ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಾಥ ಮಕ್ಕಳಿಗೆ ಮೀಸಲಾತಿ; ಅಧ್ಯಯನ’: ಕೆ.ಜಯಪ್ರಕಾಶ ಹೆಗ್ಡೆ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ
Last Updated 12 ಮೇ 2022, 5:06 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಅನಾಥ ಮಕ್ಕಳಿಗೆ ಈವರೆಗೆ ಮೀಸಲಾತಿ ಕಲ್ಪಿಸಿಲ್ಲ. ಅನಾಥ ಮಕ್ಕಳ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಇಲ್ಲಿ ಬುಧವಾರ ತಿಳಿಸಿದರು.
‘ಅನಾಥ ಮಕ್ಕಳನ್ನು ಒಂದು ಪ್ರವರ್ಗಕ್ಕೆ ಸೇರಿಸಿದರೆ ಅನುಕೂಲವಾಗುತ್ತದೆ. ಮೀಸಲಾತಿ ಕಲ್ಪಿಸಿದರೆ ಶಿಕ್ಷಣ, ಉದ್ಯೋಗ ಎಲ್ಲದಕ್ಕೂ ಸಹಾಯವಾಗುತ್ತದೆ. ಅನಾಥರ ಪಟ್ಟಿ, ವಿವರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.‘ಕೆಲ ರಾಜ್ಯಗಳಲ್ಲಿ ಅನಾಥರಿಗೆ ಮೀಸಲಾತಿ ನೀಡಿದ್ದಾರೆ. ತೆಲಂಗಾಣ, ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಮೀಸಲಾತಿ ವಿವರ ಪಡೆದುಕೊಂಡಿದ್ದೇವೆ. ವಿವಿಧ ರಾಜ್ಯಗಳ ಮೀಸಲಾತಿ ಅಧ್ಯಯನ ಮಾಡುತ್ತೇವೆ’ ಎಂದರು.

‘ಜಿಲ್ಲೆಯಲ್ಲಿ ಈಗ ಮೂರು ದಿನ ಪ್ರವಾಸ ಮಾಡುತ್ತೇವೆ. ಜಾತಿ ಪ್ರಮಾಣ ಪತ್ರ ನೀಡುವ ನಿಟ್ಟಿನಲ್ಲಿನ ಗೊಂದಲಗಳ ನಿವಾರಣೆ, ಮೀಸಲಾತಿ ಪಟ್ಟಿಗೆ ಸೇರ್ಪಡೆ ಮನವಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡುತ್ತೇವೆ. ಸರ್ಕಾರಕ್ಕೆ ವರದಿ ನೀಡುತ್ತೇವೆ’ ಎಂದು ತಿಳಿಸಿದರು.


‘ಜಿಲ್ಲೆಯ ಎನ್‌.ಆರ್‌.ಪುರ ತಾಲ್ಲೂಕಿನ ಶೈವ ರೆಡ್ಡಿ ಜಾತಿಯವರು ಮನವಿ ನೀಡಿದ್ದಾರೆ. ಈ ಜಾತಿ ಮೀಸಲಾತಿ ಪಟ್ಟಿಯಲ್ಲಿ ಸೇರಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಅವಲೋಕಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ. ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ’ ಎಂದು ವಿವರಿಸಿದರು.

‘ತರೀಕೆರೆ, ಕಡೂರು, ಮೂಡಿಗೆರೆ ತಾಲ್ಲೂಕುಗಳಿಗೂ ಭೇಟಿ ನೀಡುತ್ತೇವೆ. ಮಡಿಒಕ್ಕಲಿಗ ಜಾತಿಯನ್ನು ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಮೂಡಿಗೆರೆಯವರು ಮನವಿ ಸಲ್ಲಿಸಿದ್ದಾರೆ. ದಾಖಲೆ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಅವಲೋಕಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ. ಪಂಚಮಸಾಲಿ ಲಿಂಗಾಯತರು ‘2ಎ’ಗೆ ಸೇರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಸ್ಥಿತಿಗತಿ ಅವಲೋಕಿಸುತ್ತೇವೆ’ ಎಂದರು.
‘ಕಲ್ಲು ವಡ್ಡರು, ಮಣ್ಣು ವಡ್ಡರು, ಬೋವಿ ಜಾತಿಯವರನ್ನು ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿಸಲಾಗಿದೆ. ತಂತ್ರಾಂಶದಲ್ಲೂ ಅಪ್‌ಲೋಡ್‌ ಆಗಿದೆ. ಇನ್ನು ಮುಂದೆ ಈ ಜಾತಿಯವರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ಬೆಸ್ತ ಬೋವಿಯವರು ಎಸ್‌ಸಿ ವ್ಯಾಪ್ತಿಗೆ ಒಳಪಡಲ್ಲ’ ಎಂದು ಉತ್ತರಿಸಿದರು.

‘ಕೆಲವು ಜಾತಿಯವರಿಗೆ ಮೀಸಲಾತಿ ಪಟ್ಟಿಯಲ್ಲಿದ್ದೇವೆ ಎಂಬುದು ಗೊತ್ತಿಲ್ಲ. ಕೆಲ ಜಾತಿಯವರಿಗೆ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂಬುದು ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅರ್ಜಿಗಳನ್ನು ಸಲ್ಲಿಸಿದರೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ. ಜನರು ನೇರವಾಗಿ ಅರ್ಜಿ ಸಲ್ಲಿಸಬಹುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಜಿಲ್ಲಾಧಿಕಾರಿ ಮೂಲಕವೂ ನಮಗೆ ತಲುಪಿಸಬಹುದು’ ಎಂದರು.

ಆಯೋಗದ ಸದಸ್ಯರಾದ ಬಿ.ಎಸ್‌. ರಾಜಶೇಖರ್‌, ಎಚ್‌.ಎಸ್‌. ಕಲ್ಯಾಣಕುಮಾರ್‌, ಕೆ.ಟಿ. ಸುವರ್ಣ, ಅರುಣ್ ಕುಮಾರ್‌, ಶಾರದಾ ನಾಯ್ಕ್‌, ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT