ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌ ಯೋಜನೆ: ರಸ್ತೆ ಅಗೆತ: ಸಂಚಾರ ದುಸ್ತರ, ಜನ ಹೈರಾಣ

ಪೈಪ್‌ಲೈನ್‌ ಕಾಮಗಾರಿ
Last Updated 24 ಜನವರಿ 2019, 6:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕುಡಿಯುವ ನೀರು ಪೈಪು ಅಳವಡಿಸಲು ನಗರದ ಬಸವನಹಳ್ಳಿ ಮುಖ್ಯರಸ್ತೆ ಮಧ್ಯಭಾಗದಲ್ಲಿ ಅಗೆದಿದ್ದು, ಈ ಮಾರ್ಗದಲ್ಲಿ ಸಂಚಾರ ಸಂಕಷ್ಟ ಹೇಳತೀರದಾಗಿದೆ. ದೂಳು, ಗುಂಡಿ, ಕಾಮಗಾರಿ ಅವಾಂತರಗಳು ನಿವಾಸಿಗಳನ್ನು ಹೈರಾಣ ಮಾಡಿವೆ.

ನಗರಕ್ಕೆ 24X7 ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಮೃತ್‌ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೇನ್‌ ಪೈಪ್‌ಲೈನ್‌ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಹಾದುಹೋಗಲಿದ್ದು, ಪೈಪುಗಳ ಅಳವಡಿಕೆ ಕಾಮಗಾರಿ ನಡೆಯತ್ತಿದೆ. ರಸ್ತೆ ಮಧ್ಯಭಾಗದಲ್ಲಿ ಜೆಸಿಬಿಯಿಂದ ಅಗೆದಿದ್ದು, ಕೆಲವೆಡೆ ಒಳಚರಂಡಿ ಸಂಪರ್ಕ ಪೈಪುಗಳು ಹಾನಿಗೊಂಡಿದೆ. ರಸ್ತೆಯುದ್ದಕ್ಕೂ ಮಣ್ಣಿನ ರಾಶಿಯಿಂದಾಗಿ, ದೂಳಿನ ಸಮಸ್ಯೆ ವಿಪರೀತವಾಗಿದೆ.

ಮನೆ ಮುಂದೆ ಮಣ್ಣಿನ ರಾಶಿಯಿಂದಾಗಿ ಕೆಲವರಿಗೆ ಮನೆಯೊಳಗೆ ನಿಲ್ಲಿಸಿದ್ದ ವಾಹನಗಳನ್ನು ಹೊರಕ್ಕೆ ತೆಗೆಯುವುದು ಕಷ್ಟವಾಗಿದೆ. ರಸ್ತೆಯುದ್ದಕ್ಕೂ ತಗ್ಗುದಿಬ್ಬಗಳಾಗಿ ಅಧ್ವಾನವಾಗಿದೆ. ಮಕ್ಕಳು, ವೃದ್ಧರು, ರೋಗಿಗಳು ಓಡಾಡಲು ಬಹಳ ಕಷ್ಟಪಡಬೇಕಾದ ಸ್ಥಿತಿ ಇದೆ.

‘ಜೆಸಿಬಿಯಲ್ಲಿ ಬಗೆದು ನಮ್ಮ ಮನೆಯ ಒಳಚರಂಡಿ ಸಂಪರ್ಕ ಪೈಪು ಹಾಳು ಮಾಡಿದ್ದಾರೆ. ಸ್ಟೋನ್‌ವೇರ್‌ ಪೈಪು ಅಳವಡಿಸಿದ್ದೆವು, ಈಗ ಅವು ಸಿಗುತ್ತಿಲ್ಲ. ಹೊಸದಾಗಿ ಪಿವಿಸಿ ಪೈಪು ಅಳವಡಿಸಬೇಕಿದೆ. ಅದಕ್ಕೆ ಸುಮಾರು 6ಸಾವಿರ ಖರ್ಚಾಗುತ್ತದೆ. ನಿವಾಸಿಗಳ ಗೋಳು ಕೇಳವವರಿಲ್ಲ’ ಎಂದು ನಿವಾಸಿ ಅನಂತರಾಮು ಅಳಲು ತೋಡಿಕೊಂಡರು.

‘ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ. ಕೆಲವು ಕಡೆ ನೀರಿನ ಸಂಪರ್ಕ ಪೈಪು ಒಡೆದಿವೆ’ ಎಂದು ದೂಷಿಸಿದರು.

ಮಧ್ಯೆ ಅಗೆದು ಮಣ್ಣು ರಾಶಿ ಹಾಕಿರುವುದರಿಂದ, ವಾಹನಗಳು ರಸ್ತೆಯ ಒಂದೇ ಬದಿಯಲ್ಲಿ ದ್ವಿಮುಖ ಸಂಚರಿಸಬೇಕಿದೆ. ವಾಹನ ಸಂಚಾರ ದೊಡ್ಡ ಹರಸಾಹಸವಾಗಿ ಪರಿಣಮಿಸಿದೆ. ಶಾಲಾವಾಹನಗಳು ಸದ್ಯಕ್ಕೆ ಮಾರ್ಗದಲ್ಲಿ ಸಂಚರಿಸುತ್ತಿಲ್ಲ, ಪೋಷಕರು ಮಕ್ಕಳನ್ನು ರಸ್ತೆ ತುದಿಗೆ ಕರೆದೊಯ್ದು ಹತ್ತಿಸಬೇಕಾಗಿದೆ. ಅಂಗಡಿಗಳು, ಮಳಿಗೆಗಳು ಹೋಟೆಲ್‌ಗಳು, ಮನೆಗಳು ದೂಳಿನಿಂದ ಆವೃತವಾಗಿವೆ. ಜನರು ನರಕಯಾತನೆ ಅನುಭವಿಸುವಂತಾಗಿದೆ.

‘ಕಾಮಗಾರಿ ಮಾಡುವ ಬಗ್ಗೆಯೂ ಮಾಹಿತಿ ನೀಡಿಲ್ಲ. ಯಾವಾಗ ಮುಗಿಯುತ್ತದೆ ಎಂಬುದನ್ನೂ ತಿಳಿಸುತ್ತಿಲ್ಲ. ನಗರದ ಬಹುತೇಕ ಎಲ್ಲ ರಸ್ತೆಗಳನ್ನು ಅಗೆದು ಹದಗೆಡಿಸಿದ್ದಾರೆ. ಈ ಹದಗೆಟ್ಟ ರಸ್ತೆಗಳಲ್ಲಿ ಕೆಲವರು ಬಿದ್ದು ಗಾಯಗೊಂಡಿದ್ದಾರೆ. ರಾತ್ರಿ ಹೊತ್ತು ಓಡಾಡುವುದಂತೂ ದೊಡ್ಡ ಸವಾಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಫಲಕಗಳನ್ನು ಹಾಕಿಲ್ಲ. ಮನಸೋಇಚ್ಛೆ ಮಾಡುತ್ತಿದ್ದಾರೆ’ ಎಂದು ನಿವಾಸಿ ವೇಣುಗೋಪಾಲ್ ದೂರಿದರು.

ನಗರದ ವಿವಿಧೆಡೆ ಪೈಪು ಅಳವಡಿಕೆಗೆ ಅಗೆಯಲಾಗಿದೆ. ಅಗೆಯುವಾಗ ಕೆಲವೆಡೆ ಹಾಲಿ ಪೈಪುಗಳು ಹಾನಿಗೊಳಿಸಲಾಗಿದೆ. ತಾತ್ಕಾಲಿಕವಾಗಿ ತೇಪೆ ಹಾಕಿ ಸರಿಪಡಿಸಿದ್ದಾರೆ. ಕೆಲವೆಡೆ ನೀರು ಸೋರಿಕೆಯಾಗುತ್ತಿದೆ.

‘ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದಿಂದ (ಹನುಮಂತಪ್ಪ ವೃತ್ತದ ಕಡೆಗೆ) ಸ್ವಲ್ಪ ದೂರದವರೆಗೆ ಮೇನ್‌ ಪೈಪ್‌ಲೈನ್‌ ಅಳವಡಿಸಲಾಗುತ್ತದೆ. ಇನ್ನು ನಾಲ್ಕೈದು ದಿನಗಳಲ್ಲಿ ಈ ಕಾಮಗಾರಿ ಮುಗಿಯಲಿದೆ’ ಎಂದು ವಾರ್ಡ್‌ ಸದಸ್ಯ ಟಿ.ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಂಡಿ ಮುಚ್ಚಿ, ಜಲ್ಲಿ ಹಾಕಿ ರಸ್ತೆ ಸರಿಪಡಿಸಲಾಗುವುದು. ತ್ವರಿತವಾಗಿ ಕಾಮಗಾರಿ ಮಾಡಿಸುತ್ತೇವೆ. ಇನ್ನು 15 ದಿನಗಳಲ್ಲಿ ಈ ಕೆಲಸ ಮುಗಿಯುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT