ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಕಳಸ- ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತ ಭೀತಿ

ಕಿರು ಸೇತುವೆಗೆ ಅಳವಡಿಸಿದ್ದ ಮರಳಿನ ಮೂಟೆಗಳು ನೀರುಪಾಲು
Last Updated 17 ನವೆಂಬರ್ 2021, 2:17 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಕಳಸ- ಬಾಳೆಹೊನ್ನೂರು ನಡುವಿನ ಮಹಾಲ್‌ಗೋಡಿನಲ್ಲಿ ಕಿರು ಸೇತುವೆಗೆ ಅಳವಡಿಸಿದ್ದ ಪೈಪ್ ಪಕ್ಕದ ಮರಳಿನ ಮೂಟೆಗಳು ಭಾರಿ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ರಸ್ತೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.

ಮುಖ್ಯರಸ್ತೆಯಲ್ಲಿರುವ ಮೋರಿ ಎರಡು ವಾರದ ಹಿಂದೆ ಭಾರಿ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಕ್ಷಣ ಎಚ್ಚೆತ್ತ ಮೂಡಿಗೆರೆ ವಿಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ತಾತ್ಕಾಲಿಕ ವಾಗಿ ಪೈಪ್ ಅಳವಡಿಸಿ ಹೋಗಿದ್ದರು. ನಂತರ ಮತ್ತೆ ಸುರಿದ ಮಳೆಗೆ ಆ ಮೋರಿ ಕೂಡ ಕೊಚ್ಚಿಕೊಂಡು ಹೋಗಿ ಕಳಸ-ಬಾಳೆಹೊನ್ನೂರು ನಡುವಿನ ಸಂಚಾರ ಸ್ಥಗಿತಗೊಂಡಿತ್ತು.

ಮತ್ತೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೋರಿಗೆ ಹೆಚ್ಚುವರಿಯಾಗಿ ಮೂರು ದೊಡ್ಡ ಪೈಪ್ ಗಳನ್ನು ಅಳವಡಿಸಿ ಅವುಗಳ ಪಕ್ಕದಲ್ಲಿ ಮರಳಿನ ಮೂಟೆಗಳನ್ನು ಇಟ್ಟಿದ್ದರು. ಸೋಮವಾರ ಸುರಿದ ಭಾರಿ ಮಳೆಗೆ ಪೈಪ್ ಬುಡದಲ್ಲಿ ಇಟ್ಟಿದ್ದ ಮರಳಿನ ಮೂಟೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇನ್ನೆರಡು ದಿನ ಇದೇ ರೀತಿ ಮಳೆ ಸುರಿದಲ್ಲಿ ಮತ್ತೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಉಂಟಾಗಿದೆ.

‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿ ಪದೇ ಪದೇ ಮೋರಿ ಕುಸಿತವಾಗುತ್ತಿದೆ. ತಾತ್ಕಾಲಿಕ ಮೋರಿ ನಿರ್ಮಾಣ ಕೈ ಬಿಟ್ಟು ಶಾಶ್ವತ ಕಾಮಗಾರಿ ನಡೆಸಬೇಕು. ಇಲ್ಲದಿದ್ದಲ್ಲಿ ವರ್ಷದಲ್ಲಿ ಹತ್ತಾರು ಬಾರಿ ಸಂಚಾರ ಸ್ಥಗಿತಗೊಳ್ಳುತ್ತಿದೆ. ತಕ್ಷಣ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ’ ಎಂದು ಮಾಗುಂಡಿಯ ಪ್ರೆಮ್ ಕುಮಾರ್ ತಿಳಿಸಿದ್ದಾರೆ.

ಉತ್ತಮ ಮಳೆ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ.

ಸೋಮವಾರದಿಂದ ಮಂಗಳವಾರ ಬೆಳಿಗ್ಗೆವರೆಗೆ ಎನ್.ಆರ್.ಪುರದಲ್ಲಿ 3.7 ಸೆಂ.ಮೀ, ಬಾಳೆಹೊನ್ನೂರಿನಲ್ಲಿ 2.0 ಸೆಂ.ಮೀ ಮಳೆಯಾಗಿದೆ. ಮಂಗಳವಾರ ಸಂಜೆ ಸಾಧಾರಣದಿಂದ ತುಂತುರು ಮಳೆ ಸುರಿಯಿತು.

ಬೆಳೆಗೆ ಹಾನಿ

ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ ಹೊತ್ತಿಗೆ ಸಣ್ಣಗೆ ಆರಂಭಗೊಂಡ ಮಳೆ ಸಂಜೆ ನಂತರವೂ ಮುಂದುವರಿದಿತ್ತು.

ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದೆ. ಅಡಿಕೆ ಕೊಯಿಲು ಮಾಡಲು ಅಡ್ಡಿಯಾಗಿದೆ. ಅರೇಬಿಕಾ ಕಾಫಿ ಹಣ್ಣಾಗಿ ಉದುರುತ್ತಿದೆ. ಬಲಿತ ಭತ್ತದ ಪೈರು ಕಟಾವು ಹಂತಕ್ಕೆ ತಲುಪಿದೆ, ಮಳೆಯಿಂದ ಅದು ಜಳ್ಳಾಗುವ ಭೀತಿ ಉಂಟಾಗಿದೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕೃಷಿ ಕೆಲಸ ನೆಚ್ಚಿಕೊಂಡ ಕಾರ್ಮಿಕರು ಕೆಲಸವಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT