ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ; ಮನೆ-,ಹೊಲಕ್ಕೆ ನುಗ್ಗಿದ ನೀರು

ಜಿಲ್ಲೆಯಾದ್ಯಂತ ಭಾರಿ ಮಳೆ
Last Updated 8 ಸೆಪ್ಟೆಂಬರ್ 2022, 7:39 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ, ಬುಧವಾರ ನಸುಕಿನಲ್ಲಿ ಮಳೆಯಾಗಿದೆ. ಮನೆ, ಜಮೀನು, ತೋಟಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮೂರು ಮನೆಗಳು ಹಾನಿಯಾಗಿವೆ. ಆಲ್ದೂರು ಸಮೀಪ ಹವ್ವಳ್ಳಿ– ಹುಲಿಹಳ್ಳ ಸಂಪರ್ಕ ರಸ್ತೆ ಕುಸಿದಿದೆ. ಗಿರಿಶ್ರೇಣಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಅಜ್ಜಂಪುರ ತಾಲ್ಲೂಕಿನ ಬಂಕನಕಟ್ಟೆ ಮತ್ತು ಅನುವನಹಳ್ಳಿ ಮಾರ್ಗದಲ್ಲಿನ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿದೆ. ಸಂಚಾರಕ್ಕೆ ಅಡಚಣೆಯಾಗಿದೆ.

ಸಂಚಾರ ಬಂದ್‌ ಆಗಿರುವುದರಿಂದ ಈ ಊರುಗಳವರು ಅಜ್ಜಂಪುರ, ಶಿವನಿ ಕಡೆಗೆ ತೆರಳಲು ಸುತ್ತು ಬಳಸಿ ಸಂಚರಿಸುವಂತಾಗಿದೆ.

ಮಳೆಯಿಂದಾಗಿ ಜಿಲ್ಲೆಯಲ್ಲಿ ಜೂನ್‌ನಿಂದ ಈವರೆಗೆ ಒಟ್ಟು 950 ಮನೆಗಳು, 30 ಗುಡಿಸಲುಗಳು ಹಾನಿಯಾಗಿವೆ. 6 ಮಂದಿ ಸಾವಿಗೀಡಾಗಿದ್ದಾರೆ. ಎಂಟು ಜಾನುವಾರುಗಳು ಮೃತಪಟ್ಟಿವೆ.

ಅಜ್ಜಂಪುರ: ವ್ಯಾಪಕ ಮಳೆ

ಅಜ್ಜಂಪುರ: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಹಾಗೂ ಬುಧವಾರ ಬಿರುಸಿನ ಮಳೆ ಸುರಿದು, ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಗೆ ಗ್ರಾಮಾಂತರ ಪ್ರದೇಶದ ಕೆಲವು ರಸ್ತೆಗಳು ಕೊಚ್ಚಿ ಹೋಗಿವೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿನಿಂದಾಗಿ ಕೆಲ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿತ್ತು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಅಜ್ಜಂಪುರ-ಬೀರೂರು ರಸ್ತೆ, ಕನ್ನಡ ನೂತನ ಶಾಲೆ ಮುಂದಿನ ಅಜ್ಜಂಪುರ-ತರೀಕೆರೆ ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೆ ತೊಡಕಾಗಿತ್ತು.

ಹೆಬ್ಬೂರು ಸೇತುವೆ, ಅನುವನಹಳ್ಳಿ ಸೇತುವೆ ಹಾಗೂ ಮುಗಳಿ ಗ್ರಾಮದ ಬಳಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಇದರಿಂದ ಅಜ್ಜಂಪುರ-ಶಿವನಿ, ತಮ್ಮಟದಹಳ್ಳಿ-ಶಿವನಿ ಆರ್. ಎಸ್ ನಡುವಿನ ಸಂಚಾರ ಸ್ಥಗಿತಗೊಂಡಿತ್ತು.

ಹೊಲಗಳಲ್ಲಿ ನೀರು ನಿಂತು ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದೆ. ಅಡಿಕೆ ಕೊಯ್ಲು ಮಾಡಲು ಕಷ್ಟವಾಗಿದೆ.

ಮನೆಯೊಳಗೆ ನೀರು ನುಗ್ಗಿದೆ. ಸಾಮಗ್ರಿಗಳು ತೊಯ್ದಿವೆ. ಊಟ-ನಿದ್ರೆಗೂ ಪರದಾಡುವಂತಾಗಿದೆ. ಗೋಡೆಗಳು ತೇವವಾಗಿದ್ದು, ಬೀಳುವ ಭಯ ಕಾಡುತ್ತಿದೆ ಎಂದು ಗೌರಾಪುರದ ಎಜಾಜ್ ಆತಂಕ ವ್ಯಕ್ತಪಡಿಸಿದರು.

ಅಜ್ಜಂಪುರದ ಬನಶಂಕರಿ, ಶ್ರೀರಾಮ, ಶಿವಾಜಿ ರಸ್ತೆಯ ಮೂವತ್ತಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿದೆ. ಗೌರಾಪುರದಲ್ಲಿ ಹಲವು ಮನೆಗಳಿಗೆ ನೀರು ಬಂದಿದೆ. ಮಲ್ಲೇನಹಳ್ಳಿ ಗ್ರಾಮದ ಕೆಲ ಮನೆಗಳಲ್ಲಿ ಒರತೆಯಂತೆ ನೀರು ಬರುತ್ತಿದೆ.

ಪಟ್ಟಣದ ಶ್ರೀರಾಮ ರಸ್ತೆ ಭಾಗದಲ್ಲಿ ಮನೆಯೊಳಗೆ ತುಂಬಿದ್ದ ಮಳೆ ನೀರನ್ನು ತರೀಕೆರೆ ಅಗ್ನಿಶಾಮಕ ದಳ ಸಿಬ್ಬಂದಿ ತೆರವುಗೊಳಿಸಿದರು. ಕರ್ಲು ಹಳ್ಳಕ್ಕೆ ತಡೆಗೋಡೆ ನಿರ್ಮಿಸಬೇಕು ಮತ್ತು ಊಳು ತೆಗೆಯಬೇಕು ಎಂದು ಸ್ಥಳೀಯ ರಾಜಣ್ಣ ಒತ್ತಾಯಿಸಿದರು.

ಭತ್ತದ ಗದ್ದೆಗಳಿಗೆ ಹಾನಿ

ಕಳಸ: ತಾಲ್ಲೂಕಿನಾದ್ಯಂತ ಬುಧವಾರ ಬೆಳಿಗ್ಗೆ ಭಾರಿ ಮಳೆ ಸುರಿದಿದ್ದು, ಭತ್ತದ ಗದ್ದೆಗಳಿಗೆ ಹಾನಿಯಾಗಿದೆ.

ಸತತವಾಗಿ ಸುರಿದ ಮಳೆ ಹಳ್ಳಗಳು ತುಂಬಿ ಹರಿಯುವಂತೆ ಮಾಡಿತು. ಕೆ.ಎಂ. ರಸ್ತೆ ಸಮೀಪದ ಬೇಡಕ್ಕಿ ಹಳ್ಳವು ಅಲ್ಲಿನ ಭತ್ತದ ಗದ್ದೆಗಳ ಮೇಲೆ ತುಂಬಿ ಹರಿದ ಪರಿಣಾಮ ಹತ್ತಾರು ಎಕರೆ ಭತ್ತದ ಗದ್ದೆಯ ಜಲಾವೃತವಾಯಿತು. ಗಣಪತಿಕಟ್ಟೆ ಸಮೀಪದ ಸುಳುಗೋಡು ಪ್ರದೇಶದಲ್ಲಿ ಮಳೆನೀರು ಭತ್ತದ ಗದ್ದೆಗಳಿಗೆ ನುಗ್ಗಿತು.

ಕೊಣೆಬೈಲಿನ ತಿಮ್ಮಯ್ಯ ಎಂಬುವರ ಗದ್ದೆಗೆ ಭಾರಿ ಹಾನಿ ಆಗಿದೆ. ‘ನಮ್ಮ ಗದ್ದೆಗೆ ಹಿಂದೆ ಇದೇ ಬಗೆಯ ಹಾನಿ ಆದಾಗ ₹25 ಸಾವಿರ ಖರ್ಚು ಮಾಡಿ ಗದ್ದೆಯನ್ನು ಸಜ್ಜು ಮಾಡಿದ್ದೆವು. ಈಗ ಮತ್ತೆ ಗದ್ದೆ ಹಾನಿಯಾಗಿದೆ. ಪರಿಹಾರದ ಭರವಸೆಯೇ ಇಲ್ಲ’ ಎಂದು ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಹೆದ್ದಾರಿ ಪಕ್ಕದ ಚರಂಡಿಗಳ ನಿರ್ವಹಣೆ ಇಲ್ಲದ ಕಾರಣ ರಸ್ತೆ ಮೇಲೆಯೇ ನೀರು ಹರಿದು ಹಾನಿ ಉಂಟಾಗಿದೆ.
ಕುಸಿದ ಮನೆಗೋಡೆ

ತರೀಕೆರೆ: ಕೊಂಚ ವಿರಾಮ ನೀಡಿದ ಮಳೆರಾಯ ರಾತ್ರಿಯಿಂದ ಮಳೆ ಧಾರಕಾರವಾಗಿ ತಾಲ್ಲೂಕಿನದ್ಯಾಂತ ಸುರಿದಿದೆ.

ಧಾರಕಾರ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ತರೀಕೆರೆಯಲ್ಲಿ 15 ಸೆಂ.ಮೀ, ತ್ಯಾಗದಬಾಗಿ 17 ಸೆಂ.ಮೀ, ಲಕ್ಕವಳ್ಳಿ 12ಸೆಂ.ಮೀ,ರಂಗೇನಹಳ್ಳಿ 11 ಸೆಂ.ಮೀ, ಹುಣಸಘಟ್ಟದಲ್ಲಿ 22 ಸೆಂ.ಮೀ ಮಳೆ ದಾಖಲಾಗಿದೆ.

ಮನೆ ಗೋಡೆ ಕುಸಿತ:

ಲಿಂಗದಹಳ್ಳಿ ಗ್ರಾಮದ ಪಾರ್ವತಮ್ಮ ಹಾಗೂ ದೇವಿರಮ್ಮ , ಹುಣಸಘಟ್ಟ ತಾಂಡ್ಯದ ಲಚ್ಚನಾಯ್ಕ ಮನೆಯ ಗೋಡೆಗಳು ಕುಸಿದಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಅಬ್ಬರಿಸಿದ ಮಳೆ

ಬಾಳೆಹೊನ್ನೂರು: ಪಟ್ಟಣದ ಸುತ್ತಮುತ್ತ ಬುಧವಾರ ಬೆಳಿಗ್ಗೆ ಭಾರಿ ಮಳೆ ಸುರಿಯಿತು.

ಸುಮಾರು ನಾಲ್ಕು ಗಂಟೆಗೂ ಅಧಿಕ ಸುರಿದ ಮಳೆಯಿಂದಾಗಿ ಜನಜೀವನ ಆಸ್ತವ್ಯಸ್ತಗೊಂಡಿತು. ಸೀಗೋಡು, ಬನ್ನೂರು, ಕಲ್ಲುಕೋರೆ, ಸೀಕೆ, ಮುದುಗುಣಿ, ಶಾಂತಿಪುರ, ದೂಬ್ಳ ಕೈಮರ, ಸರಗೊಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದವು.

ಕಳಸ– ಬಾಳೆಹೊನ್ನೂರು ನಡುವಿನ ಮಹಾಲ್ ಗೋಡುವಿನಲ್ಲಿ ಹಳ್ಳ ಉಕ್ಕಿ ಮುಖ್ಯ ರಸ್ತೆಯ ಮೇಲೇ ಹರಿದ ಕಾರಣ ಸುಮಾರು ಅರ್ಧ ಗಂಟೆಗೂ ಹೆಚ್ಚು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT