ಭಾನುವಾರ, ಸೆಪ್ಟೆಂಬರ್ 19, 2021
27 °C
ಗಣರಾಜ್ಯೋತ್ಸವದಲ್ಲಿ ಸಚಿವ ಅರವಿಂದ ಲಿಂಬಾವಳಿ

ತ್ರಿಕಾಲ ಜ್ಞಾನ ದೇಶದ ಸುಭಿಕ್ಷೆಗೆ ದಾರಿದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಗಣರಾಜ್ಯೋತ್ಸವ ಸಂಭ್ರಮದ ದಿನ ಮಾತ್ರವಲ್ಲ. ಪ್ರತಿ ಭಾರತೀಯನ ಪಾಲಿಗೆ ಆತ್ಮಾವಲೋಕನದ ದಿನ, ಸಂಕಲ್ಪದ ಸುದಿನವೂ ಆಗಬೇಕು’ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಆಶಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ದೇಶಕ್ಕೆ ಸಮರ್ಪಿಸಿದರು. ಭಾರತೀಯರೆಲ್ಲರನ್ನು ಒಗ್ಗೂಡಿಸಿ ಭಾಷಿಕವಾಗಿ, ಭಾವನಾತ್ಮಕವಾಗಿ, ಭೌಗೋಳಿಕವಾಗಿ ಭಾರತೀಯರೆಲ್ಲರೂ ಒಂದೇ ಎಂದು ವಿಶ್ವಕ್ಕೆ ಮನಗಾಣಿಸಿದ ಸುದಿನ’ ಎಂದು ಬಣ್ಣಿಸಿದರು.

‘ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ–ಸಂಕಟ, ಭವಿಷ್ಯತ್ತಿನ ಕನಸು ಈ ತ್ರಿಕಾಲದ ಅರಿವು, ಸ್ಪಷ್ಟತೆಗಳನ್ನು ಅರಿತುಕೊಳ್ಳಬೇಕು. ವರ್ತಮಾನದಲ್ಲಿ ಕುಳಿತು, ಗತಕಾಲದ ವಿದ್ಯಮಾನಗಳ ಬಗ್ಗೆ ಚರ್ಚೆ, ವಿಮರ್ಶೆ, ಟೀಕೆ ಮಾಡುವುದು ಸುಲಭ. ಆದರೆ ಆ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಸಂವಿಧಾನ ಎನ್ನುವ ಶಬ್ದಗಳಿಗಾಗಿ ನಮ್ಮ ಹಿರಿಯರು ಎಷ್ಟೆಲ್ಲ ದುಡಿದರು, ಹೋರಾಡಿದರು, ಏನೆಲ್ಲ ತ್ಯಾಗ ಮಾಡಿದರು, ಹೇಗೆಲ್ಲ ಶ್ರಮಿಸಿದರು ಎನ್ನುವುದನ್ನು ಅನುಭವಿಸಿ ಅರ್ಥೈಸಿಕೊಳ್ಳುವುದು ಕಷ್ಟ’ ಎಂದು ವಿಶ್ಲೇಷಿಸಿದರು.

‘ಮುಂದಿನ ಪೀಳಿಗೆಗೆ ನಾವು ಏನು ಬಿಟ್ಟು ಹೋಗಬೇಕು ಎನ್ನುವ ಆತ್ಮ ವಿವೇಚನೆ ಬೇಕು. ಈ ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸಿಗೆ, ದೇಶದ ಸುಭಿಕ್ಷೆಗೆ ದಾರಿ ದೀಪವಾಗುತ್ತದೆ’ ಎಂದು ವಿವರಿಸಿದರು.

‘ಇಂದು ದೇಶ ಒಡೆಯುತ್ತಿರುವ, ಸಾಮರಸ್ಯ ಕದಡುತ್ತಿರುವ, ಅತಿರೇಕದ ಭಾವನೆಗಳಿಂದ ಆಗುತ್ತಿರುವ ಸಂಚಿಗೆ ಬಲಿಯಾಗಲು ಅವಕಾಶ ನೀಡಬಾರದು. ನಾಡನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಭಯೋತ್ಪಾದನೆಯದ್ದು ಒಂದು ಮಗ್ಗಲಾದರೆ, ಕೋಮು ದಳ್ಳುರಿ, ಮತ-ಮತಗಳ ನಡುವಿನ ಜಗ್ಗಾಟದ್ದು ಮತ್ತೊಂದು ಮಗ್ಗಲು’ ಎಂದು ಹೇಳಿದರು.

‘ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಈ ಒಳ ಏಟುಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಹತ್ತಿಕ್ಕಬೇಕಾಗಿದೆ. ದೇಶವಿದ್ದರೆ ನಾವು ಸುರಕ್ಷಿತ, ನಾವೆಲ್ಲರೂ ನ್ಯಾಯಪರವಾಗಿದ್ದರೆ ಮಾತ್ರ ದೇಶವೂ ಸುಭಿಕ್ಷ ಎಂಬ ಸಾರ್ವಕಾಲಿಕ ಸತ್ಯವನ್ನು ಅರಿಯಬೇಕು’ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಗಮನ ನೀಡಲಾಗಿದೆ. ನೈರ್ಮಲ್ಯ ನಿರ್ವಹಣೆ ನಿಟ್ಟಿನಲ್ಲಿ ಜಿಲ್ಲೆಯ 226ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಕೋವಿಡ್‌ ಲಸಿಕೆ ಅಭಿಯಾನದ ಮೊದಲನೆ ಹಂತದಲ್ಲಿ ಆರೋಗ್ಯ ಇಲಾಖೆಯ ನೌಕರರಿಗೆ ಲಸಿಕೆ ನೀಡಲಾಗಿದೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆ ಹಾನಿಯಾಗಿವೆ. ಈವರೆಗೆ17,322 ರೈತರಿಗೆ ಒಟ್ಟು 25.89 ಕೋಟಿ ಪರಿಹಾರ ಖಾತೆಗೆ ಜಮೆಯಾಗಿದೆ

ಅಭಿನಂದನಾ ಪತ್ರ ವಿತರಣೆ: ಉತ್ತಮ ಕಾರ್ಯ ನಿರ್ವಹಣೆಗೆ ಅರಳಗುಪ್ಪೆ ಮಲ್ಲೆಗೌಡ ಜಿಲ್ಲಾ ಆಸ್ಪತ್ರೆ, ಆಶ್ರಯ ಖಾಸಗಿ ಆಸ್ಪತ್ರೆ, ಮೂಡಿಗೆರೆಯ ಎಂ.ಜಿ.ಎಂ ಸಾರ್ವಜನಿಕ ಆಸ್ಪತ್ರೆಗೆ ಅಭಿನಂದನಾ ಪತ್ರವನ್ನು ಸಚಿವರು ವಿತರಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ, ಶಾಸಕ ಸಿ.ಟಿ.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ, ಸದಸ್ಯೆ ಜಸಂತಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು