ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಉದುರಿದ ಹೋದ ಫಸಲು: ಮಲೆನಾಡು ಕಂಗಾಲು

ಅತಿವೃಷ್ಟಿಯಿಂದ ಕಾಫಿ, ಮೆಣಸು, ಅಡಿಕೆ ಬೆಳೆಗೆ ಅಪಾರ ಹಾನಿ
Published : 16 ಸೆಪ್ಟೆಂಬರ್ 2024, 4:55 IST
Last Updated : 16 ಸೆಪ್ಟೆಂಬರ್ 2024, 4:55 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈಗ ಮಳೆ ಕಡಿಮೆಯಾಗಿದ್ದರು, ಅದು ಮಾಡಿ ಹೋದ ಹಾನಿಯಿಂದ ಮಲೆನಾಡಿನ ರೈತರು ಕಂಗಾಲಾಗಿದ್ದಾರೆ. ಕಾಫಿ ಉದುರಿದ್ದರೆ, ಮೆಣಸು ಫಸಲು ನೆಲಕಚ್ಚಿದೆ. ಅಡಿಕೆ ಮತ್ತು ಶುಂಠಿಗೆ ಕೊಳೆರೋಗ ಕಾಡುತ್ತಿದೆ.

ಕಳೆದ ವರ್ಷ ಮಳೆ ಕೊರತೆಯಿಂದ ಬೇಸಿಗೆಯಲ್ಲಿ ಕಾಫಿ ಉಳಿಸಿಕೊಳ್ಳಲು ರೈತರು ಪರದಾಡಿದ್ದರು. ಈ ವರ್ಷ ನಿರಂತರವಾದ ಮಳೆ ಮತ್ತು ಗಾಳಿ ಮತ್ತೊಮ್ಮೆ ಸಂಕಟ ತಂದಿಟ್ಟಿದೆ.

ಕಾಫಿ ಗಿಡಗಳಲ್ಲಿ ಕಾಯಿಗಳು ಹಣ್ಣಾಗುವ ಹಂತದಲ್ಲಿದ್ದಾಗ ಜುಲೈ ಮತ್ತು ಆಗಸ್ಟ್‌ನಲ್ಲಿ ಧಾರಾಕಾರವಾಗಿ ಮಳೆ ಸುರಿಯಿತು. ಮಳೆ ಮತ್ತು ಗಾಳಿಯ ರಭಸಕ್ಕೆ ಕಾಫಿ ಫಸಲು ನೆಲಕ್ಕೆ ಉದುರಿ ಮಣ್ಣುಪಾಲಾಯಿತು. ಬೇಸಿಗೆಯಲ್ಲಿ ಕಷ್ಟುಪಟ್ಟು ತೋಟುಗಳನ್ನು ಉಳಿಸಿಕೊಂಡಿದ್ದ ರೈತರು, ನೆಲದಲ್ಲಿ ಬಿದ್ದು ಹಾಳಾದ ಫಸಲು ಕಂಡು ಮರುಗಿದರು.

ಕಾಫಿಗೆ ಬೆಳೆವಿಮೆ ಸೌಲಭ್ಯ ಇಲ್ಲ. ಮಳೆಯಿಂದ ಶೇ 33ಕ್ಕಿಂತ ಹೆಚ್ಚು ಹಾನಿಯಾದರೆ ಎನ್‌ಡಿಆರ್‌ಎಫ್‌ನಿಂದ ಹೆಕ್ಟೇರ್‌ಗೆ ₹18 ಸಾವಿರ ನೀಡಲಾಗುತ್ತದೆ. ಅದು ಕೂಡ ಎರಡು ಹೆಕ್ಟೇರ್‌ಗೆ(5 ಎಕರೆ) ಸೀಮಿತ. ಎಸ್‌ಡಿಆರ್‌ಎಫ್‌ ಮೂಲಕ ಹೆಕ್ಟೇರ್‌ಗೆ ₹10 ಸಾವಿರ ನೀಡಲಾಗುತ್ತೆ. ಅದು ಕೂಡ ಎರಡು ಹೆಕ್ಟೇರ್‌ಗೆ ಸೀಮಿತ.

ಆದರೆ, ಕಾಫಿ ಉದುರುವಿಕೆ ಪ್ರಮಾಣ ತೋಟದಿಂದ ತೋಟಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಕೆಲವೆಡೆ ಸಂಪೂರ್ಣವಾಗಿ ಹಣ್ಣು ಉದುರಿದ್ದರೆ. ಇನ್ನೂ ಹಲವೆಡೆ ಶೇ 50ರಷ್ಟು, ಕೆಲವೆಡೆ ಶೇ 40ರಷ್ಟು, ಬಹುತೇಕ ಕಡೆಗಳಲ್ಲ ಶೇ 30 ಮತ್ತು ಅದಕ್ಕೂ ಕಡಿಮೆ ಪ್ರಮಾಣದಲ್ಲಿ ಕಾಫಿ ಫಸಲು ನೆಲಕ್ಕೆ ಉದುರಿದೆ.

‘ಈಗಲೂ ಕೆಲವೆಡೆ ಮಳೆ ಸುರಿಯುತ್ತಿದ್ದು, ಹಣ್ಣು ಉದುರುವುದು ನಿಂತಿಲ್ಲ. ಫಸಲು ಈಗ ಬಲಿತಿದ್ದು, ಗೊಂಚಲಿನ ಭಾರ ಜಾಸ್ತಿಯಾಗಿದೆ. ಸ್ವಲ್ಪ ಜೋರಾಗಿ ಮಳೆಯಾದರೂ ಉಳಿಯುವುದಿಲ್ಲ. ಅಳಿದು ಉಳಿದಿದ್ದ ಫಸಲು ಈಗ ಮಣ್ಣು ಪಲಾಗುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ  ಬಿ.ಎಸ್.ಜೈರಾಮ್ ಹೇಳಿದರು.

ಮಳೆ ಪ್ರಮಾಣ ಕೆಲವೆಡೆ ವಿಪರೀತ ಜಾಸ್ತಿಯಾಗಿದೆ. 100 ಇಂಚು ಮಳೆಯಾಗಬೇಕಿದ್ದ ಕಡೆ 250 ಇಂಚು ತನಕ ಮಳೆಯಾಗಿದೆ. ಇದರಿಂದ ಕಾಫಿ ಫಸಲು ಸಂಪೂರ್ಣ ಉದುರಿ ಗಿಡ ಮಾತ್ರ ಉಳಿದಿದೆ ಎಂದು ವಿವರಿಸಿದರು.

ಜೋಳ ಈರುಳ್ಳಿ ಮೇಲೂ ಪರಿಣಾಮ

ಅತಿವೃಷ್ಟಿಯು ಈ ಭಾರಿ ಬಯಲು ಸೀಮೆ ಬೆಳೆಗಳನ್ನೂ ಕಾಡಿತು. ಜೋಳ ಈರುಳ್ಳಿ ಬೆಳೆಯ ಉಳುವರಿ ಮೇಲೂ ಪರಿಣಾಮ ಬೀರಿದೆ. ತರೀಕೆರೆ ಭಾಗದಲ್ಲಿ ಬಿತ್ತನೆ ಮಾಡಿದ್ದ ಜೋಳ ಕೆಲವೆಡೆ ನೆಲದಿಂದ ಮೇಲೆ ಏಳಲೇ ಇಲ್ಲ. ಹಲವೆಡೆ ಕಳೆ ತೆಗೆಯಲು ಮಳೆ ಬಿಡುವು ನೀಡಲಿಲ್ಲ. ಹೊಲದಲ್ಲಿ ಸದಾ ತೇವಾಂಶ ಉಳಿದಿದ್ದರಿಂದ ಕಳೆ ತೆಗೆಯಲು ಆಗಲಿಲ್ಲ. ಇದರಿಂದಾಗಿ ಇಳುವರಿ ಕಡಿಮೆಯಾಗಲಿದೆ ಎಂದು ಆ ಭಾಗದ ರೈತರು ಹೇಳುತ್ತಾರೆ. ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಬೆಳೆ ತೇವಾಂಶದಿಂದ ಹಾಳಾಯಿತು. ಜಿಲ್ಲೆಯಲ್ಲಿ 7 ಸಾವಿರ‌ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ.  ಹೊಲದಲ್ಲಿ ನಿಂತಿದ್ದ ನೀರಿನಲ್ಲಿರುವ ಬೆಳೆ ಬಿಳಿ ಬಣ್ಣಕ್ಕೆ ತಿರುಗಿ ಹಾಳಾಯಿತು. ಕೆಲವೆಡೆ ಉಳಿದಿದ್ದರೂ ಇಳುವರಿ ಕಡಿಮೆಯಾಗುವ ಆತಂಕ ರೈತರಲ್ಲಿದೆ.

ಅಡಿಕೆಯನ್ನು ಕಾಡುತ್ತಿರುವ ಕೊಳೆರೋಗ

ಅತಿವೃಷ್ಟಿಯು ಅಡಿಕೆ ಬೆಳೆಯನ್ನು ಕಾಡುತ್ತಿದ್ದು ಕೊಳೆ ರೋಗ ಆವರಿಸಿಕೊಂಡಿದೆ. ಅಡಿಕೆ ಮರಗಳಿಂದ ಫಸಲು ಉದುರಲಾರಂಭಿಸಿದೆ. ಮಳೆ ಬಿಡುವು ನೀಡದಿದ್ದರಿಂದ ಕೊಳೆರೋಗ ತಡೆಗೆ ಔಷಧಿ ಸಿಂಪರಣೆ ಮಾಡಲು ರೈತರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಈಗ ಕೊಳೆ ರೋಗ ಆವರಿಸಿದೆ. ಎಲೆಚುಕ್ಕಿ ರೋಗ ಕೂಡು ಕಾಣಿಸಿಕೊಳ್ಳುತ್ತಿದ್ದು ಫಸಲಿನ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಕಾಳುಮೆಣಸಿನ ಫಸಲು ಭಾರೀ ಕಡಿತ

ಕಳಸ: ಕಳೆದ ಮೂರು ತಿಂಗಳಲ್ಲಿ ಅತಿಯಾದ ಮಳೆ ಸುರಿದ ಪರಿಣಾಮ ಕಾಳುಮೆಣಸಿನ ಬಳ್ಳಿಗಳಲ್ಲಿ ನಿರೀಕ್ಷಿಸಿದಷ್ಟು ಫಸಲು ಬಾರದೆ ಬೆಳೆಗಾರ ಸಮೂಹ ನಿರಾಶೆಗೆ ಒಳಗಾಗಿದೆ. ಮೆಣಸಿನ ಉತ್ತಮ ಧಾರಣೆಯ ಲಾಭ ಪಡೆಯಲು ಬೆಳೆಗಾರರು ಮೆಣಸಿನ ಬಳ್ಳಿಗಳಿಗೆ ಕಾಲಕಾಲಕ್ಕೆ ಬೇಕಿದ್ದ ಆರೈಕೆ ಮಾಡಿದ್ದರು. ಆದರೆ ಎಡೆಬಿಡದೆ ಸುರಿದ ಮಳೆಯಿಂದ ಹೆಚ್ಚಿದ ತೇವಾಂಶ ಮೆಣಸಿನ ಗೆರೆ ಹೊರಡಲು ಅಡಿಯಾಯಿತು. ಇದರಿಂದ ಮೆಣಸಿನ ಬಳ್ಳಿಗಳಲ್ಲಿ ಈ ಬಾರಿ ಶೇ50ರಷ್ಟು ಫಸಲು ಕಡಿಮೆಯಾಗಿದೆ. ಬೇಸಿಗೆಯಲ್ಲಿ 40 ಡಿಗ್ರಿವರೆಗೆ ಏರಿದ್ದ ತಾಪಮಾನ ಮತ್ತು ತೇವಾಂಶದ ಕೊರತೆ ಕೂಡ ಮೆಣಸಿಗೆ ಪ್ರತಿಕೂಲವಾಗಿ ಪರಿಗಣಿಸಿತ್ತು. ಇದರ ಬೆನ್ನಲ್ಲೇ ಮಳೆಗಾಲದಲ್ಲಿ ಸತತ ಮಳೆಯಿಂದಾಗಿ ಮೆಣಸಿನ ಬಳ್ಳಿಗೆ ತೇವಾಂಶ ಹೆಚ್ಚಾಯಿತು. ಬೇಸಿಗೆಯಲ್ಲಿ ತೇವಾಂಶದ ಕೊರತೆ ಮತ್ತು ಮಳೆಗಾಲದ ಅತಿಯಾದ ತೇವಾಂಶ ಸೂಕ್ಷ್ಮವಾದ ಮೆಣಸಿನ ಬಳ್ಳಿಗೆ ಅರಗಿಸಿಕೊಳ್ಳಲು ಆಗಿಲ್ಲ. ಇದರಿಂದ ಬಳ್ಳಿಗಳಿಗೂ ಗೊಂದಲ ಆಗಿದೆ ಎಂದು ಅನುಭವಿ ಬೆಳೆಗಾರರು ಹೇಳುತ್ತಾರೆ. ತೇವಾಂಶ ಹೆಚ್ಚಿದ ಕಾರಣಕ್ಕೆ ಮೆಣಸಿನ ಬಳ್ಳಿಗಳಿಗೆ ಕಳೆದ ತಿಂಗಳು ಕಪ್ಪುಕೊಳೆ ಕಂಡು ಬಂದಿತ್ತು. ಇದೀಗ ಬೇರು ರೋಗಗಳು ಕೂಡ ಕಾಣಿಸಿಕೊಳ್ಳುತ್ತಿವೆ. ಒಟ್ಟಾರೆ ಮೆಣಸಿಗೆ ಏರಿಕೆಯಾಗಿದ್ದ ಬೆಲೆಯ ಲಾಭ ಬೆಳೆಗಾರರಿಗೆ ಸಿಗದಂತೆ ಹವಾಮಾನ ವೈಪರೀತ್ಯ ತನ್ನ ಕರಾಳತೆ ತೋರುತ್ತಿದೆ.

ಮಳೆಗೆ ಸಿಲುಕಿದ ಬೆಳೆ: ನಲುಗಿದ‌‌ ಬೆಳೆಗಾರ

ಮೂಡಿಗೆರೆ: ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಸುರಿದ‌ ಮಳೆಯು ತಾಲ್ಲೂಕಿನ ಸಂಪ್ರದಾಯಿಕ ಬೆಳೆಯಾದ ಕಾಫಿ ಕಾಳುಮೆಣಸು ಅಡಿಕೆಯನ್ನು ಆಹುತಿ ಪಡೆದಿದ್ದು ರೈತರು ನಲುಗುವಂತೆ ಮಾಡಿದೆ. ತಾಲ್ಲೂಕಿನ ಗೋಣಿಬೀಡು ಬಣಕಲ್ ಬಾಳೂರು ಹೋಬಳಿಗಳಲ್ಲಿ ಒಂದೇ ತಿಂಗಳಿನಲ್ಲಿ ವಾಡಿಕೆಗಿಂತ ಮೂರುಪಟ್ಟು ಹೆಚ್ಚು ಮಳೆಯು ಸುರಿದಿದೆ. ದೇವರಮನೆ ಗ್ರಾಮದಲ್ಲಿ ಮಳೆಯು ಇದುವರೆಗೂ 350 ಇಂಚು ಸುರಿದಿದೆ. ಒಂದುವರೆ ತಿಂಗಳಿಗೂ ಹೆಚ್ಚು ಕಾಲ ಬಿಸಿಲು ಕಾಣದ ಕಾಫಿ ತೋಟಗಳಲ್ಲಿ ಕಾಯಿ ಕಟ್ಟುತ್ತಿದ್ದ ಕಾಫಿಯು ಕೊಳೆ ರೋಗಕ್ಕೆ ತುತ್ತಾಗಿದೆ. ಕೆಲವೆಡೆ ಇಡೀ ತೋಟದ ಕಾಫಿಯೇ ಕೊಳೆತು ಉದುರಿದೆ. ಪ್ರಾರಂಭದಲ್ಲಿ ರಭಸದ ಮಳೆಗೆ ಸಿಲುಕಿ ಕಾಫಿ ಕಾಳು‌ಮೆಣಸಿನ ತೆನೆಗಳು ನೆಲಕಚ್ಚಿದ್ದರೆ ಬಳಿಕ ನಿರಂತರ‌ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ. ಈ ಬಾರಿ ಮಳೆಯು ಶುಂಠಿ ಬೆಳೆಗೂ ಹಾನಿ ಮಾಡಿದ್ದು ನಿರಂತರ ಮಳೆಯಿಂದ ಶುಂಠಿ ಬೆಳೆಯು ಕೊಳೆ ರೋಗಕ್ಕೆ ತುತ್ತಾಗಿ ಬುಡವು ಕೊಳೆಯಲು ಪ್ರಾರಂಭಿಸಿದೆ. ಡಿಸೆಂಬರ್‌ನಲ್ಲಿ ಕೀಳಬೇಕಿದ್ದ ಶುಂಠಿಯನ್ನು ಈಗಲೇ ಕಿತ್ತು ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯು ಭತ್ತದ ಬೆಳೆಗೆ ಅಷ್ಟಾಗಿ ನಷ್ಟ ಮಾಡದಿದ್ದರೂ ಸಸಿಮಡಿಗಳಿಗೆ ಹಾನಿ ನಾಟಿ ಕಾರ್ಯಕ್ಕೆ ಅಡ್ಡಿಪಡಿಸಿ ಬೆಳೆಗಾರರು ಕಂಗಲಾಗುವಂತೆ ಮಾಡಿದೆ. ತಾಲ್ಲೂಕಿನಲ್ಲಿ ಈ ಬಾರಿಯ ಮಳೆಗಾಲವು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ರಬ್ಬರ್: ಟ್ಯಾಪಿಂಗ್ ಮಾಡಲು ಸಮಸ್ಯೆ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಅಧಿಕವಾಗಿರುವುದರಿಂದ ರಬ್ಬರ್ ಮರಗಳಲ್ಲಿ ಎಲೆ ಉದುರಿದೆ. ಮರಗಳಲ್ಲಿ ಆಹಾರ ಉತ್ಪಾದನೆಗೆ ದ್ಯುತಿಸಂಲೇಷಣ ಕ್ರೀಯೆ ನಡೆಯಲು ಸಾಧ್ಯವಾಗದೆ ಹಾಲಿನ ಉತ್ಪಾದನೆ ಕಡಿಮೆಯಾಗಿದ್ದು ಟ್ಯಾಪಿಂಗ್ ಮಾಡಲು ಹಿನ್ನಡೆಯಾಗಿದೆ. ಪ್ರಸ್ತುತ ಹಾಲಿನ ಟ್ಯಾಪಿಂಗ್ ಕಡಿಮೆಯಾಗಿ ರಬ್ಬರ್ ಶೀಟ್‌ನ ಉತ್ಪಾದನೆ ಕುಸಿದಿರುವುದರಿಂದ ಬೆಲೆ ಹೆಚ್ಚಿದೆ. ರಬ್ಬರ್ ಶೀಟ್ ಉತ್ಪಾದನೆ ಹೆಚ್ಚಾದಾಗ ಬೆಲೆ ಕುಸಿದು ಬೆಳೆಗಾರರಿಗೆ ನಷ್ಟವಾಗುತ್ತದೆ ಎನ್ನುತ್ತಾರೆ ಬೆಳೆಗಾರರು. ಬೆಲೆಯಲ್ಲಿನ ಮತ್ತು ಬೆಳೆಯಲ್ಲಿ ಏರಿಳಿತ ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಅತಿಯಾದ ಮಳೆಯಿಂದ ಅಡಿಕೆ ಮರಗಳಲ್ಲಿ ಫಸಲು ಸಹ ಗೋಟಾಗಿ ಉದುರುತ್ತಿದೆ. ಕೊಳೆರೋಗ ಕಾಣಿಸಿದ್ದು ಕಾಯಿ ಗಾತ್ರ ಚಿಕ್ಕದಾಗಿದೆ. ಅಡಿಕೆ ಉದುರಿರುವುದನ್ನು ಸಂಸ್ಕರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿಸಿಲು ಮಳೆ ಒಟ್ಟೊಟ್ಟಿಗೆ ಬಂದರೆ ಅಡಿಕೆಗೆ ಬೂದಿರೋಗ ಸಹ ಕಾಣಿಸಿಕೊಳ್ಳುತ್ತದೆ ಎಂಬುದು ಬೆಳೆಗಾರರ ಆತಂಕ.

‘ನಷ್ಟವಾಗಿದ್ದರೆ ಪರಿಹಾರ ದೊರಕಲಿದೆ’

ಅತಿವೃಷ್ಟಿಯಿಂದ ಕಾಫಿ ಫಸಲು ಶೇ 33ಕ್ಕೂ ಹೆಚ್ಚು ನಷ್ಟವಾಗಿದ್ದರೆ ರೈತರಿಗೆ ಎನ್‌ಡಿಆರ್‌ಎಫ್‌ ಪರಿಹಾರ ದೊರಕಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಿಳಿಸಿದರು. ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಶೇ 33ಕ್ಕೂ ಹೆಚ್ಚು ಹಾನಿಯಾಗಿದ್ದರೆ ಮಾತ್ರ ಪರಿಹಾರ ದೊರಕಲಿದೆ. ಗ್ರಾಮವಾರು ಸಮೀಕ್ಷೆಯಲ್ಲಿ ಕೆಲವೆಡೆ ಶೇ 33ಕ್ಕೂ ಹೆಚ್ಚು ಹಾನಿಯಾಗಿರುವುದು ಕಂಡು ಬಂದಿದೆ. ಅವರಿಗೆ ಪರಿಹಾರ ದೊರಕಲಿದೆ ಎಂದರು. ಕೇಂದ್ರ ಸರ್ಕಾರ ಈಗಾಗಲೇ ಪರಿಹಾರದ ಮೊತ್ತ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಪಾಲು ಸೇರಿಸಿ ರೈತರಿಗೆ ಒದಗಿಸಬೇಕಿದೆ ಎಂದರು.

ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ವಿ.ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT