ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನಲ್ಲಿ ವರ್ಷಧಾರೆಯ ಸಂಭ್ರಮ

ಮಲೆನಾಡು, ಬಯಲುಸೀಮೆ ಭಾಗದಲ್ಲಿ ಉತ್ತಮ ಮಳೆ l ಹಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗೆ
Last Updated 18 ಮೇ 2020, 16:56 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸೋಮವಾರ ನಸುಕಿನಲ್ಲಿ ಧಾರಾಕಾರ ಮಳೆ ಸುರಿದು ಅಪಾರ ಹಾನಿ ಉಂಟು ಮಾಡಿದೆ.

ನಸುಕಿನ 3 ಗಂಟೆಗೆ ಪ್ರಾರಂಭವಾದ ಮಳೆ, ಗುಡುಗು, ಸಿಡಿಲು, ಗಾಳಿ ಯೊಂದಿಗೆ ಆರ್ಭಟಿಸಿ ಎರಡು ತಾಸಿಗೂ ಅಧಿಕ ಕಾಲ ಸುರಿದು ಬಾಳೆ, ಶುಂಠಿ, ಕಾಫಿ ತೋಟಗಳಿಗೆ ಹಾನಿ ಉಂಟುಮಾಡಿತು.

ಮಳೆಯಿಂದ ಭೈರಿಗದ್ದೆ ಗ್ರಾಮದ ಬಸವರಾಜ್ ಎಂಬುವವರ ಮನೆಯ ಮೇಲೆ ಮರ ಬಿದ್ದು ಚಾವಣಿಗೆ ಹಾನಿಯಾಗಿದೆ. ತತ್ಕೊಳ ರಸ್ತೆಯ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬದ ಮೇಲೆ ಮರಬಿದ್ದು, ಐದು ವಿದ್ಯುತ್ ಕಂಬಗಳು ಧರೆಗುರುಳಿದ್ದು ನಷ್ಟ ಸಂಭವಿಸಿದೆ. ಸೋಮವಾರ ಇಡೀ ದಿನ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ಹಳೇಕೋಟೆ, ಬಿದರಹಳ್ಳಿ, ಬೆಟ್ಟಗೆರೆ, ಬಕ್ಕಿ ಮುಂತಾದ ಕಡೆಗಳಲ್ಲಿ ಗಾಳಿಯ ರಭಸಕ್ಕೆ ಬಾಳೆ ತೋಟಗಳು ನೆಲಕಚ್ಚಿದ್ದು, ರೈತರಿಗೆ ನಷ್ಟ ಉಂಟಾಗಿದೆ. ತತ್ಕೊಳ, ಹುಲ್ಲೆಮನೆ ಮುಂತಾದ ಗ್ರಾಮಗಳಲ್ಲಿ ಶುಂಠಿಗದ್ದೆಗೆ ಚರಂಡಿ ನೀರುನುಗ್ಗಿ ಹಾನಿ ಸಂಭವಿಸಿದೆ.

ಕೊಟ್ಟಿಗೆಹಾರ: ಬಣಕಲ್, ಬಾಳೂರು ಸುತ್ತಮುತ್ತ ಸುರಿದ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಮನೆಯ ಚಾವಣಿ ಹಾರಿ ಹೋಗಿವೆ. ಕೊಟ್ಟಿಗೆಹಾರದಲ್ಲಿ ಭಾನುವಾರ ಸಂಜೆ 4 ಸೆಂ.ಮೀ. ಮಳೆ ದಾಖಲಾಗಿದೆ. ವಿಪರೀತ ಮಳೆಯಿಂದ ಹೇಮಾವತಿಯ ಕಾಲುವೆಗಳಲ್ಲಿ ನೀರು ತುಂಬಿ ಹರಿಯಿತು.

ಬಣಕಲ್‍ನ ಚರ್ಚ್ ರಸ್ತೆಯಲ್ಲಿ ಜಯೀರಾಬಿ ಅವರ ಮನೆಯ ಚಾವಣಿ ಮೇಲೆ ಮರ ಉರುಳಿ ಬಿದ್ದು ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ಆದಿಲ್ ಶಾ, ಸಾಹೀರಾ, ಆಸ್ಮಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಣಕಲ್ ಪೇಟೆಯಲ್ಲೂ ಕೆಲವು ಅಂಗಡಿಯ ಶೀಟುಗಳು ಹಾರಿವೆ.

ಮಳೆಯಿಂದ ಬಣಕಲ್ ಸಮೀಪದ ಬಿ.ಹೊಸಹಳ್ಳಿ, ಬಣಕಲ್ ಪೇಟೆ, ಕೆಂಬಲ್‍ಮಠ, ಕುವೆಂಪುನಗರ, ಮತ್ತಿಕಟ್ಟೆ, ಹೆಗ್ಗಡ್ಲು, ನಜರೆತ್ ಶಾಲೆಯ ಹಿಂಭಾಗ, ಗುಡ್ಡೆಟ್ಟಿ, ಚಕ್ಕಮಕ್ಕಿ, ದೇವನ ಗೂಲ್, ಸುಂದರಬೈಲ್, ಸಬ್ಬೇನಹಳ್ಳಿ, ಕನ್ನಗೆರೆ ಬಳಿಯೂ ಮರಗಳು ಉರುಳಿ ವಿದ್ಯುತ್ ಲೈನ್ ಮೇಲೆ ಬಿದ್ದು ಒಟ್ಟು ಎಂಟು ವಿದ್ಯುತ್ ಕಂಬಗಳು ಮುರಿದಿವೆ.

‘ಚಕ್ಕಮಕ್ಕಿ ಬಣಕಲ್ ನಡುವೆ ಕಾಫಿ ಕಾರ್ನರ್ ಬಳಿ ವಿದ್ಯುತ್ ಲೈನ್ ಮೇಲೆ ಮರಗಳು ಉರುಳಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಹಳಿಕೆ ಗ್ರಾಮದ ಕೊಳೂರು ಜನ್ನಿಕೆರೆ ಅಡ್ಡ ರಸ್ತೆಯ ಸಮೀಪವೂ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿತ್ತು’ ಎಂದು ಬಣಕಲ್ ಮೆಸ್ಕಾಂ ಕಿರಿಯ ಎಂಜಿನಿಯರ್ ಮಂಜುನಾಥ್ ತಿಳಿಸಿದ್ದಾರೆ.

‘ಬಾಳೂರು ಹೋಬಳಿಯ ವಾಟೇಖಾನ್, ಮರ್ಕಲ್ ಮತ್ತಿತರ ಭಾಗಗಳಲ್ಲೂ ವಿದ್ಯುತ್ ಲೈನ್‍ನ ಮೇಲೆ ಮರಗಳು ಉರುಳಿದ್ದು ತೆರವು ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ ಜಾವಳಿ ಭಾಗದಿಂದ ಕಳಸ ಲೈನ್‍ನಿಂದ ವಾಟೇಖಾನ್, ಕೂವೆ, ಗಬ್‍ಗಲ್ ಭಾಗಕ್ಕೆ ವಿದ್ಯುತ್ ನೀಡಲಾಗಿದೆ. ಬಾಳೂರಿ
ನಲ್ಲಿ ಕೈಗೆ ಎಟಕುತ್ತಿದ್ದ ಲೈನ್ ಅನ್ನು ವಿದ್ಯುತ್ ಕಂಬದ ಕೊರತೆಯಿಂದ ಸರಿ
ಪಡಿಸಿರಲಿಲ್ಲ. ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ಶಿವಕುಮಾರ್ ಅವರು 50 ಕಂಬಗಳನ್ನು ನೀಡಿ ವಿದ್ಯುತ್ ಕಂಬಗಳ ಕೊರತೆಯನ್ನು ನೀಗಿಸಿದ್ದು, ಬಾಳೂರಿನ ಕಂಬವನ್ನು ಬದಲಿಸಲಾಗಿದೆ’ ಮೆಸ್ಕಾಂ ಕಿರಿಯ ಎಂಜಿನಿಯರ್ ಕರಿಯಪ್ಪ ತಿಳಿಸಿದ್ದಾರೆ.

ಕೊಪ್ಪ: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಸೋಮವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬೆಳಿಗ್ಗೆ 7.30ರ ಹೊತ್ತಿಗೆ ಪ್ರಾರಂಭಗೊಂಡ ಮಳೆ ಅರ್ಧ ಗಂಟೆಗೂ ಹೆಚ್ಚು ಬಿರುಸಾಗಿ ಸುರಿಯಿತು.

ತಾಲ್ಲೂಕಿನ ಹಲವೆಡೆ ವಿದ್ಯುತ್ ಅಡಚಣೆ ಉಂಟಾಗಿತ್ತು. ಪಟ್ಟಣದಲ್ಲಿ ಆಗಾಗ ಬಂದು ಹೋಗುವ ವಿದ್ಯುತ್ ಅನೇಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟು ಮಾಡಿತ್ತು. ಅಲ್ಲದೇ, ವಿದ್ಯುತ್ ಸಮಸ್ಯೆಯಿಂದ ಪಟ್ಟಣಕ್ಕೆ ಸೋಮವಾರ ನೀರು ಸರಬರಾಜು ಆಗಲಿಲ್ಲ.

ನರಸಿಂಹರಾಜಪುರ: ತಾಲ್ಲೂಕಿನಾ ದ್ಯಂತ ಸೋಮವಾರ ಬೆಳಿಗ್ಗೆ ಗುಡುಗು ಸಹಿತ ಸಾಧಾರಣ ಪ್ರಮಾಣದಲ್ಲಿ ಹದವಾದ ಮಳೆ ಸುರಿಯಿತು.

ಭಾನುವಾರ ಸಂಜೆ ವೇಳೆಗೆ ಮೋಡ ಕವಿದ ವಾತಾವರಣವುಂಟಾಗಿ ಭಾರಿ ಗಾಳಿಯೊಂದಿಗೆ ಸಾಧಾರಣ ಮಳೆ ಸುರಿಯಿತು. ರಾತ್ರಿ ಇಡೀ ಮೋಡಕವಿದ ವಾತಾವರಣವಿದ್ದರೂ ತಾಪಮಾನ ಹೆಚ್ಚಾಗಿತ್ತು. ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಮತ್ತೆ 8 ಗಂಟೆ ವೇಳೆಗೆ ಮೋಡ ಕವಿದ ವಾತಾವರಣವುಂಟಾಗಿ ಕತ್ತಲೆ ಕವಿದಂತಾಗಿ ಮಳೆ ಸುರಿಯಿತು.

‌ಶೃಂಗೇರಿ: ಭಾನುವಾರ ರಾತ್ರಿಯಿಂದ ಶೃಂಗೇರಿಯಲ್ಲಿ 34.0 ಮಿ.ಮೀ ಮಳೆ ಯಾಗಿದೆ. ಪಟ್ಟಣದಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ತುಂಗಾ ನದಿಯ ನೀರಿನ ಮಟ್ಟ ಸ್ವಲ್ಪ ಜಾಸ್ತಿಯಾಗಿದೆ.

ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಭಾರತೀ ಬೀದಿ, ಆನೆಗುಂದ ರಸ್ತೆ, ಗಾಂಧಿ ಮೈದಾನ, ಹಾಲಂದೂರು ರಸ್ತೆ, ಕೆರೆಕಟ್ಟೆಯಲ್ಲಿ ಮಳೆಯಾಗಿದ್ದು, ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತಿದೆ. ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ.

ಗೋರಿಗಂಡಿ: ಹೆದ್ದಾರಿಯ ಸೇತುವೆಗೆ ಹಾನಿ

ಬಾಳೆಹೊನ್ನೂರು: ಇಲ್ಲಿನ ಗೋರಿಗಂಡಿ ತಿರುವಿನಲ್ಲಿ ಹೊಸದಾಗಿ ನಿರ್ಮಿಸುತ್ತಿದ್ದ ಸೇತುವೆ ಬಳಿಯಿದ್ದ ಹಳೆ ಸೇತುವೆಯ ಒಂದು ಬದಿ ಕುಸಿದಿದೆ. ಹೀಗಾಗಿ, ಘನ ವಾಹನಗಳನ್ನು ಬೇರೆ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.

ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಬಾಳೆಹೊನ್ನೂರು– ಆಲ್ದೂರು ನಡುವಿನ ರಾಜ್ಯ ಹೆದ್ದಾರಿಯ ಗೋರಿಗಂಡಿ ಬಳಿ ಹಳೆಯ ಸೇತುವೆಯ ಭಾಗ ಕುಸಿದಿದ್ದ ಕೆಲ ಕ್ಷಣ ಆತಂಕಕ್ಕೆ ಕಾರಣವಾಯಿತು.

ತಕ್ಷಣ ಆಲ್ದೂರು ಹಾಗೂ ಬಾಳೆಹೊನ್ನೂರಿನಲ್ಲಿ ಪೊಲೀಸರು ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಾರಿ ಲಾರಿ, ವಾಹನಗಳನ್ನು ತಡೆದು ಕೊಟ್ಟಿಗೆಹಾರ, ಮೂಡಿಗೆರೆ ಮಾರ್ಗವಾಗಿ ತೆರಳಲು ಸೂಚಿಸಿದರು.

ಈ ಬಗ್ಗೆ ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಎಇಇ ಬಿ.ಎಚ್. ಗವಿರಂಗಪ್ಪ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ರವಿಟ್‌ಮೆಂಟ್ ಕಟ್ಟಲು ಹಾಗೂ ಮರಳಿನ ಮೂಟೆಗಳನ್ನು ಇಡಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಎರಡೂ ಕಡೆಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿಸಿದ್ದೇನೆ. 15 ದಿನ ಕಳೆದಲ್ಲಿ ಹೊಸ ಸೇತುವೆ ಕಾಮಗಾರಿ ಪೂರ್ನವಾಗಲಿದ್ದು, ಅದರಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT