ಗುರುವಾರ , ಫೆಬ್ರವರಿ 27, 2020
19 °C
ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ಸಂವಿಧಾನ ಉಲ್ಲಂಘಿಸಿದರೆ ಉಳಿಗಾಲವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶನಿವಾರ ಸಂವಿ ಧಾನ ಸಂರಕ್ಷಣಾ ದಿನಾಚರಣೆ ಹಾಗೂ ಎನ್‍ಆರ್‌ಸಿ, ಸಿಎಎ, ಎನ್‍ಪಿಆರ್, ಸಿಸಿಸಿ ಕಾಯ್ದೆ ವಿರೋಧಿಸಿ ಜನಜಾಗೃತಿ ಸಮಾವೇಶ ನಡೆಸಲಾಯಿತು.

ವಿವಿಧ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳ ನ್ನೊಳಗೊಂಡು ಸ್ಥಾಪನೆಯಾಗಿರುವ ಸಂವಿಧಾನ ಸಂರಕ್ಷಣಾ ಸಮಿತಿ ಏರ್ಪಡಿ ಸಿದ್ದ ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾದರು. ಅಧ್ಯಕ್ಷತೆಯನ್ನು ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ವಹಿಸಿದ್ದು, ಭಾಷಣಕಾರರಿಗೆ ಮಾತ್ರ ವೇದಿಕೆ ಏರಲು ಅವಕಾಶ ಕಲ್ಪಿಸಲಾಗಿತ್ತು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ‘ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಸಂವಿಧಾನವೇ ಪರಮಶ್ರೇಷ್ಠವಾಗಿದ್ದು, ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುವಲ್ಲಿ ಸಂವಿಧಾನದ ಚೌಕಟ್ಟು ಸಹಕಾರಿಯಾಗಿದೆ. ಈ ಸಂವಿಧಾನದ ಚೌಕಟನ್ನೇ ಬದಲಾಯಿಸಲು ಹೊರಟಿರುವವರಿಗೆ ಉಳಿಗಾಲವಿಲ್ಲ. ದೇಶದಲ್ಲಿ ಜಾರಿಗೆ ಬಂದಿರುವ ಕಾಯ್ದೆಗಳ ಕುರಿತು, ಅಮಿತ್ ಶಾ ಅವರು ನಮ್ಮ ದೇಶಕ್ಕೆ ಬಂದಿರುವ ನುಸುಳುಕೋರರನ್ನು ಗುಂಡಿಕ್ಕಿ ಕೊಲ್ಲುತ್ತೇವೆ ಎನ್ನುತ್ತಾರೆ. ಮತ್ತೊಂದು ಕಡೆ ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲವೆಂದು ಮೋದಿ ಹೇಳುತ್ತಾರೆ. ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು. ಇವರನ್ನು ನಂಬಿದರೆ ದೇಶದ ಜನತೆ ಕೆಡುವುದು ಗ್ಯಾರಂಟಿ’ ಎಂದು ಟೀಕಿಸಿದರು.

ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ‘ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರು ಆಹಾರ, ಉದ್ಯೋಗ, ನೆಲೆಯನ್ನು ಬಯಸಿ ವಲಸೆ ಹೋಗುವುದು ಸಹಜ. ಕೇವಲ ಮಾನವರು ಮಾತ್ರವಲ್ಲ, ಪ್ರಾಣಿ ಪಕ್ಷಿಗಳು ಹೊರ ದೇಶಕ್ಕೆ ವಲಸೆ ಹೋಗಿ ಬರುತ್ತದೆ. ಇವರ ಕಾನೂನಿಗೆ ಪ್ರಾಣಿಪಕ್ಷಿಗಳ ವಲಸೆ ತಡೆಯಲು ಸಾಧ್ಯವೇ? ಭಾರತ ಸಂವಿಧಾನ ಸರ್ವಶ್ರೇಷ್ಠವಾದದ್ದು. ಸಂವಿಧಾನದ ಮೂಲಭೂತ ಅಂಶಗಳ ತಿದ್ದುಪಡಿ ಮಾಡಲು ಅವಕಾಶವಿಲ್ಲವೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಏನೇ ಮಾತನಾಡಿದರೂ ಸಂವಿಧಾನದ ಒಂದು ಅಕ್ಷರ ಬದಲಾಯಿಸಲು ಸಾಧ್ಯವೇ ಇಲ್ಲ’ ಎಂದರು.

ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಮಾತನಾಡಿ, ‘ದೇಶದಲ್ಲಿ ಸಂವಿಧಾನವೇ ಭಗವದ್ಗೀತೆ. ಇದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ನಮಗೇನೂ ಆಗುವುದಿಲ್ಲ ಎಂಬ ಚಿಂತನೆಯಲ್ಲಿರುವ ಬಹುಸಂಖ್ಯಾತರದ್ದು ತಪ್ಪು ತಿಳುವಳಿಕೆ. ಈ ಕಾಯ್ದೆಯು ನಾಳೆ ಬಹುಸಂಖ್ಯಾತರಿಗೂ ಉರುಳಾಗ ಬಹುದು. ಕುಣಿಕೆ ಬಿಗಿಯುವ ಮುನ್ನ ಜಾಗೃತರಾಗಬೇಕು’ ಎಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ‘ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳೆಲ್ಲಾ ಹಳ್ಳ ಹಿಡಿದಿವೆ. ಕೈಗಾರಿಕೆಗಳು, ಉದ್ಯಮಗಳು ನೆಲ ಕಚ್ಚಿದ್ದು, ಯುವ ಜನತೆಯು ನಿರುದ್ಯೋಗದಿಂದ ತತ್ತರಿಸಿದ್ದಾರೆ. ಇವೆಲ್ಲವನ್ನೂ ಮುಚ್ಚಿ ಹಾಕಲು ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿದ್ದು, ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಯಬೇಕು’ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಡಾ.ನಜ್ಮಾ ಮಾತನಾಡಿದರು.

ಸಮಿತಿ ಕಾರ್ಯಾಧ್ಯಕ್ಷರಾದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಗೌಡ, ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಝಾಕೀರ್ ಹುಸೇನ್, ಎಂ.ಪಿ.ಮನು, ಉಪಾಧ್ಯಕ್ಷರಾದ ಬಿಎಸ್‍ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಹೊಸಕೆರೆ ರಮೇಶ್, ಹಂಝಾ, ಎಂ.ಎಸ್.ಅನಂತ್, ಸಿ.ಕೆ.ಇಬ್ರಾಹಿಂ, ಮರಗುಂದ ಪ್ರಸನ್ನ, ಜಕಾರಿಯಾ, ಸಂಪತ್, ಅಂಜುಮಾನ್ ಕಮಿಟಿ ಅಧ್ಯಕ್ಷ ಹುಸೇನ್‍ಭಾಷ, ಸೇರಿದಂತೆ ಧರ್ಮಗುರುಗಳು, ಪದಾಧಿಕಾರಿಗಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು