ಮಂಗಳವಾರ, ಸೆಪ್ಟೆಂಬರ್ 17, 2019
21 °C
ಸಂತ್ರಸ್ತರ ಅಭಿಪ್ರಾಯ ಸಂಗ್ರಹಿಸಿ ನಂತರ ಸ್ಥಳಾಂತರ ನಿರ್ಧಾರ

ಪುನರ್ವಸತಿ; ಪಟ್ಟಿ ಸಿದ್ಧತೆ ಪ್ರಕ್ರಿಯೆ: ಡಿ.ಸಿ

Published:
Updated:
Prajavani

ಚಿಕ್ಕಮಗಳೂರು: ‘ಶಾಸಕರೊಂದಿಗೆ ಸ್ಥಳ ಪರಿಶೀಲನೆ ಮಾಡಿ, ನೆರೆ ಸಂತ್ರಸ್ತರ ಪುನರ್ವಸತಿಗೆ ಪಟ್ಟಿ ಸಿದ್ಧಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕಡತ ಸಿದ್ಧಪಡಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಐದಾರು ದಿನಗಳಿಂದ ಮಳೆಯಾಗುತ್ತಿದೆ. ಮಳೆ ಕಡಿಮೆಯಾದ ನಂತರ ಸ್ಥಳೀಯ ಶಾಸಕರೊಂದಿಗೆ ನೆರೆ ಪ್ರದೇಶಗಳ ಪರಿಶೀಲನೆ ಮಾಡಲಾಗುವುದು. ಸ್ಥಳಾಂತರ ಬಗ್ಗೆ ಸಂತ್ರಸ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು’ ಎಂದು ಹೇಳಿದರು.

‘ನೆರೆ ಸಂತ್ರಸ್ತರು ಮೂಡಿಗೆರೆ ತಾಲ್ಲೂಕಿನಲ್ಲಿಯೇ ಜಮೀನು, ನಿವೇಶನ ನೀಡುವಂತೆ ಮನವಿ ಮಾಡಿದ್ದಾರೆ. ಅದರಂತೆಯೇ ಪುನರ್ವಸತಿಗೆ ಮೂಡಿಗೆರೆಯಲ್ಲಿಯೇ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ. ಶೃಂಗೇರಿ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನು ಇಲ್ಲ. ಚಿಕ್ಕಮಗಳೂರು, ಮೂಡಿಗೆರೆ ತಾಲ್ಲೂಕುಗಳಲ್ಲಿ ಒತ್ತುವರಿ ಸಮಸ್ಯೆ ಇದೆ. ಕೆಲವು ಕಡೆ 20ರಿಂದ 30 ಎಕರೆ ಸರ್ಕಾರಿ ಜಾಗ ಇದೆ. ಆದರೆ, ಗ್ರಾಮಸ್ಥರು ಒಂದೇ ಕಡೆ ಪುನರ್ವಸತಿಗೆ ಒತ್ತಾಯಿಸುತ್ತಿದ್ದಾರೆ’ ಎಂದು ಹೇಳಿದರು.

‘ಮಧುಗುಂಡಿ, ಆಲೆಖಾನ್ ಹೊರಟ್ಟಿ ಗ್ರಾಮಸ್ಥರು ಹಾಗೂ ಮಲೆಮನೆಯ ಕೆಲವರು ಸ್ಥಳಾಂತರಕ್ಕೆ ಮನವಿ ಮಾಡಿದ್ದಾರೆ. ಆಲೆಖಾನ್ ಹೊರಟ್ಟಿಯಲ್ಲಿ ಮನೆಗಳು ಹಾಳಾಗಿಲ್ಲ. ಆದರೆ ಧರೆಕುಸಿತದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬಣಕಲ್‌ ಭಾಗದಲ್ಲಿ ಭೂಮಿ ಒಳಗಿಂದ ಶಬ್ಧ ಕೇಳಿದೆ ಎಂಬ ಬಗ್ಗೆ ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಇಲಾಖೆಯ ತಜ್ಞರ ತಂಡ ಸಮೀಕ್ಷೆ ನಡೆಸಿದೆ. ವರದಿ ನೀಡಲು ವಾರದ ಕಾಲಾವಕಾಶ ಕೇಳಿದ್ದಾರೆ. ತಜ್ಞರು ವರದಿ ಪರಿಶೀಲಿಸಿ ಆಲೆಖಾನ್ ಹೊರಟ್ಟಿಯ ಗ್ರಾಮಸ್ಥರ ಸ್ಥಳಾಂತರ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಮುಖ್ಯಮಂತ್ರಿಯವರು ಜಿಲ್ಲೆಯಲ್ಲಿ ನೆರೆ ಪರಿಶೀಲನೆ ಮಾಡಿದ್ದರು. ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕೆಲ ದಿನಗಳಿಂದ ಮೂಡಿಗೆರೆಯಲ್ಲಿ 5 ಸೆ.ಮೀ, ಬಣಕಲ್‌ನಲ್ಲಿ 100 ಸೆ.ಮೀ ಮಳೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಶಿರವಾಸೆಯ ಬಳಿ ಒಂದು ಕಡೆ ಭಾನುವಾರ ಮಣ್ಣುಕುಸಿದಿದೆ’ ಎಂದರು.

‘ನೆರೆಯಿಂದಾಗಿ ಗದ್ದೆಗಳಲ್ಲಿ ತುಂಬಿರುವ ಮರಳನ್ನು ಮಾಲೀಕರು ರಾಜಧನ ಪಾವತಿಸಿ ಬಳಸಲು ಅಥವಾ ಮಾರಾಟ ಮಾಡಲು ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಗದ್ದೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಫಲಾನುಭುವಿಗಳು ಎಸ್‌ಆರ್ ದರಕ್ಕೆ ಮರಳನ್ನು ಮಾರಾಟ ಮಾಡಬೇಕು’ ಎಂದರು.

ಜಿಲ್ಲೆಯ ನೆರೆ ಪ್ರದೇಶಗಳಲ್ಲಿನ ರಸ್ತೆ, ಸೇತುವೆ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ನೇರೆವಾಗಿ ₹ 30 ಕೋಟಿ ಅನುದಾನ ಬಿಡುಗಡೆಯಾಗಿದೆ. ಇಲಾಖೆಯವರು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಜಿಲ್ಲಾಡಳಿತದ ಪ್ರಕೃತಿ ವಿಕೋಪ ನಿಧಿಗೆ ಅನುದಾನ ಬಿಡುಗಡೆಯಾಗಿಲ್ಲ’ ಎಂದರು.

‘ಬಿದರಹಳ್ಳಿ ಕಾಳಜಿ ಕೇಂದ್ರದಲ್ಲಿ 120 ಸಂತ್ರಸ್ತರು ಇದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಜಾಗದ ಕೊರತೆಯಿಂದಾಗಿ ಭದ್ರಾ, ಕುದುರೆಮುಖ ಪುನರ್ವಸತಿ 20ವರ್ಷದಿಂದ ಬಾಕಿ ಉಳಿದಿವೆ’ ಎಂದರು.

Post Comments (+)