ಬುಧವಾರ, ನವೆಂಬರ್ 20, 2019
20 °C

‘5 ತಿಂಗಳ ಬಾಡಿಗೆ ₹ 25 ಸಾವಿರ ಒಂದು ಕಂತಲ್ಲಿ ಪಾವತಿ’

Published:
Updated:
Prajavani

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಿಂಗಳಿಗೆ ₹ 5 ಸಾವಿರದಂತೆ 10 ತಿಂಗಳು ಪಾವತಿಸಲು ನಿರ್ಧರಿಸಲಾಗಿದೆ. ಒಂದು ಕಂತಿನಲ್ಲಿ ಐದು ತಿಂಗಳ ಬಾಡಿಗೆ ₹ 25ಸಾವಿರ ನೀಡಲು ಆದೇಶ ಹೊರಡಿಸಲಾಗುವುದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ‘ಈ ಕುರಿತು ಶುಕ್ರವಾರವೇ ಮಾರ್ಪಾಡು ಆದೇಶ ಹೊರಡಿಸಲಾಗುವುದು. ಬಾಡಿಗೆ ಮನೆ ಪಡೆಯುವ ನಿಟ್ಟಿನಲ್ಲಿ ಮುಂಗಡ ಪಾವತಿಸಲು ಸಂತ್ರಸ್ತರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ 100 ವರ್ಷದಿಂದ ವಾಸವಿದ್ದವರೊಬ್ಬರ ಮನೆ ಕುಸಿದಿದೆ. ಅವರಿಗೆ ಮತ್ತೆ ಅಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಲು ಅವಕಾಶ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಹಾರದ ಯಾವುದೇ ಮೊತ್ತ ವನ್ನು ಚೆಕ್‌ ಅಥವಾ ನಗದು ರೂಪದಲ್ಲಿ ನೀಡಬಾರದು. ಎಲ್ಲವನ್ನು ಆನ್‌ಲೈನ್‌ನಲ್ಲಿ ಆರ್‌ಟಿಜಿಎಸ್‌ನಲ್ಲಿ ಸಂತ್ರಸ್ತರ ಖಾತೆಗೆ ನೇರವಾಗಿ ಜಮೆ ಮಾಡಬೇಕು ಎಂದು ಖಡಕ್‌ ಸೂಚನೆ ನೀಡಿದರು.

ಭಾಗಶಃ ಮನೆ ಹಾಳಾಗಿರುವವರಿಗೆ ರಿಪೇರಿಗೆ ತಕ್ಷಣ ಪರಿಹಾರ ನೀಡಬೇಕು. ಹಾಗೆಯೇ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಬೇರೆ ಕಡೆ ಜಾಗ ಗುರುತಿಸಬೇಕಿದ್ದರೆ ತಕ್ಷಣವೇ ಕ್ರಮ ವಹಿಸಬೇಕು ಎಂದರು.

ಪ‍‍ರಿಹಾರ ಕೇಂದ್ರದಲ್ಲಿ ಮಗುವೊಂದರ ಸಮಸ್ಯೆಯನ್ನು ತಾಯಿಯೊಬ್ಬರು ಗಮನಕ್ಕೆ ತಂದಿದ್ದಾರೆ. ನಾಳೆಯೇ ಅಲ್ಲಿಗೆ ಮಕ್ಕಳ ತಜ್ಞರನ್ನು ಕಳಿಸಿ ಮಗು ತಪಾಸಣೆ ಮಾಡಿಸಬೇಕು ಎಂದರು.

ಮನೆ ಮತ್ತು ಜಮೀನು ಕಳೆದು ಕೊಂಡವರಿಗೆ ವಸತಿ, ಜಾಗ ಕಲ್ಪಿಸುವ ನಿಟ್ಟಿನಲ್ಲಿ 374 ಎಕರೆ ಜಾಗ ಗುರುತಿಸಲಾಗಿದೆ. ಸಂತ್ರಸ್ತರು ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಸಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದರು.

ಶಾಸಕರಾದ ಟಿ.ಡಿ.ರಾಜೇಗೌಡ, ಎಂ.ಪಿ.ಕುಮಾರಸ್ವಾಮಿ, ಬೆಳ್ಳಿ ಪ್ರಕಾಶ್‌, ವಿಧಾನ ಪರಿಷತ್ತಿನ ಸದಸ್ಯ ಎಂ.ಕೆ.ಪ್ರಾಣೇಶ್‌ , ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುಜಾತಾ ಕೃಷ್ಣಪ್ಪ, ಸಿಇಒ ಅಶ್ವತಿ ಇದ್ದರು.

ಪ್ರತಿಕ್ರಿಯಿಸಿ (+)