕ್ಕಿಯ ನಿವಾಸಿ ಅವಿನಾಶ್‌ ದೂರಿದರು.

ಸಿಬ್ಬಂದಿ ಇಲ್ಲ: ಸುಮಾರು ಐದು ಘಟಕಗಳಲ್ಲಿ ನಿರ್ವಹಣೆಗೆ ಸಿಬ್ಬಂದಿ ಇಲ್ಲ. ಘಟಕದ ಬಾಗಿಲಿನಲ್ಲಿ ಸಂಪರ್ಕ ಮೊಬೈಲ್‌ ನಂಬರ್‌ ನಮೂದಿಸಲಾಗಿದೆ. ಸಂಖ್ಯೆಗೆ ಕರೆ ಮಾಡಿದರೆ ಸ್ವೀಕರಿಸುವವರಿಲ್ಲ.

ಕೆಲವು ಘಟಕಗಳಲ್ಲಿ ಬೆಳಿಗ್ಗೆ 7ರಿಂದ 11 ಗಂಟೆ ಮತ್ತು ಸಂಜೆ 4ರಿಂದ 7 ಗಂಟೆವರೆಗೆ ಒಬ್ಬರು ಸಿಬ್ಬಂದಿ ಇರುತ್ತಾರೆ. ಸಿಬ್ಬಂದಿ ಇಲ್ಲದ ಘಟಕಗಳು ನಿರ್ವಹಣೆ ಇಲ್ಲದೆ ಮೂಲೆಗುಂಪಾಗಿವೆ. ಕಾರ್ಡ್‌ ವ್ಯವಸ್ಥೆಯೂ ಸರಿಯಾಗಿ ನಡೆಯುತ್ತಿಲ್ಲ.

‘ಯಂತ್ರಕ್ಕೆ ನಾಣ್ಯ ಹಾಕಿದರೂ ನೀರು ಬರುತ್ತಿಲ್ಲ. ಶುದ್ಧಗಂಗಾ ಘಟಕದ ಸುತ್ತ ಅನೈರ್ಮಲ್ಯ ತಾಂಡವವಾಡುತ್ತಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು’ ಎಂದು ಹಿರೇಮಗಳೂರು ನಿವಾಸಿ ಸೋಮಶೇಖರ್‌ ಒತ್ತಾಯಿಸುತ್ತಾರೆ.

ಯಂತ್ರ ದೋಷ: ಕೆಲವೆಡೆ ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಹಿರೇಮಗಳೂರು ಯಂತ್ರಕ್ಕೆ ನಾಣ್ಯ ಹಾಕಿದರೆ ಅದು ವಾಪಸ್‌ ಬರುತ್ತದೆ. ನಲ್ಲಿಯಲ್ಲಿ ನೀರು ಬರಲ್ಲ.

ಕೆಲವು ಕಡೆ ಯಂತ್ರಗಳು ಹಾಳಾಗಿವೆ. ತುಕ್ಕು ಹಿಡಿಯುವ ಹಂತಕ್ಕೆ ತಲುಪಿವೆ.ಕೆಲ ಘಟಕಗಳಲ್ಲಿ ಪೈಪು, ವಾಲ್ವ್‌ಗಳು ಕಳುವಾಗಿವೆ.

‘ಗೃಹಮಂಡಳಿ ಬಡಾವಣೆ, ರಾಮನಹಳ್ಳಿ, ನಗರ ಪೊಲೀಸ್‌ ಠಾಣೆ ಹಿಂಭಾಗ (ಮಾರುಕಟ್ಟೆ ರಸ್ತೆ), ಕೆಂಪನಹಳ್ಳಿ, ಕಲ್ದೊಡ್ಡಿ ಸಹಿತ ಆರು ಘಟಕಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ವಹಿಸಲಾಗುತ್ತಿದೆ. ಕಲ್ದೊಡ್ಡಿ ಘಟಕದಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ. ನೀರು ಪೂರೈಕೆಗೆ ನಗರಸಭೆಗೆ ಮನವಿ ಸಲ್ಲಿಸಲಾಗಿದೆ, ಅವರು ಈವರೆಗೆ ಕ್ರಮ ವಹಿಸಿಲ್ಲ. ಬಾಕಿ ಐದು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಘಟಕಗಳಿಗೆ ಸಿಬ್ಬಂದಿ ನೇಮಿಸಿದ್ದೇವೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ತಿಳಿಸಿದರು.

ಕೆಲವು ಕಡೆ ಈ ಘಟಕಗಳಿಗೆ ಅಮೃತ್‌ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗಿದೆ. ಅಮೃತ್‌ ಸಂಪರ್ಕ ಕಲ್ಪಿಸಿರುವ ಕೆಲವೆಡೆ ಘಟಕಕ್ಕೆ ಸಾಕಷ್ಟು ನೀರು ಲಭ್ಯವಾಗುತ್ತಿಲ್ಲ. ಕೆಲವು ಘಟಕಗಳಲ್ಲಿ ಕೊಳವೆ ಬಾವಿಗಳಿಂದ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಈ ಪೈಕಿ ಕೆಲವು ಕೊಳವೆ ಬಾವಿಗಳಲ್ಲಿ ನೀರು ಇಲ್ಲ.

ಒಂದು ಘಟಕಕ್ಕೆ ಪ್ರತಿನಿತ್ಯ ಕನಿಷ್ಠ ಆರು ಸಾವಿರ ಲೀಟರ್‌ ನೀರು ಒದಗಿಸುವ ನಿಟ್ಟಿನಲ್ಲಿ ನಗರಸಭೆಯವರು ಕ್ರಮ ವಹಿಸಬೇಕು ಎಂಬುದು ಘಟಕದ ನಿರ್ವಹಣೆ ಮಾಡುತ್ತಿರುವವರ ಮನವಿ.

‘15 ದಿನಗಳಲ್ಲಿ ಸಮಸ್ಯೆ ಪರಿಹಾರ’
ಶುದ್ಧಗಂಗಾ ಘಟಕಗಳನ್ನು ಪರಿಶೀಲನೆ ಮಾಡುತ್ತೇವೆ. ಕೆಯುಡಿಡಬ್ಲ್ಯುಎಸ್‌ ನಿರ್ಮಿಸಿರುವ ಮೂರು ಘಟಕಗಳನ್ನು ನಗರಸಭೆ ಸುಪರ್ದಿಗೆ ಪಡೆದುಕೊಳ್ಳುತ್ತೇವೆ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವೆಡೆ ಯಂತ್ರಗಳು, ನೀರಿನ ಸಮಸ್ಯೆ ಇದೆ. ಇನ್ನು 15 ದಿನಗಳಲ್ಲಿ ಸಮಸ್ಯೆ ಪರಿಹರಿಸುತ್ತೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT