ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣ: ಸಮಸ್ಯೆಗಳ ಸರಮಾಲೆ

ಕುಡಿಯುವ ನೀರು, ಸ್ವಚ್ಛತೆ ಕೊರತೆ, ಶೌಚಾಲಯ ಅವ್ಯವಸ್ಥೆ
Last Updated 14 ನವೆಂಬರ್ 2022, 5:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಹಲವು ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ ಕೊರತೆ, ಶೌಚಾಲಯ ದುಸ್ಥಿತಿ, ಆಸನಗಳ ಅವ್ಯವಸ್ಥೆ, ನೀರಿನ ಕೊರತೆ ಇದೆ. ಕೆಲವೆಡೆ ನಾಯಿಗಳ ಉಪಟಳ, ರೈಲಿನ ಕೋಚ್‌ ನಂಬರ್‌ ಪ್ರದರ್ಶನ ಫಲಕ ಇಲ್ಲದಿರುವುದು ಮೊದಲಾದ ಸಮಸ್ಯೆಗಳು ಇವೆ.

ಚಿಕ್ಕಮಗಳೂರಿನ ರೈಲು ನಿಲ್ದಾಣದಲ್ಲಿ ಅಂಗವಿಕಲರಿಗಾಗಿ ನಿರ್ಮಿಸಿರುವ ಶೌಚಾಲಯ ದುರ್ಗತಿಯಲ್ಲಿದೆ. ಕಮೋಡ್‌ ಮುರಿದು ಬಿದ್ದಿದೆ. ನೀರಿನ ವ್ಯವಸ್ಥೆ ಇಲ್ಲ. ಬಳಸಲಾಗದ ಸ್ಥಿತಿಗೆ ತಲುಪಿದೆ. ಇನ್ನೊಂದು ಶೌಚಾಲಯಕ್ಕೂ ಬೀಗ ಹಾಕಲಾಗಿದೆ.

ನಿಲ್ದಾಣದ ಆವರಣದಲ್ಲಿ ಇಳಿ ಸಂಜೆಯಲ್ಲಿ ಪಂಡರು ಮದ್ಯಪಾನ ಮಾಡಿ ಮೋಜು ಮಸ್ತಿ ಮಾಡುತ್ತಾರೆ ಎಂಬ ದೂರುಗಳು ಇವೆ.

ನಿಲ್ದಾಣದ ಆವರಣದಲ್ಲಿ ಅಳವಡಿಸಿರುವ ಕಸದ ಡಬ್ಬಿಗಳು ದುರ್ಗತಿಯಲ್ಲಿವೆ. ಕೆಲ ಡಬ್ಬಿಗಳಲ್ಲಿ ಕಸ ವಿಲೇವಾರಿಯಾಗಿಲ್ಲ. ಹಲವು ಡಬ್ಬಿಗಳು ಕಳಚಿ ಬಿದ್ದಿವೆ.

ನೀರಿನ ಘಟಕಗಳಲ್ಲಿ ಕಸಕಡ್ಡಿಗಳು ಬಿದ್ದಿವೆ. ನಲ್ಲಿಗಳಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ನಿಲ್ದಾಣದ ಬದಿಯಲ್ಲಿ (ರೈಲ್ವೆ ಜಾಗ) ಗಿಡಗಂಟಿಗಳು ಬೆಳೆದಿವೆ. ರಸ್ತೆಯಿಂದ ನಿಲ್ದಾಣದ ಕಡೆಗೆ ಸಂಪರ್ಕ ರಸ್ತೆಯು ಹಾಳಾಗಿದೆ. ರಸ್ತೆಯುದ್ದಕ್ಕೂ ಗುಂಡಿಗಳಾಗಿವೆ.

‘ನಿಲ್ದಾಣದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದ ಬಾಗಿಲಿಗೆ ಯಾವಾಗಲೂ ಬೀಗ ಹಾಕಿರುತ್ತಾರೆ. ನಿಲ್ದಾಣ ನಿರ್ವಹಣೆ ಕೊರತೆ ಇದೆ’ ಎಂದು ಪ್ರಯಾಣಿಕ ಸುಂದರ ಗೌಡ ಹೇಳುತ್ತಾರೆ.

ಕುಡಿಯುವ ನೀರು, ಶುಚಿತ್ವ ಕೊರತೆ...

ಕಡೂರು: ಉತ್ತಮ ನಿರ್ವಹಣೆಗೆ ಕೇಂದ್ರ ಸರ್ಕಾರದ ಪ್ರಶಸ್ತಿ ಸಂದಿರುವ ಪಟ್ಟಣದ ಪಟ್ಟಣದ ರೈಲು ನಿಲ್ದಾಣದಲ್ಲಿ ಹಲವು ಕೊರತೆಗಳು ಇವೆ. ನಿಲ್ದಾಣದಲ್ಲಿ ಶುಚಿತ್ವದ ಕೊರತೆ ಇದೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶುದ್ಧೀಕರಣ ಯಂತ್ರ ಹಾಳಾಗಿದೆ.

ಪಾವತಿ ಬಳಕೆ ಶೌಚಾಲಯ ನೀರಿನ ಕೊರತೆಯಿಂದ ಬಹುಹೊತ್ತು ಮುಚ್ಚಿಯೇ ಇರುತ್ತದೆ. ಈಚೆಗೆ ‘ಲಿಫ್ಟ್’ ಕಾರ್ಯಾರಂಭಿಸಿದೆ. ರಸ್ತೆಯಿಂದ ನಿಲ್ದಾಣಕ್ಕೆ ಹೋಗಲು 18 ಕ್ಕೂ ಹೆಚ್ಚು ಮೆಟ್ಟಿಲು ಏರಬೇಕು. ವೃದ್ಧರು, ಅಶಕ್ತರು, ರೋಗಿಗಳು ಪ್ರಯಾಸ ಪಡಬೇಕು. ಪ್ಲಾಟ್ ಫಾರಂನಲ್ಲಿ ಕೋಚ್‌ ಸಂಖ್ಯೆ ಪ್ರದರ್ಶನ ಫಲಕದ ವ್ಯವಸ್ಥೆ ಇಲ್ಲ. ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ರೈಲು ನಿಲ್ದಾಣದೊಳಗೆ ಆರಾಮವಾಗಿ ಪವಡಿಸಿರುತ್ತವೆ.

ಪ್ರತಿನಿತ್ಯ 52 ಕ್ಕೂ ಹೆಚ್ಚು ರೈಲುಗಳು ನಿಲ್ದಾಣದ ಮೂಲಕ ಸಂಚರಿಸುತ್ತವೆ.

ನಿಲ್ದಾಣದ ಎರಡನೇ ಫ್ಲಾಟ್ ಫಾರಂನಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇದೆ. ಇಲ್ಲಿ ಹಂದಿಗಳು ತಿರುಗಾಡುತ್ತವೆ. ನಿಲ್ದಾಣದಿಂದ ಬಸ್ ನಿಲ್ದಾಣ ಕಡೆಗಿನ ಸಂಪರ್ಕ ದಾರಿ ಹದಗೆಟ್ಟಿದೆ. ಮಳೆಗಾಲದಲ್ಲಿ ಓಡಾಟ ತಾಪತ್ರಯವಾಗಿದೆ ಎಂದು ಸಾರ್ವಜನಿಕರು ಸಂಕಷ್ಟ ತೋಡಿಕೊಳ್ಳುತ್ತಾರೆ.

ಕೊರತೆಗಳ ನಡುವೆ ಪ್ರಗತಿಯತ್ತ

ಬೀರೂರು: ಪಟ್ಟಣದ ರೈಲು ನಿಲ್ದಾಣ ಹಂತಹಂತವಾಗಿ ಪ್ರಗತಿಯ ಪಥದಲ್ಲಿ ಸಾಗಿದ್ದರೂ ಆಗಬೇಕಿರುವ ಕೆಲಸಗಳು ಸಾಕಷ್ಟು ಇವೆ.

ಶುದ್ಧ ಕುಡಿಯುವ ನೀರು ವ್ಯವಸ್ಥೆ ಇಲ್ಲದಿರುವುದು ನಿಲ್ದಾಣದಲ್ಲಿನ ಪ್ರಮುಖ ಕೊರತೆ. 2 ಮತ್ತು 3ನೇ ಪ್ಲಾಟ್‌ ಫಾರಂಗಳಲ್ಲಿ ಶೌಚಾಲಯದ ಸಮಸ್ಯೆ ಇದೆ.

ಎತ್ತರದ ಸ್ಕೈವಾಕ್‌(54 ಮೆಟ್ಟಿಲುಗಳು) ಹತ್ತಿ ಪಕ್ಕದ ಪ್ಲಾಟ್‌ಫಾರಂಗಳಿಗೆ ತಲುಪಬೇಕು. ರೈಲ್ವೆ ಕ್ಯಾಂಟೀನ್‌ ಇಲ್ಲ. ಈ ಹಿಂದೆ ವ್ಯವಸ್ಥಾಪಕರೊಬ್ಬರ ಆಸಕ್ತಿಯಿಂದ ಹಸಿರುಟ್ಟು ನಲಿದಿದ್ದ ಉದ್ಯಾನ ನಿರ್ವಹಣೆ ಕೊರತೆಯಿಂದ ಹಾಳು ಬಿದ್ದಿದೆ.

ಪಟ್ಟಣದಲ್ಲಿ ಬ್ರಿಟಿಷರ ಕಾಲದಿಂದಲೂ ಬೀರೂರು ರೈಲ್ವೆ ಜಂಕ್ಷನ್‌ ಕಾರ್ಯನಿರ್ವಹಿಸುತ್ತಿದೆ. ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ, ದೆಹಲಿ, ಮುಂಬಯಿ, ಚೆನ್ನೈ, ತಿರುಪತಿ, ಜೈಪುರ, ಜೋಧಪುರ, ಬಿಕಾನೇರ್‌, ವಾರಾಣಸಿ, ಪಂಢರಪುರ, ವಿಜಯಪುರ, ಬಾಗಲಕೋಟೆ, ಅಜ್ಮಿರ್‌, ಅಹಮದಾಬಾದ್‌, ಚಂಡೀಗಢ ಹೀಗೆ ದೇಶದ ವಿವಿಧೆಡೆಗೆ ಸಂಚರಿಸುವ ರೈಲುಗಳು ನಿಲ್ದಾಣದ ಮೂಲಕ ಸಂಚರಿಸುತ್ತವೆ.

ಎರಡನೇ ಪ್ಲಾಟ್‌ಫಾರಂಗೆ ಬರುವ ಸಾಕಷ್ಟು ರೈಲುಗಳಲ್ಲಿ ಮೊದಲೇ ಕಾಯ್ದಿರಿಸಿದ್ದರೂ ಸಂಬಂಧಿತ ಬೋಗಿಗಳ ಬಾಗಿಲು ತೆರೆದಿರುವುದಿಲ್ಲ, ಇದರಿಂದ ಲಗೇಜ್‌ ಇದ್ದ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಎನ್ನುವುದು ಪ್ರಯಾಣಿಕರ ದೂರು.

ಮೈಸೂರು ಕಡೆ ತೆರಳುವ ರೈಲುಗಳಿಗೆ ಇತ್ತೀಚೆಗೆ 4 ಮತ್ತು5ನೇ ಪ್ಲಾಟ್‌ಫಾರಂನಲ್ಲಿ ಜಾಗ ಕೊಡುತ್ತಿರುವುದು, ಅಲ್ಲದೆ ರೈಲು ಇನ್ನೇನು ನಿಲ್ದಾಣ ಪ್ರವೇಶಿಸುತ್ತಿದೆ ಎನ್ನುವಾಗ ಉದ್ಘೋಷ ಮಾಡುವುದು ರೈಲ್ವೇ ಗ್ರಾಹಕರಿಗೆ ತೊಂದರೆ ಉಂಟು ಮಾಡುತ್ತಿದೆ. ಮೊದಲೇ ಬೆಟ್ಟ ಹತ್ತಿದಂತೆ ಸ್ಕೈವಾಕ್‌ ಹತ್ತಬೇಕಿರುವುದು,ನಿಲ್ಲುವ ಎರಡೇ ನಿಮಿಷದಲ್ಲಿ ರೈಲು ಹತ್ತಬೇಕಿರುವುದು ಪ್ರಯಾಣಿಕರನ್ನು ಎದ್ದು-ಬಿದ್ದು ಓಡುವ ಸ್ಥಿತಿಗೆ ನೂಕುತ್ತಿದೆ.

ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ರೈಲ್ವೆ ಆಸ್ಪತ್ರೆ ಸ್ಥಾಪನೆಯಾಗಿಲ್ಲ. ವಿದ್ಯುತ್‌ಗೆ ಪರ್ಯಾಯವಾಗಿ ಸೌರಶಕ್ತಿ ಬಳಸಲು ಅಳವಡಿಸಿದ್ದ ಸೋಲಾರ್‌ ಪ್ಲಾಂಟ್‌ ನಿರ್ವಹಣೆ ಕೊರತೆಯಿಂದ ನಲುಗಿದೆ. ಹೈ ಮಾಸ್ಕ್‌ ದೀಪಗಳು ಬೆಳಗಲ್ಲ. ಪ್ಲಾಟ್‌ಫಾರಂಗಳಿಗೆ ತಲುಪಲು ಲಿಫ್ಟ್‌ ಸೌಲಭ್ಯ ಇದೆ,


ಸೌಕರ್ಯಗಳ ಕೊರತೆ; ಪ್ರಯಾಣಿಕರಿಗೆ ತೊಂದರೆ

ಅಜ್ಜಂಪುರ: ಪಟ್ಟಣದ ನಿಲ್ದಾಣ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಸೌಲಭ್ಯಗಳ ಸಮಸ್ಯೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ನಿಲ್ದಾಣದ ಪ್ಲಾಟ್ ಫಾರಂನಲ್ಲಿ ಅಳವಡಿಸಿರುವ ಹಲವು ಟೈಲ್ಸ್ ಕಳಚಿ ಬಿದ್ದಿವೆ. ರೈಲ್ವೆ ಮೇಲ್ಸೇತುವೆ ಬಳಿಯ ಪ್ಲಾಟ್ ಫಾರಂ ಬಿರುಕಾಗಿದೆ. ವಾಹನ ಪಾರ್ಕಿಂಗ್ ಸ್ಥಳದಲ್ಲಿ ಹಾಕಿರುವ ನೆಲಹಾಸು ಕಿತ್ತಿದೆ. ನೀರು ಪೂರೈಸುವ ನಳ ಮುರಿದು ಬಿದ್ದಿವೆ. ಒಸರುವ ನೀರು ರಾಡಿ ಸೃಷ್ಠಿಸಿದೆ. ಶೌಚಾಲಯದ ಬಾಗಿಲು ಹಾಳಾಗಿವೆ.

ನಿಲ್ದಾಣದ ಹೊರ ಭಾಗದಲ್ಲಿ ಬೆರಳೆಣಿಕೆಯಷ್ಟು ಸಿಮೆಂಟ್ ಕುರ್ಚಿಗಳಿವೆ. ಅವುಗಳಲ್ಲಿ ಕೆಲವು ಮುರಿದುಬಿದ್ದಿವೆ. ಮೇಲ್ಚಾವಣಿಯ ವ್ಯವಸ್ಥೆ ಇಲ್ಲ.

ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇಲ್ಲ. ಲಗೇಜ್ ರೂಂ ವ್ಯವಸ್ಥೆಯಿಲ್ಲ. ರೈಲು ನಿಲ್ದಾಣ ರಸ್ತೆಯಲ್ಲಿ ವಿದ್ಯುತ್ ದೀಪ ಸಂಖ್ಯೆ ಕಡಿಮೆ ಇವೆ. ದಾರಿಯಲ್ಲಿ ರಾತ್ರಿ ಕತ್ತಲು ಆವರಿಸುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ನಿಲ್ದಾಣದ ಪ್ಲಾಟ್ ಫಾರಂ ಎತ್ತರ ಕಡಿಮೆ ಇದೆ. ಇದರಿಂದಾಗಿ ರೈಲುಗಾಡಿ ಮೆಟ್ಟಿಲು ಏರಲು-ಇಳಿಯಲು ಪ್ರಯಾಣಿಕರು ಸಾಹಸ ಮಾಡುವಂತಾಗಿದೆ. ಇನ್ನು ರೈಲು ಪ್ರಯಾಣ ಬೆಳೆಸುವ ಮಕ್ಕಳು, ಅಶಕ್ತರು, ವೃದ್ಧರು ಕಷ್ಟಪಡುವಂತಾಗಿದೆ.

ರೈಲು ನಿಲ್ದಾಣ ಆಸುಪಾಸು, ವಸತಿಗೃಹ ಬಳಿ ಮುಳ್ಳಿನ ಗಿಡ ಬೆಳೆದಿವೆ. ಕಸಕಡ್ಡಿ ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಬದಲಾಗಿದೆ. ಇಡೀ ವಾತಾವರಣ ಅಶುಚಿತ್ವದಿಂದ ಕೂಡಿದ್ದು, ಹುಳು-ಹುಪ್ಪಟೆಗಳ ಆವಾಸ ತಾಣವಾಗಿದೆ.

ರೈಲು ನಿಲ್ದಾಣ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂಬುದು ಸಾರ್ವಜನಿಕರ ಮೊರೆ.

ತರೀಕೆರೆ ರೈಲು ನಿಲ್ದಾಣ; ನಿರ್ವಹಣಿ ಕೊರತೆ

ತರೀಕೆರೆ: ಪಟ್ಟಣದ ರೈಲು ನಿಲ್ದಾಣದಲ್ಲಿ ಸ್ವಚ್ಛತೆ ಕೊರತೆ ಇದೆ. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೋಣೆ ಇಲ್ಲ, ಶುದ್ಧ ಕುಡಿಯುವ ನೀರಿನ ಸೌಕರ್ಯ ಇಲ್ಲ.

ತ್ಯಾಜ್ಯ ನೀರು ಹರಿದು ಹೋಗುಲು ಚರಂಡಿ ವ್ಯವಸ್ಥೆ ಇಲ್ಲ. ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿದೆ. ಸಮರ್ಪಕವಾಗಿ ನೀರು ಹರಿಯಲ್ಲ. ಮಲೀನ ಚರಂಡಿ ದುರ್ನಾತ ಬೀರುತ್ತದೆ. ಸೂಳ್ಳೆಗಳ ಕಾಟವೂ ಇದೆ.

ಶೌಚಾಲಯಗ ಇವೆ. ಆದರೆ, ಸ್ವಚ್ಛತೆ ಇಲ್ಲ ಎಂಬುದು ಪ್ರಯಾಣಿಕರ ಅಳಲು. ಕೈ ತೊಳೆಯುವ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲ. ಕೆಲವು ನಳಗಳಲ್ಲಿ ನೀರು ಬರಲ್ಲ.

ಕಾಯ್ದಿರಿಸಿದ ಟಿಕೆಟ್ ಕೌಂಟರ್ ಸಮಯ ಹೆಚ್ಚಿಸಬೇಕು.ಪ್ಲಾಟ್ ಫಾರಂನಲ್ಲಿ ಕೋಚ್ ಪ್ರದರ್ಶನ ಇಲ್ಲ. ಯಾವ ಕೋಚ್‌ ಎಲ್ಲಿ ನಿಲ್ಲುತ್ತದೆ ಎಂಬುದು ಪ್ರಯಾಣಿಕರಿಗೆ ತಿಳಿಯದಂತಾಗಿದೆ.

‘ಅಂಗವಿಕಲರ ಶೌಚಾಲಯ ದುರಸ್ತಿಗೆ ಮನವಿ ಸಲ್ಲಿಕೆ’

ನಿಲ್ದಾಣದಲ್ಲಿ ಅಂಗವಿಕಲರ ಶೌಚಾಲಯ ಹಾಳಾಗಿದೆ. ದುರಸ್ತಿಗೆ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಚಿಕ್ಕಮಗಳೂರು ರೈಲು ನಿಲ್ದಾಣ ಅಧಿಕಾರಿ ಮಿಥಿಲೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಲ್ದಾಣದಲ್ಲಿ ರೈಲು ಗಾಡಿ ಇದ್ದ ಸಮಯದಲ್ಲಿ ಮಾತ್ರ ನೀರು ಪೂರೈಕೆ ಮಾಡಿ, ನಂತರ ವಾಲ್ವ್‌ ಬಂದ್‌ ಮಾಡುತ್ತೇವೆ. ಕಸದ ಡಬ್ಬಿಗಳನ್ನು ರಿಪೇರಿ ಮಾಡಿಸಲಾಗುವುದು. ನಿಲ್ದಾಣದಲ್ಲಿನ ಸಮಸ್ಯೆಗಳು, ಕೊರತೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT