ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಂದು ರೈತ ಸಂಘ–ಹಸಿರು ಸೇನೆಯಿಂದ ಗಣರಾಜ್ಯೋತ್ಸವ: ಕೋಡಿಹಳ್ಳಿ ಚಂದ್ರಶೇಖರ್

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
Last Updated 24 ಜನವರಿ 2021, 4:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ರೈತರ ಸಮಸ್ಯೆಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ರಾಜ್ಯ ರೈತ ಸಂಘ–ಹಸಿರು ಸೇನೆ ವತಿಯಿಂದ ಇದೇ 26ರಂದು ದೆಹಲಿ, ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುವುದು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಲ್ಲಿ ಶನಿವಾರ ಹೇಳಿದರು.

‘ದೆಹಲಿಯಲ್ಲಿ ಪ್ರಧಾನಿ, ರಾಜ್ಯದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಭಾಷಣ ಮುಗಿಸಿದ ನಂತರ, ರಾಷ್ಟ್ರಧ್ವಜ, ರೈತ ಸಂಘದ ಬಾವುಟ ಕಟ್ಟಿದ ಸಾವಿರಾರು ವಾಹನಗಳಲ್ಲಿ ರೈತರು ದೆಹಲಿ ಹಾಗೂ ಬೆಂಗಳೂರನ್ನು ಪ್ರವೇಶ ಮಾಡುವರು. ರೈತರ ಸಂಕಷ್ಟ ಬಿಂಬಿಸುವ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಇರಲಿವೆ. ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಘೋಷಣೆ ಕೂಗುವರು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿಯಿಂದ ಬೆನ್ನುತಟ್ಟಿಸಿಕೊಳ್ಳುವ ತವಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ಭೂ ಸ್ವಾಧೀನ ಕಾಯ್ದೆ, ಕೃಷಿ ಮಾರುಕಟ್ಟೆ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಗೋಹತ್ಯೆ ಕಾಯ್ದೆಯನ್ನು ಜಾನುವಾರು ಹತ್ಯೆ ಕಾಯ್ದೆಯಾಗಿ ಮಾರ್ಪಡಿಸಿದ್ದಾರೆ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲ ನೀಡಬೇಕು. ವಿದ್ಯುತ್ ಉತ್ಪಾದನಾ ನಿಗಮಗಳನ್ನು ಖಾಸಗೀಕರಣ ಮಾಡಬಾರದು. ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ದೆಹಲಿಯಲ್ಲಿ ಎರಡು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 140 ಪ್ರತಿಭಟನಕಾರರು ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಕಾರ ಎತ್ತಿಲ್ಲ. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿಲ್ಲ’ ಎಂದು ದೂರಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಮಹೇಶ್, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ, ಮುಖಂಡರಾದ ಮಂಜೇಗೌಡ, ಮಹೇಶ್, ಓಂಕಾರಪ್ಪ, ಬೈರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT