ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಕೃತಿಗಳ ಅಧ್ಯಯನಕ್ಕೆ ಸಲಹೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಜಯಂತ್ಯುತ್ಸವ
Last Updated 14 ಏಪ್ರಿಲ್ 2019, 14:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕೃತಿಗಳನ್ನು ಪ್ರತಿಯೊಬ್ಬರೂ ಓದಬೇಕು. ಬಹಳಷ್ಟು ಸಂಶೋಧನೆ, ಆಳವಾಗಿ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್‌ ಜಯಂತ್ಯುತ್ಸವದಲ್ಲಿ ಮಾತನಾಡಿದರು. ‘ಅಂಬೇಡ್ಕರ್‌ ಪುಸ್ತಕಗಳನ್ನು ಓದಿದರೆ ದೇಶದ ಸಾಮಾಜಿಕ ಸ್ಥಿತಿಯನ್ನು ಒಳ್ಳೆಯ ರೀತಿಯಲ್ಲಿ ಬದಲಾವಣೆ ಮಾಡಲು ಕಷ್ಟಪಟ್ಟಿದ್ದಾರೆ ಎಂಬದು ಗೊತ್ತಾಗುತ್ತದೆ. ಅವರು ಜ್ಞಾನದ ಗಣಿ. ಎಲ್ಲ ಜನರ ಒಳಿತಿಗಾಗಿ ಅವರು ಶ್ರಮಿಸಿದರು. ಅವರ ಕೃತಿಗಳನ್ನು ಓದುವುದರಿಂದ ಅವರ ವಿಚಾರಧಾರೆಗಳು ಚೆನ್ನಾಗಿ ಮನದಟ್ಟಾಗುತ್ತವೆ’ ಎಂದು ಹೇಳಿದರು.

ಒಬ್ಬೊಬ್ಬರು ಮಹನೀಯರು ಒಂದೊಂದು ಕ್ಷೇತ್ರದಲ್ಲಿ (ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಮಾಜ ಸುಧಾರಣೆ, ಜನನಾಯಕತ್ವ, ಪಾಂಡಿತ್ಯ....) ಸಾಧನೆ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮೆರೆದಿರುವುದು ಅಂಬೇಡ್ಕರ್‌ ವೈಶಿಷ್ಟ್ಯ. ಅಂಬೇಡ್ಕರ್‌ ಅವರಿಗೆ 11 ಭಾಷೆಗಳು ಗೊತ್ತಿದ್ದವು’ ಎಂದರು.

‘ಶಿಕ್ಷಣ, ಸಂಘಟನೆ, ಆಂದೋಲನ ಈ ಮೂರು ಅಂಶಗಳ ಮಹತ್ವ ಏನು ಎಂಬುದನ್ನು ತಿಳಿಸಿದ್ದಾರೆ. ಅವರ ವಿಚಾರಧಾರೆಗಳನ್ನು ಪರಿಪೂರ್ಣವಾಗಿ ತಿಳಿದುಕೊಂಡು ಮುಂದುವರಿಯಬೇಕು. ಸಂವಿಧಾನದ ಮೂಲಕ ಎಲ್ಲ ಸಮುದಾಯವರಿಗೂ ಸಮಾನ ಪ್ರಾತಿನಿಧ್ಯ ಕಲ್ಪಿಸಿದರು. ಮಹಿಳೆಯರ ಅಭ್ಯುದಯಕ್ಕೆ ಶ್ರಮಿಸಿದ ಮಹಾನ್‌ ನಾಯಕ ಅವರು’ ಎಂದು ಹೇಳಿದರು.

‘ಅಂಬೇಡ್ಕರ್‌ ಪೂರ್ವಗ್ರಹ ಪೀಡಿತರಾಗಿರಲಿಲ್ಲ. ಒಡೆದು ಆಳುವ ನೀತಿಯನ್ನು ಅವರು ಎಂದೂ ಅನುಸರಿಸಲಿಲ್ಲ. ಸಮಾಜದ ಎಲ್ಲ ಸ್ತರಗಳ ಜನರ ಸುಧಾರಣೆಗೆ ಶ್ರಮಿಸಿದರು. ಕೊನೆ ಹಂತದಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ವೈಜ್ಞಾನಿಕ ಯೋಚನೆಗೆ ಬೌದ್ಧ ಧರ್ಮ ಪೂರಕವಾಗಿದೆ, ಹೀಗಾಗಿ ಆ ಧರ್ಮ ಸ್ವೀಕರಿಸಿದ್ದಾಗಿ ಅವರು ಹೇಳಿದ್ದಾರೆ’ ಎಂದರು.

ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ‘ಅಂಬೇಡ್ಕರ್‌ ಅವರನ್ನು ನಮ್ಮ ಜನರು ಅರ್ಥ ಮಾಡಿಕೊಂಡಿದ್ದಕ್ಕಿಂತ ಅನರ್ಥ ಮಾಡಿಕೊಂಡಿದ್ದೇ ಹೆಚ್ಚು. ಭಾರತದ ಇಂದಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ನೋಡಿದರೆ ಅಂಬೇಡ್ಕರ್‌ ಅವರನ್ನು ಅರ್ಥೈಸಿಕೊಳ್ಳದಿರುವುದರ ಪ್ರತಿಫಲ ಇದು ಎಂಬುದು ಗೊತ್ತಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತೀಯ ಮನಸ್ಥಿತಿ ಜಾತಿ ಆಧಾರಿತ ಮನೋಧೋರಣೆಯಾಗಿದೆ. ಮೀಸಲಾತಿ ಕೊಟ್ಟವರು, ದಲಿತ ನಾಯಕ ಎಂಬ ಸೀಮಿತ ಪರಿಧಿಯಲ್ಲಿ ಅಂಬೇಡ್ಕರ್‌ ಅವರನ್ನು ಬಿಂಬಿಸುವುದು ಎಷ್ಟು ಸರಿ? ಅವರು ಭಾರತದ ಅಖಂಡತೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್‌ ನಾಯಕ. ಅಂಬೇಡ್ಕರ್‌ ಅವರ ವಿದ್ವತ್ತಿನ ವ್ಯಕ್ತಿತ್ವವನ್ನು ನಮಗೆ ತೋರಿಸಿದವರು ವಿದೇಶಿಯರು. ವಿಶ್ವದ ಎಲ್ಲ ಜನರು ಅಂಬೇಡ್ಕರ್‌ ಜಯಂತ್ಯುತ್ಸವನ್ನು ಆಚರಿಸುತ್ತಾರೆ ಎಂದು ಹೇಳಿದರು.

ಜಾತಿ, ಧರ್ಮ ಆಧಾರಿವಾಗಿ ಒಡೆದಿದ್ದ ಭಾರತವನ್ನು ಒಗ್ಗೂಡಿಸಬೇಕು ಎಂಬುದು ಅವರ ಕನಸಾಗಿತ್ತು. ಎಲ್ಲ ರೀತಿಯ ಅವಮಾನಗಳನ್ನು ಅನುಭವಿಸಿ ಶಿಲ್ಪವಾಗಿ ರೂಪುಗೊಂಡರು. ಅವರ ವೈಶಾಲ್ಯವನ್ನು ನಾವು ಗುರುತಿಸಬೇಕು. ರೈತರು, ಮಹಿಳೆಯರು, ಕಾರ್ಮಿಕರು, ಶೋಷಿತರು, ಬಡವರು ಎಲ್ಲರ ಏಳಿಗೆಗೆ ಶ್ರಮಿಸಿದರು ಎಂದರು.

‘ಜಾತಿ, ಮತ, ಧರ್ಮ ಬಿಟ್ಟು ದೇಶದ ಅಭಿವೃದ್ಧಿಗೆ, ಸುರಕ್ಷತೆಗೆ ನಾವೆಲ್ಲರೂ ಪ್ರಾಶಸ್ತ್ಯ ನೀಡಬೇಕು, ಭಾರತೀಯರು ಎಂದು ನಾವೆಲ್ಲರೂ ಶಪಥ ಮಾಡಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು. ದೇಶದ ಸಮಗ್ರ ಅಭಿವೃದ್ಧಿಗೆ ಅಂಬೇಡ್ಕರ್‌ ಅವರ ಪುಸ್ತಕಗಳು ‘ಮಾಸ್ಟರ್‌ ಪ್ಲಾನ್‌’ ಇದ್ದಂತೆ. ಅವರ ಪುಸ್ತಕಗಳನ್ನು ಎಲ್ಲರೂ ಓದಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಅಶ್ವತಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT