ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ-ಮೂಡಿಗೆರೆ ಶಾಲಾ ಕಾಲೇಜಿಗೆ ರಜೆ

ಮಲೆನಾಡಿನಲ್ಲಿ ಮುಂದುವರಿದ ಮಳೆ
Last Updated 25 ಅಕ್ಟೋಬರ್ 2019, 10:07 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ‌ಮೂಡಿಗೆರೆ ತಾಲ್ಲೂಕಿನ ಶಾಲೆ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

ಮೂಡಿಗೆರೆ ಭಾಗದಲ್ಲಿ ಗುರುವಾರ ಮಳೆ ಪ್ರಮಾಣ ಹೆಚ್ಚಾಗಿತ್ತು. ಮುಂಜಾಗ್ರತೆಯಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಬಾಳೆಹೊನ್ನೂರು ಪಟ್ಟಣದ ಸುತ್ತಮುತ್ತ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ನಂತರ ಎಡಬಿಡದೆ ಮಳೆ ಸುರಿಯಿತು. ಸಣ್ಣಪುಟ್ಟ ಹಳ್ಳ ಕೊಳ್ಳಗಳೂ ತುಂಬಿ ಹರಿದವು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ.

ಜಯಪುರ ಸಮೀಪದಲ್ಲಿ ಭಾರಿ ಗಾಳಿಯಿಂದಾಗಿ ಮರವೊಂದು ಬಿದ್ದ ಪರಿಣಾಮ ಹಸುವೊಂದು ಮೃತಪಟ್ಟಿದೆ.

ಕೊಪ್ಪ: ತಾಲ್ಲೂಕಿನಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಮಳೆಯಾಗಿದೆ. ಮಧ್ಯಾಹ್ನದ ವೇಳೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಬಿರುಸು ಮಳೆಯಾಗಿದೆ. ಬೆಳಿಗ್ಗೆ 11 ರ ಹೊತ್ತಿಗೆ ಸಣ್ಣದಾಗಿ ಪ್ರಾರಂಭವಾದ ಮಳೆ ಮಧ್ಯಾಹ್ನ ಬಿರುಸುಗೊಂಡಿತು. ಪ್ರತಿದಿನ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೂಲಿ ಕಾರ್ಮಿಕರ ದಿನ ನಿತ್ಯದ ಕೆಲಸ ಕಾರ್ಯಗಳಿಗೂ ಅಡ್ಡಿಯುಂಟು ಮಾಡಿದೆ.

ಬುಧವಾರ ರಾತ್ರಿಯಿಂದ ಬೆಳಗ್ಗಿನ ವರೆಗೆ ನಿರಂತರವಾಗಿ ಮಳೆ ಸುರಿದಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಲವೆಡೆ ಅಡಿಕೆ ಕೊಯ್ಲು ಪ್ರಾರಂಭವಾಗಿರುತ್ತಿತ್ತು. ಇದೀಗ ಮಳೆ ನಿರಂತರವಾಗಿ ಬೆಂಬಿಡದೆ ಸುರಿಯುತ್ತಿರುವುದರಿಂದ ಅಡಿಕೆ ಕೊಯ್ಲು ಪ್ರಾರಂಭಿಸಲು ಅಡ್ಡಿಯಾಗಿದ್ದು, ಬೆಳೆಗಾರರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

‌ಕೊಟ್ಟಿಗೆಹಾರ: ಗುರುವಾರ ಕೊಟ್ಟಿಗೆಹಾರದಲ್ಲಿ ಧಾರಾಕಾರ ಗಾಳಿ ಮಳೆಯಾಗಿದ್ದು, ಮಲೆನಾಡಿನಲ್ಲಿ ತಂಪಾದ ಚಳಿಯ ವಾತಾವರಣ ಸೃಷ್ಟಿಯಾಗಿದೆ.

ಕೆಲ ದಿನಗಳಿಂದ ರಾತ್ರಿ ಸುರಿಯುತ್ತಿದ್ದ ಮಳೆ ಗುರುವಾರದಿಂದ ಹಗಲಿನಲ್ಲೇ ಧಾರಾಕಾರವಾಗಿ ಸುರಿಯಿತು. ಗಾಳಿಯ ರಭಸವೂ ಹೆಚ್ಚಾಗಿತ್ತು. ಕೊಟ್ಟಿಗೆಹಾರ ಪ್ರೌಢಶಾಲೆಯ ಚಾವಣಿಯ ಹೆಂಚುಗಳಿಗೆ ಹಾನಿಯಾಗಿದೆ. ಕೊಟ್ಟಿಗೆಹಾರದಲ್ಲಿ 72ಮಿ.ಮೀ ಮಳೆಯಾಗಿದೆ. ಬಣಕಲ್, ಬಾಳೂರು ಸುತ್ತಮುತ್ತವೂ ವ್ಯಾಪಕ ಮಳೆಯಾಗುತ್ತಿದೆ.

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ನಿರಂತರವಾಗಿ ಮಳೆ ಮುಂದುವರಿದಿದೆ. ಬುಧವಾರ ಮಧ್ಯಾಹ್ನ ಭಾರಿ ಪ್ರಮಾಣದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿತ್ತು. ಪುನಃ ರಾತ್ರಿ 11 ಗಂಟೆಯಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ಗುರುವಾರ ಬೆಳಿಗ್ಗೆವರೆಗೂ ಸಾಧಾರಣದಿಂದ ಮಳೆ ಸುರಿಯಿತು.

ಗುರುವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 1ಗಂಟೆ ವೇಳೆಗೆ ಭಾರಿ ಗಾಳಿಯೊಂದಿಗೆ ಸುಮಾರು 1 ಗಂಟೆಗೂ ಅಧಿಕ ಕಾಲ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ಸ್ವಲ್ಪ ಕಾಲ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನ 3ಗಂಟೆ ವೇಳೆಗೆ ಭಾರಿ ಪ್ರಮಾಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿತು.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಡಿಕೆ ಕೊಯ್ಲಿಗೆ ಹಿನ್ನಡೆಯಾಗಿದೆ. ಅಲ್ಲದೆ, ಕೆಲವು ಭಾಗಗಳಲ್ಲಿ ಅಡಿಕೆಗೆ ಇಡಿ ಮುಂಡಿ ರೋಗ ತಗುಲಿದ್ದು ಔಷಧಿ ಸಿಂಪಡಿಸಿ ರೋಗ ನಿಯಂತ್ರಣಕ್ಕೂ ಮಳೆ ಅಡ್ಡಿಪಡಿಸಿದೆ. ಭತ್ತದ ಗದ್ದೆಗಳಲ್ಲಿ ಕಾಳು ಕಟ್ಟುವ ಸಮಯವಾಗಿದ್ದು ಮಳೆ ಬರುತ್ತಿರುವುದರಿಂದ ಭತ್ತದ ಬೆಳೆಗಾರರಲ್ಲೂ ಆತಂಕವನ್ನುಂಟು ಮಾಡಿದೆ. ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

‌ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಗುರುವಾರ ಭಾರಿ ಮಳೆಯಿಂದ ನರಸಿಂಹ ಪರ್ವತದ ಎರಡು ಕೊಳಗಳು, ಬರ್ಕಣ, ಸಿರಿಮನೆ, ಸೂತನಬ್ಬಿ ಮುಂತಾದ ಜಲಪಾತಗಳು ತುಂಬಿ ಉಕ್ಕಿ ಹರಿಯುತ್ತಿದೆ.

ಹಳ್ಳಕೊಳ್ಳಗಳು, ಭತ್ತದ ಗದ್ದೆಗಳು ನೀರಿನಿಂದ ಆವೃತ್ತಗೊಂಡಿದೆ. ತುಂಗಾನದಿ ಉಕ್ಕಿ ಹರಿದು ಶಾರದಾ ಪೀಠದ ಕಪ್ಪೆಶಂಕರ ದೇವಾಲಯ ಮುಳುಗಿದೆ. ಭೀಕರ ಮಳೆಯಿಂದ ಶೃಂಗೇರಿಯ ಮುಖ್ಯ ಬೀದಿಗಳಲ್ಲಿ ನೀರು ಹರಿದು ವಾಹನಗಳ ಒಡಾಟಕ್ಕೆ ತೊಂದರೆ ಉಂಟಾಯಿತು.

ಶೃಂಗೇರಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 3,936.4 ಮಿ.ಮೀ ಮಳೆ ಸುರಿದಿದೆ. ಗುರುವಾರ ಶೃಂಗೇರಿಯಲ್ಲಿ 26.2 ಮಿ.ಮೀ, ಕೆರೆಕಟ್ಟೆಯಲ್ಲಿ 64.6 ಮಿ.ಮೀ, ಕಿಗ್ಗಾದಲ್ಲಿ 32.8 ಮಿ.ಮೀ ಮಳೆಯಾಗಿದೆ. ಪಟ್ಟಣದಲ್ಲಿ ಭಾರಿ ಮಳೆಯಿಂದ ಗ್ರಾಮೀಣ ಪ್ರದೇಶದ ಜನರು ಹಾಗೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆ ಆಗಿದೆ.

ತಾಲ್ಲೂಕಿನ ಅತಿಯಾದ ಮಳೆಯಿಂದ ಹಲವು ಕಡೆ ನೀರಿನಿಂದ ಆವೃತ್ತಗೊಂಡು ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಭಾರತಿ ಬೀದಿ, ಆನೆಗುಂದ ರಸ್ತೆ, ಗಾಂಧಿ ಮೈದಾನ, ಹಾಲಂದೂರು ರಸ್ತೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆ ನೀರು ನಿಂತಿದೆ.

ಬುಧವಾರ ರಾತ್ರಿಯಿಂದ ಅತಿಯಾದ ಮಳೆಯಿಂದ 49 ಗ್ರಾಮಗಳಲ್ಲಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂತಗೋಡು ಮೊದಲಾದ ಗ್ರಾಮದ ರಸ್ತೆ ಮತ್ತು ಗದ್ದೆಗಳಲ್ಲಿ ನೀರು ಆವೃತವಾಗಿದೆ.

ಕಾಲುಜಾರಿ ಬಿದ್ದು ವೃದ್ಧೆ ನದಿಪಾಲು: ಕಡೂರು ತಾಲ್ಲೂಕಿನ ಮಲ್ಲಿದೇವಿಹಳ್ಳಿ ಬಳಿಯ ಶಂಖತೀರ್ಥದಲ್ಲಿ (ವೇದಾವತಿ ನದಿ) ಕಾಲುಜಾರಿ ಬಿದ್ದು ಕರಿಯಮ್ಮ (82) ನೀರುಪಾಲಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT