ಅಂಗಡಿ ಕೆರೆ ಬಳಿ ಭೂ ಕುಸಿತ

7
ಅಂಗಡಿ– ದೇವರುಂದ ಸಂಪರ್ಕ ಕಡಿತ: ಪ್ರಯಾಣಿಕರ ಪರದಾಟ

ಅಂಗಡಿ ಕೆರೆ ಬಳಿ ಭೂ ಕುಸಿತ

Published:
Updated:
Deccan Herald

ಮೂಡಿಗೆರೆ: ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಕೆರೆಯ ಬಳಿ ಭೂ ಕುಸಿತ ಉಂಟಾಗಿದ್ದು, ಅಂಗಡಿ – ದೇವರುಂದ ಸಂಪರ್ಕ ರಸ್ತೆಯು ಸಂಪೂರ್ಣ ಕಡಿತವಾಗಿದೆ.

ಒಂದೂವರೆ ತಿಂಗಳಿನಿಂದ ಸುರಿದ ಭಾರೀ ಮಳೆಗೆ ಕೆರೆಯ ಎರಡೂ ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಘನ ವಾಹನಗಳು ವಸಂತ ಪರಮೇಶ್ವರಿ ದೇವಾಲಯದ ಹಿಂಭಾಗದಲ್ಲಿರುವ ಕಿರಿದಾದ ಅಡ್ಡ ರಸ್ತೆಯಲ್ಲಿ ಸಾಗಿ, ಜೈನ ಬಸದಿಯನ್ನು ಸುತ್ತಿ ರೋಸ್‌ದಾಳ್‌ ಎಸ್ಟೇಟ್‌ ತಿರುವಿನ ರಸ್ತೆಗೆ ಬಂದು ದೇವರುಂದಕ್ಕೆ ತೆರಳುತ್ತಿದ್ದವು.

ಬುಧವಾರ ಮುಂಜಾನೆ ಕೆರೆಯ ಎರಡೂ ಬದಿಯಲ್ಲಿ ಬೃಹತ್‌ ಭೂ ಕುಸಿತವಾಗಿರುವುದಲ್ಲದೇ, ದೇವಾಲಯ ರಸ್ತೆಯಲ್ಲಿ ಗುಡ್ಡ ಕುಸಿದಿರುವುದರಿಂದ ಎರಡೂ ರಸ್ತೆಯಲ್ಲಿ ವಾಹನಗಳು ಚಲಿಸಲಾಗದೇ, ಅಂಗಡಿ – ದೇವರುಂದ ಸಂಪರ್ಕ ರಸ್ತೆ ಸಂಪೂರ್ಣ ಕಡಿತವಾಗಿದೆ.

ಈ ಮಾರ್ಗದಲ್ಲಿ ದೇವರುಂದ, ಕೂಡುರಸ್ತೆ, ಜಪಾವತಿ, ದೇವಾಲಯದಕೆರೆ, ಹೊಡಚಳ್ಳಿ ಮುಂತಾದ ಗ್ರಾಮಗಳಿದ್ದು, ಇದೇ ರಸ್ತೆಯು ದೇವರುಂದ ಮಾರ್ಗವಾಗಿ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಇದೀಗ ಕೆರೆಯ ಬದಿ ಕುಸಿದಿರುವುದರಿಂದ ಘನ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತವಾಗಿದೆ. ಖಾಸಗಿ ಲಘು ವಾಹನಗಳು ರೋಸ್‌ದಾಳ್‌ ಎಸ್ಟೇಟ್‌, ಹಂತೂರು, ಹಾಲೂರು, ಮಾವಿನಮರ ಗ್ರಾಮದ ಮಾರ್ಗವಾಗಿ ಪಟ್ಟಣಕ್ಕೆ ತಲುಪುತ್ತಿವೆ.

‘ಹಾಲೂರು ಮಾರ್ಗವು ಕಿರಿದಾಗಿದ್ದು, ಘನವಾಹನಗಳು ಸಂಚರಿಸಲು ಅಡ್ಡಿಯಾಗುತ್ತದೆ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಮಾರ್ಗದ ಕೆಲವು ಬಸ್‌ಗಳನ್ನು ಹಾಲೂರು ಮೂಲಕ ಓಡಿಸಲು ನಿರ್ಧರಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !