ಕೃಷಿಕರ ಬ್ಯಾಂಕ್ ಸಾಲ ಮನ್ನಾಕ್ಕೆ ಆಗ್ರಹ

ಆಲ್ದೂರು: ಕಾಫಿ ಬೆಳೆಗಾರರು ಮತ್ತು ಎಲ್ಲ ಕೃಷಿಕರ ಬ್ಯಾಂಕ್ ಸಾಲಮನ್ನಾಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಗಣಪತಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ರೈತ ಸಂಘದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಘದ ಅಧ್ಯಕ್ಷ ಉದ್ದೆಗೌಡ ಮಾತನಾಡಿ, ‘ಕಾಫಿ ಬೆಳೆಗಾರರು ಮತ್ತು ಎಲ್ಲ ರೈತರು ಈ ವರ್ಷ ತೀವ್ರ ನಷ್ಟದಲ್ಲಿದ್ದಾರೆ. ಸರ್ಕಾರ ಅವರಿಗೆ ನ್ಯಾಯಯುತ ಪರಿಹಾರ ಒದಗಿಸಿಲ್ಲ. ಬದಲಾಗಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಉದ್ಯಮಿಗಳಾದ ವಿಜಯ ಮಲ್ಯ, ನೀರವ್ ಮೋದಿಯಂಥವರು ಪಡೆದ ಸಾಲ ತೀರಿಸದೆ ವಿದೇಶಕ್ಕೆ ಓಡಿ ಹೋಗಿದ್ದಾರೆ. ಅವರ ಮೇಲೆ ಯಾವ ಕ್ರಮಕ್ಕೂ ಮುಂದಾಗಿಲ್ಲ. ಆದರೆ, ರೈತರ ಸಾಲಮನ್ನಾ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ’ ಎಂದರು.
ಜನಪ್ರತಿನಿಧಿಗಳು, ಸರ್ಕಾರಗಳು ರೈತರ ವಿಚಾರದಲ್ಲಿ ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಮುಂದೊಂದು ದಿನ ಇಡೀ ದೇಶ ಹಸಿವಿನ ಹಾಹಾಕಾರ ಎದುರಿಸುವ ಸಂದರ್ಭ ಬರಬಹುದು ಎಂದು ಎಚ್ಚರಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷೆ ತುಳಸಿ ಗೌಡ ಮಾತನಾಡಿ, ‘ದೇಶದ ಬೆನ್ನೆಲುಬಾದ ರೈತನ ಬೆನ್ನೆಲುಬನ್ನೇ ಸರ್ಕಾರಗಳು ತಮ್ಮ ನೀತಿಯ ಮೂಲಕ ಮುರಿಯುತ್ತಿವೆ. ಕಾಫಿ ಬೆಳೆಗಾರರಿಂದ ಸರ್ಕಾರಕ್ಕೆ ವಾರ್ಷಿಕ ₹9,000 ಕೋಟಿ ಆದಾಯ ಬರುತ್ತಿತ್ತು. ಆದರೆ, ಈ ವರ್ಷ ಅತಿವೃಷ್ಟಿಯಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ. ಕಾಫಿ ಬೆಳೆಗಾರರಸರ್ಕಾರದ ವಿರುದ್ಧವಾಗಿ ಇಲ್ಲ, ಆದರೆ ವಿಳಂಬ ನೀತಿಯ ಕುರಿತು ನಾವು ಪ್ರತಿಭಟನೆ ನಡೆಸಿದ್ದೇವೆ. ಬೆಳೆಹಾನಿ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿ, ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಸಂದೇಶ್ ಮಾತನಾಡಿ, ಸರ್ಕಾರ ರೈತರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ವಳಗೇರಹಳ್ಳಿ ತಮಣ್ಣಗೌಡ ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.