ಮಂಗಳವಾರ, ಜುಲೈ 27, 2021
27 °C
ಮೂಡಿಗೆರೆಯಲ್ಲಿ ವರುಣನ ಅಬ್ಬರ– ಬತ್ತಿ ಹೋಗಿದ್ದ ಝರಿ, ತೊರೆಗಳಲ್ಲಿ ನೀರಿನ ಸೆಲೆ

ಮಲೆನಾಡಿನಲ್ಲಿ ಮುಂದುವರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ಶನಿವಾರವೂ ಮುಂದುವರೆದಿದ್ದು, ಇಡೀ ದಿನ ಧಾರಾಕಾರವಾಗಿ ಸುರಿಯಿತು.

ಶುಕ್ರವಾರ ತಡರಾತ್ರಿಯವರೆಗೂ ಬಿಡುವಿಲ್ಲದೇ ಸುರಿದ ಮಳೆರಾಯ, ಶನಿವಾರ ಮುಂಜಾನೆ ಪ್ರಾರಂಭವಾಗಿ ಮಧ್ಯಾಹ್ನದವರೆಗೂ ನಿರಂತರವಾಗಿ ಸುರಿಯಿತು. ಮಧ್ಯಾಹ್ನದ ಬಳಿಕ ಕೆಲಕಾಲ ಬಿಡುವು ನೀಡಿದರೂ, ಸಂಜೆ ವೇಳೆಗೆ ಮತ್ತೆ ಧಾರಾಕಾರವಾಗಿ ಸುರಿದು ಜನರು ಮನೆಯಿಂದ ಹೊರಗೆ ಬರದಂತೆ ಅಡ್ಡಿಪಡಿಸಿತು. ಮಳೆ ಚುರುಕುಗೊಂಡಿದ್ದರಿಂದ ಕಾರ್ಮಿಕರು ಮನೆಯಿಂದ ಹೊರಹೋಗಲು ಹಿಂಜರಿದ್ದರ ಪರಿಣಾಮ ಬಹುತೇಕ ಕಾಫಿ ತೋಟಗಳಲ್ಲಿ ಚಟುವಟಿಕೆಗಳು ಸ್ಥಗಿತವಾಗಿದ್ದವು.

ಮಳೆ ಚುರುಕುಗೊಂಡ ಬೆನ್ನಲ್ಲೆ, ಪಟ್ಟಣದಲ್ಲಿ ಛತ್ರಿ, ರೈನ್ ಕೋಟ್ ಮಾರಾಟ ಮಾಡುವ ಅಂಗಡಿಗಳಲ್ಲಿ ವಹಿವಾಟು ಗರಿಗೆದರಿದ್ದು, ಜನರು ಬೆಚ್ಚನೆಯ ಉಡುಪು ಖರೀದಿಯಲ್ಲಿ ತೊಡಗಿದ್ದರು.

ರಾಷ್ಟ್ರೀಯ ಹೆದ್ದಾರಿ 173ರ ಗಂಗನಮಕ್ಕಿ ಬಳಿ ಹೆದ್ದಾರಿಯ ಬದಿಯಲ್ಲಿ ಒಳಚಂಡಿ ವ್ಯವಸ್ಥೆಯಿಲ್ಲದೇ, ಏರು ಪ್ರದೇಶದಿಂದ ಹರಿದು ಬರುವ ನೀರು ರಸ್ತೆ ಮೇಲೆ ನಿಂತು ಹೆದ್ದಾರಿ ಸವಾರರಿಗೆ ಅಡ್ಡಿ ಉಂಟಾಯಿತು. ಈ ಪ್ರದೇಶದ ಕೆಲಭಾಗ ಪಟ್ಟಣ ಪಂಚಾಯಿತಿಗೂ, ಮತ್ತಷ್ಟು ಭಾಗ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿದ್ದು, ಒಳಚರಂಡಿ ನಿರ್ಮಾಣವಾಗದೇ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಚುರುಕುಗೊಂಡಿರುವುದರಿಂದ ಬತ್ತಿ ಹೋಗಿದ್ದ ಝರಿ, ತೊರೆಗಳಲ್ಲಿ ನೀರಿನ ಸೆಲೆ ಕಾಣತೊಡಗಿದ್ದು, ತತ್ಕೊಳ, ಭೈರಾಪುರ, ಚಿಕ್ಕಳ್ಳ, ಪಟ್ಟದೂರು ಮುಂತಾದ ಗ್ರಾಮಗಳಲ್ಲಿರುವ ಝರಿಗಳು ನೀರಿನಿಂದ ಕಂಗೊಳಿಸತೊಡಗಿವೆ.

ಕೊಟ್ಟಿಗೆಹಾರ: ವಾರದಿಂದ ಕೊಟ್ಟಿಗೆಹಾರ ಭಾಗದಲ್ಲಿ ಉತ್ತಮ ಮಳೆ ಯಾಗುತ್ತಿದೆ. ಚಾರ್ಮಾಡಿ ಪ್ರದೇಶದಲ್ಲಿ  ಮಂಜುಮುಸುಕಿದ ವಾತಾವರಣ ಇದೆ.

ಶುಕ್ರವಾರ ಗಾಳಿ ಮಳೆಗೆ ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ಮರವೊಂದು ಅರ್ಧ ರಸ್ತೆಗೆ ಉರುಳಿದೆ. ಇದರಿಂದ ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆ ಯಾಗಿಲ್ಲ. ಚಾರ್ಮಾಡಿಯ ತೊರೆಗಳು, ಜಲಪಾತಗಳಿಗೆ ಜೀವಕಳೆ ಬಂದಂತಾಗಿದೆ.

ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ನಿಡುವಾಳೆ, ಬೆಟ್ಟಗೆರೆ, ಫಲ್ಗುಣಿ ಸುತ್ತಮುತ್ತ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶುಕ್ರವಾರ ತಡರಾತ್ರಿಯೂ ಗಾಳಿ ಸಹಿತ ವಿಪರೀತ ಮಳೆಯಾಗಿದೆ. ಕೊಟ್ಟಿಗೆಹಾರದಲ್ಲಿ ಶನಿವಾರ 25.6 ಮಿ.ಮಿ (3ಸೆ.ಮೀ) ಮಳೆಯಾಗಿದೆ.

ಮುಂಗಾರು ಪ್ರವೇಶದಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ನಾಟಿ ಮಾಡಲು ಸಸಿಮಡಿಗಳಿಗಾಗಿ ಅಗಡಿ ಗಳನ್ನು ಎತ್ತುಗಳ ಮೂಲಕ, ಟ್ರ್ಯಾಕ್ಟರ್ ಮೂಲಕ ಸಿದ್ಧತೆ ಮಾಡುತ್ತಿದ್ದಾರೆ.

ಕಳಸ, ಕೊಪ್ಪ ಭಾಗದಲ್ಲೂ ಶನಿವಾರ ಸಾಧಾರಣ ಮಳೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು