ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷಕ್ಕೆ ಅರಿವಿನ ಕೊರತೆ ಕಾರಣ: ವೀರಸೋಮೇಶ್ವರ ಸ್ವಾಮೀಜಿ

Last Updated 29 ಜನವರಿ 2021, 0:52 IST
ಅಕ್ಷರ ಗಾತ್ರ

ರಂಭಾಪುರಿ (ಬಾಳೆಹೊನ್ನೂರು): ‘ಸುಖದ ಮೂಲ ಧರ್ಮಾಚರಣೆ ಯಲ್ಲಿದೆ. ಸತ್ಯದ ತಳಹದಿಯ ಮೇಲೆ ಸುಸಂಸ್ಕೃತ ಜೀವನ ನಿರ್ಮಾಣಗೊಳ್ಳಲು ಸಾಧ್ಯ. ಮನುಷ್ಯನಿಗೆ ಬರುವ ತಾಪತ್ರಯ ಸುಖಾಗಮನದ ಹೆಗ್ಗುರುತು’ ಎಂದು ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ನದಿ ದಾಟಲು ನೌಕೆ ಬೇಕು. ಭವ ಸಾಗರ ದಾಟಲು ಗುರು ಬೇಕು. ಅರಿವು ಆದರ್ಶಗಳಿಂದ ಬದುಕು ಶ್ರೀಮಂತಗೊಳ್ಳಬೇಕಾಗಿದೆ. ಇಂದು ಎಲ್ಲ ರಂಗಗಳಲ್ಲಿ ನಡೆದಿರುವ ಸಂಘರ್ಷಗಳಿಗೆ ಅರಿವಿನ ಕೊರತೆಯೇ ಕಾರಣವೆಂದರೆ ತಪ್ಪಾಗದು’ ಎಂದರು.

‘ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ಸಹಜ. ಇವೆರಡರ ಮಧ್ಯದ ಬದುಕು ಇನ್ನಿತರರಿಗೆ ಮಾದರಿಯಾಗಬೇಕು. ಪೂರ್ವ ಕಾಲದ ಆಚಾರ್ಯರು ಮತ್ತು ಋಷಿ ಮುನಿಗಳು ಕೊಟ್ಟ ಸಂದೇಶ ಉಜ್ವಲ ಬದುಕಿಗೆ ಪ್ರೇರಕ ಶಕ್ತಿಯಾಗಿವೆ. ವಿಶ್ವ ಬಂಧುತ್ವ ಸಾರಿದ ರೇಣುಕಾಚಾರ್ಯರು ಮಾನವೀಯತೆಯ ಉತ್ಕೃಷ್ಟ ಮೌಲ್ಯ ಗಳನ್ನು ಬೋಧಿಸಿದ್ದಾರೆ. ಆ ಮಹಾ ಬೆಳಕಿನಲ್ಲಿ ಮನುಷ್ಯ ಮುನ್ನಡೆದಾಗ ಬದುಕಿಗೆ ಬೆಲೆ ಬರುತ್ತದೆ’ ಎಂದರು.

ಪ್ರಾತಃಕಾಲದಲ್ಲಿ ಕ್ಷೇತ್ರದ ಎಲ್ಲ ದೈವಗಳಿಗೆ ಪೌರ್ಣಿಮೆ ನಿಮಿತ್ತ ವಿಶೇಷ ಪೂಜೆ ನಡೆಯಿತು. ಸುಳ್ಳದ ಶಿವಸಿದ್ಧರಾಮೇಶ್ವರ, ಹಂಪಸಾಗರದ ಶಿವಲಿಂಗ ರುದ್ರಮುನಿ, ನೆಗಳೂರು ಗುರುಶಾಂತೇಶ್ವರ, ತರೀಕೆರೆ ಉಪ ವಿಭಾಗಾಧಿಕಾರಿ ರೇಣುಕ ಪ್ರಸಾದ್, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT