ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನ ವಿವಿಧೆಡೆ ಮತ್ತೆ ಮಳೆ ಆರ್ಭಟ

ಜನವರಿಯಿಂದ ಈತನಕ 530 ಮನೆ ಹಾನಿ
Last Updated 7 ಆಗಸ್ಟ್ 2022, 7:39 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಶುಕ್ರವಾರ ಬಿರುಸಾಗಿ ಮಳೆ ಸುರಿದಿದೆ. ತಾಲ್ಲೂಕಿನ ವಿವಿಧೆಡೆ ಎರಡು ಮನೆಗಳು ಹಾನಿಯಾಗಿವೆ.

ಶಂಕರಪುರದ ಜಬೀವುಲ್ಲಾ ಹಾಗೂ ಬೈಗೂರಿನ ಸುಧಾ ಅವರ ಮನೆ ಹಾನಿಯಾಗಿವೆ. ಜಿಲ್ಲೆಯಲ್ಲಿ 30 ವಿದ್ಯುತ್‌ ಕಂಬಗಳು ಮುರಿದಿವೆ.

ಗಿರಿ ಶ್ರೇಣಿ ಭಾಗದಲ್ಲಿ ಹದ ಮಳೆಯಾಗಿದೆ. ನದಿ, ಹಳ್ಳ, ಝರಿಗಳಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಪೈಪ್‌ ಅಳವಡಿಕೆ, ಒಳಚರಂಡಿ ಕಾಮಗಾರಿಗಳಿಗೆ ರಸ್ತೆ ಅಗೆದು ಮುಚ್ಚಿರುವ ಕಡೆಗಳಲ್ಲಿ ತಗ್ಗು, ಗುಂಡಿಗಳಾಗಿರುವ ಕಡೆ ನೀರು ಆವರಿಸಿದೆ. ಮಣ್ಣಿನ ರಸ್ತೆಗಳು ಕೆಸರುಮಯವಾಗಿದ್ದು, ಓಡಾಟಕ್ಕೆ ತಾಪತ್ರಯವಾಗಿದೆ.

ವಾಡಿಕೆಗಿಂತ ಹೆಚ್ಚು ಮಳೆ: ಜಿಲ್ಲೆಯಲ್ಲಿ ವಾಡಿಕೆ ಮಳೆ (ಜನವರಿಯಿಂದ ಆ.6ರವರೆಗೆ) 114.6 ಸೆಂ.ಮೀ ಈ ವರ್ಷ ಈ ಅವಧಿಯಲ್ಲಿ 149.9 ಸೆಂ.ಮೀ (ಶೇ 131) ಸುರಿದಿದೆ.

ಜಿಲ್ಲಾಡಳಿತದ ಅಂಕಿಅಂಶ ಪ್ರಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ 6ರವರೆಗೆ 530 ಮನೆಗಳು ಹಾನಿಯಾಗಿವೆ. 1529 ವಿದ್ಯುತ್ ಕಂಬಗಳು ಮುರಿದಿವೆ. ಪಿಡಬ್ಲ್ಯುಡಿ ರಸ್ತೆ 625 ಕಿ.ಮೀ, ಸೇತುವೆಗಳು 19 ಹಾಗೂ 11 ಕಟ್ಟಡಗಳು ಹಾನಿಯಾಗಿವೆ. 2,686 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಹೆಚ್ಚಿದ ಮಳೆ: ಕುಸಿದ ಮಣ್ಣಿನಪಾಲು-ಹೊಸನೆಲ ರಸ್ತೆ

ಕಳಸ: ಕುದುರೆಮುಖ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ಅತಿವೃಷ್ಟಿಯಿಂದ ರೈತಾಪಿ ವರ್ಗ ಚಿಂತಿತವಾಗಿದೆ.
ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣ್ಣಿನಪಾಲು-ಹೊಸನೆಲ ಕಾಂಕ್ರಿಟ್‌ ರಸ್ತೆಯು ಮಳೆ ಆರ್ಭಟಕ್ಕೆ ಕುಸಿದು ಬಿದ್ದಿದೆ.
ಇದರಿಂದ ಹೊಸನೆಲ, ಕಳ್ಳರ ಪಾಲು, ನೇರಳೆಕೊಂಡ ಪ್ರದೇಶದ ಸಂಪರ್ಕ ಕಡಿತಗೊಂಡಿದೆ. ಈ ಕಾಂಕ್ರಿಟ್‌ ರಸ್ತೆಯು 4 ವರ್ಷಗಳ ಹಿಂದೆ ನಿರ್ಮಾಣ ಆಗಿತ್ತು. ರಸ್ತೆ ಪಕ್ಕದಲ್ಲಿ ಭೂಕುಸಿತವಾಗಿದ್ದು, ಹಾನಿ ಆಗಿದೆ.

ಚಾರ್ಮಾಡಿ ಸುತ್ತ ಧಾರಾಕಾರ ಮಳೆ

ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ದೇವರಮನೆ ಸುತ್ತ ಶನಿವಾರ ಧಾರಾಕಾರ ಮಳೆಯಾಗಿದೆ.
ಕೊಟ್ಟಿಗೆಹಾರದಲ್ಲಿ ಕಳೆದ 24 ಗಂಟೆಯಲ್ಲಿ 20.8 ಸೆ.ಮಿ ಮಳೆಯಾಗಿದೆ. ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಚಾರ್ಮಾಡಿ ಘಾಟ್‍ನಲ್ಲಿ ಮಳೆಯಿಂದಾಗಿ ತೊರೆಗಳು ತುಂಬಿ ಹರಿಯುತ್ತಿದ್ದು ಚಾರ ಚಾರ್ಮಾಡಿಯ ಅಲೇಕಾನು, ಸೋಮನಕಾಡು ಜಲಫಾತಗಳು ಬೋರ್ಗರೆಯುತ್ತಿವೆ.

ಬಾಳೂರು ಹೋಬಳಿಯ ವಾಟೆಕಾನ್ ಸಮೀಪ ರಾಜ್ಯ ಹೆದ್ದಾರಿಗೆ ಮರವೊಂದು ಬಿದ್ದಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಧಾರಾಕಾರ ಮಳೆಯಿಂದಾಗಿ ಬಣಕಲ್‍ನ ರಿವರ್ ವ್ಯೂ ಮತ್ತು ನಜರೆತ್ ಶಾಲೆಗಳಿಗೆ ರಜೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT