ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್ ಘಮಲಿಗೆ ಸೌಜನ್ಯ ಬೆಸುಗೆ ಮಧುಕರ ಶೆಟ್ಟಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಅಧಿಕಾರಿ
Last Updated 30 ಡಿಸೆಂಬರ್ 2018, 2:52 IST
ಅಕ್ಷರ ಗಾತ್ರ

2007ರಲ್ಲಿ ಮಧುಕರ ಶೆಟ್ಟಿ ಚಾಮರಾಜನಗರದ ಎಸ್‍ಟಿಎಫ್‍ನಿಂದ ಮಲೆನಾಡಿನ ನಕ್ಸಲ್ ವಿರೋಧಿ ಕಾರ್ಯಪಡೆ ಎಸ್‍ಪಿ ಆಗಿ ನೇಮಕಗೊಂಡಿದ್ದ ವೇಳೆ ಆಗಷ್ಟೇ ಬಲಿಗೆ ಸಮೀಪ ನಕ್ಸಲ್ ನಾಯಕ ಸಾಕೇತ್‍ರಾಜನ್‍ ಎನ್‍ಕೌಂಟರ್ ಆಗಿತ್ತು. ಮಲೆನಾಡಿನಲ್ಲಿ ನಕ್ಸಲ್ ಚಳವಳಿಯ ಘಮ ಯುವಜನರಲ್ಲಿ ರೋಮಾಂಚನ ಮೂಡಿಸಿತ್ತು. ಕಳಸ ಹೋಬಳಿಯಲ್ಲಿ ನಾಲ್ಕೈದು ಯುವಜನರು ನಕ್ಸಲ್ ಚಳವಳಿಯಲ್ಲಿ ಪ್ರತ್ಯಕ್ಷವಾಗಿ ಕಾಣಿಸಿಕೊಂಡಿದ್ದರೆ, ಅನೇಕ ಪ್ರಜ್ಞಾವಂತರು ಪರೋಕ್ಷವಾಗಿ ತೆರೆಮರೆಯಲ್ಲಿ ಚಳವಳಿಗೆ ಬೆಂಬಲವಾಗಿ ನಿಂತಿದ್ದರು.

ನಕ್ಸಲ್ ಚಳವಳಿ ದಮನ ಮಾಡಬೇಕು ಎಂಬ ಬಲಪಂಥೀಯ ಒತ್ತಾಯ ಕೇಳಿ ಬರುತ್ತಲೇ ಇತ್ತು. ಆದರೆ, ವಿಶೇಷ ಎಂದರೆ ಆನಂತರದ 8 ತಿಂಗಳು ಮಧುಕರ ಶೆಟ್ಟಿ ಎಎನ್‍ಎಫ್ ಎಸ್‍ಪಿಯಾಗಿದ್ದ ಅವಧಿಯಲ್ಲಿ ಯಾವ ಎನ್‍ಕೌಂಟರ್ ಕೂಡ ನಡೆಯಲಿಲ್ಲ. ಕಟ್ಟುಮಸ್ತಾಗಿದ್ದ ನೂರಕ್ಕೂ ಹೆಚ್ಚು ಎಎನ್‍ಎಫ್ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ಕುದುರೆಮುಖದಲ್ಲಿ ನೀಡುತ್ತಿದ್ದ ಅವರು, ಜನರ ಮನಪರಿವರ್ತನೆಯೇ ನಕ್ಸಲ್ ಚಳವಳಿ ಹತ್ತಿಕ್ಕಲು ಸುಲಭದ ಹಾದಿ ಎಂಬ
ಭಾವನೆ ಹೊಂದಿದ್ದರು. 'ನಕ್ಸಲರನ್ನು ಎನ್‍ಕೌಂಟರ್ ಮಾಡಿದರೆ ಮರದ ರೆಂಬೆಗಳನ್ನು ಕಡಿದಂತೆ. ಇನ್ನಷ್ಟು ರೆಂಬೆಗಳು ವೇಗವಾಗಿ ಹುಟ್ಟುತ್ತವೆ ಅಷ್ಟೇ' ಎಂದು ಮಧುಕರ ಶೆಟ್ಟಿ ಹೇಳುತ್ತಿದ್ದರು ಎಂದು ಅವರೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಎಎನ್‍ಎಫ್ ಸಿಬ್ಬಂದಿ ಹೇಳುತ್ತಾರೆ.

ಮಧುಕರ ಶೆಟ್ಟಿ ನಕ್ಸಲ್ ಚಳವಳಿಯನ್ನು ಬೇರು ಸಹಿತ ತೆಗೆಯುವ ಬಗ್ಗೆ ತಮ್ಮದೇ ಯೋಜನೆ ಹೊಂದಿದ್ದರು. ನಕ್ಸಲ್ ಪ್ರಭಾವಿತ ಪ್ರದೇಶದಲ್ಲಿ ರಸ್ತೆ, ನೀರು, ಶಿಕ್ಷಣದಂತಹ ಸೌಕರ್ಯ ಅಭಿವೃದ್ಧಿಪಡಿಸುವುದು. ಯುವ ಜನರಿಗೆ ಸೂಕ್ತ ಉದ್ಯೋಗ ಸಿಗುವಂತೆ ಮಾಡುವುದು, ನಕ್ಸಲ್ ಚಳವಳಿ ಕರಾಳತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಆ ಚಳವಳಿ ಆಕರ್ಷಣೆ ಕೊನೆಗಾಣಿಸುವುದು ಮಧುಕರ ಶೆಟ್ಟಿ ಅವರ ಯೋಜನೆಯಾಗಿತ್ತು. ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಅವರು ಯಶಸ್ವಿಯೂ ಆದರು.

ಆನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆದಾಗ ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಮಾಡಿದ ಖ್ಯಾತಿ ಮಧುಕರ ಶೆಟ್ಟಿ ಅವರದು. ಪೊಲೀಸ್ ಠಾಣೆಯಲ್ಲಿ ಆಡುತ್ತಿದ್ದ ದರ್ಪದ ಮಾತುಗಳು ಮರೆಯಾಗಿ ಇತರೆ ಸರ್ಕಾರಿ ಕಚೇರಿಯಂತೆಯೇ ಅದನ್ನು ಬದಲಿಸುವಲ್ಲಿ ಮಧುಕರ ಶೆಟ್ಟಿ ಯಶಸ್ವಿಯಾಗಿದ್ದರು.

ಪೊಲೀಸರು ಹಳ್ಳಿಗಳಿಗೆ ಆಗಾಗ್ಗೆ ಭೇಟಿ ನೀಡುತ್ತಾ ಅಲ್ಲಿನ ಸ್ಥಿತಿಗತಿ ಅಧ್ಯಯನ ಮಾಡಬೇಕು ಎಂಬ ಮಧುಕರ ಶೆಟ್ಟಿ ಅವರ ಹೊಸ ಕಾರ್ಯವಿಧಾನ ಈಗಲೂ ಚಾಲ್ತಿಯಲ್ಲಿದೆ. ಶತಮಾನಗಳಿಂದ ಸೌಲಭ್ಯ ಇಲ್ಲದೆ ಶೋಷಣೆಗೆ ಒಳಗಾಗಿದ್ದ ಜನರ ಬಳಿಗೆ ಜನಸಂಪರ್ಕ ಸಭೆ ಹೆಸರಲ್ಲಿ ಜಿಲ್ಲಾಡಳಿತವನ್ನೇ ಕರೆದೊಯ್ದ ಮಧುಕರ ಶೆಟ್ಟಿ ಜನರಲ್ಲಿ ಸರ್ಕಾರದ ಬಗ್ಗೆ ನಂಬಿಕೆ ಮೂಡುವಂತೆ ಮಾಡಿದರು.

ಬಲಿಗೆ ಮತ್ತು ಮುಜೇಕಾನಿನಂತಹ ದುರ್ಗಮ ಪ್ರದೇಶಕ್ಕೆ ಜಿಲ್ಲಾಧಿಕಾರಿ ನವೀನ್‍ ರಾಜ್‍ಸಿಂಗ್ ಅವರನ್ನು ಕರೆದುಕೊಂಡು ಜನರ ಮಧ್ಯೆ ಕೂರಿಸಿ ಜನರ ಸಮಸ್ಯೆ ಕೇಳಿದರು. ನಂತರ ಹರ್ಷಗುಪ್ತ ಜಿಲ್ಲಾಧಿಕಾರಿ ಆದಾಗ ದೊಡ್ಡ ಬೆಳೆಗಾರರ ಒತ್ತುವರಿ ಬಿಡಿಸಿ ಭೂರಹಿತರಿಗೆ ನೀಡುವ ಪ್ರಸ್ತಾಪವನ್ನೂ ಈ ಜೋಡಿ ಮಂಡಿಸಿದ್ದರು.

ಪರಿಣಾಮವಾಗಿ ಜನರ ನೈಜ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿದ ಈ ಜೋಡಿಗಳು ಬಲಿಗೆಯಿಂದ ಮೆಣಸಿಹಾಡ್ಯದಂತಹ ಅನೇಕ ರಸ್ತೆ ನಿರ್ಮಾಣಕ್ಕೆ ಮತ್ತು ಮೆಣಸಿನಹಾಡ್ಯ ಆಶ್ರಮ ಶಾಲೆ ಸ್ಥಾಪನೆಗೆ ಪರೋಕ್ಷವಾಗಿ ಕಾರಣರಾದರು. ಜಿಲ್ಲೆಯಲ್ಲಿ ಶ್ರೀಮಂತರ ದೌರ್ಜನ್ಯ ಕಡಿಮೆಯಾಯಿತು.

ಹರಿಜನ ಮತ್ತು ಗಿರಿಜನ ಕಾಲೋನಿಗಳಲ್ಲಿ ಮಧುಕರ ಶೆಟ್ಟಿ ಸತತವಾಗಿ ಗ್ರಾಮ ಸಂಪರ್ಕ ಸಭೆ ನಡೆಸಿ ಆ ವರ್ಗದ ಜನರಲ್ಲಿ ಸರ್ಕಾರಿ ವಿರೋಧಿ ಭಾವನೆ ತೊಲಗುವಂತೆ ಮಾಡಿದ್ದರು. ಇದರ ಪರಿಣಾಮವಾಗಿ ನೊಂದವರ ಪಾಲಿಗೆ ಮಧುಕರ ಶೆಟ್ಟಿ ನಾಯಕನಂತೆ ಕಂಡರೆ, ಕೆಲ ದೊಡ್ಡ ಬೆಳಗಾರರು ಮತ್ತುಶ್ರೀಮಂತರ ಪಾಲಿಗೆ ಖಳನಾಯಕನಂತೆ ಕಂಡರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಧುಕರ ಶೆಟ್ಟಿ ಅಧಿಕಾರದಲ್ಲಿದ್ದಷ್ಟು ದಿನವೂ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಹಬಂದಿಗೆ ಬಂದಿತ್ತು. ಗ್ರಾಮೀಣ
ಜನರ ಫೋನಿನಲ್ಲೂ ಮಧುಕರ ಶೆಟ್ಟಿ ದೂರವಾಣಿ ಸಂಖ್ಯೆ ಇರುತ್ತಿತ್ತು.

ಜನರ ಎಲ್ಲ ಸಮಸ್ಯೆಗೂ ಅವರು ಸ್ಪಂದಿಸುತ್ತಿದ್ದರು. ತಮ್ಮ ಇಲಾಖೆ ಅಲ್ಲದಿದ್ದರೂ ಇತರೆ ಇಲಾಖೆ ಜತೆಗೆ ವ್ಯವಹರಿಸಿ ಜನರ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತಿದ್ದರು ಎಂದು ಪೊಲೀಸ್ ಇಲಾಖೆ ಸಿಬ್ಬಂದಿ ನೆನಪಿಸಿಕೊಂಡರು.

ಅವರ ಪ್ರಯತ್ನದ ಫಲವಾಗಿಯೇ ಇಂದು ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಆಳವಾಗಿ ಹರಡುವಲ್ಲಿ ವಿಫಲತೆ ಕಂಡಿದೆ. ಇಂತಹ ಧೀಮಂತ ಅಧಿಕಾರಿ ನಿಧನರಾದ ಸುದ್ದಿಯಿಂದ ಹೋಬಳಿಯಲ್ಲೆಲ್ಲಾ ಆಘಾತ ಆಗಿದೆ. 'ಅಂತಹ ಅಧಿಕಾರಿ ಇನ್ನು ಹುಟ್ಟಿ ಬರಲ್ಲ ಬಿಡಿ' ಎಂಬ ಮಾತು ಜನರು ಆಡುತ್ತಿದ್ದಾರೆ.

ಈ ಅಧಿಕಾರಿಯಿಂದ ಪ್ರೇರಣೆಗೆ ಒಳಗಾಗಿ ಕಳಸದ ಪತ್ರಕರ್ತರೊಬ್ಬರು ತಮ್ಮ ಮಗನಿಗೆ ಮಧುಕರ ಎಂದೇ ಹೆಸರಿಡುವಷ್ಟರ ಮಟ್ಟಿಗೆ ಈ ಅಧಿಕಾರಿ ಈ ಪ್ರದೇಶದಲ್ಲಿ ಮನ್ನಣೆ ಛಾಪು ಮೂಡಿಸಿದ್ದರು.

‘ಯುವಕರಿಗೆ ಪ್ರೇರೇಪಣೆ’

ಕಳಸದಲ್ಲಿ ಉದ್ಯೋಗ ಮಾಹಿತಿ ಶಿಬಿರ ನಡೆಸಿ ವಿದ್ಯಾವಂತ ಯುವಜನರಿಗೆ ತಮ್ಮ ಸಂಪರ್ಕವಿದ್ದಲ್ಲೆಲ್ಲಾ ಕೆಲಸ ಕೊಡಿಸಿದರು. ನಕ್ಸಲ್ ಚಳವಳಿಯ ಸಂಪರ್ಕ ಇದ್ದವರನ್ನು ಖುದ್ದು ಮಾತನಾಡಿಸಿ ಚಳವಳಿಯ ಕರಾಳತೆಯ ಅರಿವು ಮೂಡಿಸಿ ಪ್ರಜಾಪ್ರಭುತ್ವದ ಮಾದರಿಗೆ ಮರಳಲು ಪ್ರೇರೇಪಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT