ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಾಜಿನ ಸಂಕಲ್ಪ(ನಿಯ್ಯತ್) ಮತ್ತು ಹಂತ(ರಕಾತ್)

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಎಲ್ಲ ಮುಸ್ಲಿಮರಂತೆ ಸೂಫಿ ಅಧ್ಯಾತ್ಮದ ಸಾಧಕ ಕೂಡ ನಮಾಜಿನಸಂಕಲ್ಪ(ನಿಯ್ಯತ್) ಮಾಡುವಾಗ ರಕಾತ್ತಿನ(ಹಂತದ) ಸಂಖ್ಯೆ, ಪ್ರಾರ್ಥನೆಯ ದಿಕ್ಕು ‘ಕಾಬ’ದತ್ತ ಮುಖಮಾಡಿಕೊಂಡು, ದೇವರಿಗಾಗಿ ಎಂದುಕೊಳ್ಳುವ ಮತ್ತಿತರ ವಿಧಿಗಳನ್ನು ದೃಢಮಾಡಿಕೊಂಡು ನಮಾಜಿಗೆ ನಿಲ್ಲುವ ಸಂಕಲ್ಪ ಮಾಡಿಕೊಳ್ಳುವ ನಿಯಮವನ್ನು ಪಾಲಿಸಬೇಕಾಗುತ್ತದೆ. ಸೂಫಿ ಅಧ್ಯಾತ್ಮಿ ಈ ಸಂಕಲ್ಪದಲ್ಲಿ ಸೃಷ್ಟಿಯ ಎಲ್ಲ ವಸ್ತುಗಳನ್ನು ಮತ್ತು ಮನಸ್ಸಿನಲ್ಲಿ ಏಳುವ ಎಲ್ಲ ವಿಚಾರಗಳನ್ನು ಮರೆಯುವ ಮೂಲಕ ಕೇವಲ ದೇವರ ಸಾನ್ನಿಧ್ಯವನ್ನು ಪಡೆಯುವ ಮಹತ್ವಾಕಾಂಕ್ಷಿಯಾಗಿರುತ್ತಾನೆ. ದೇವರ ಪ್ರಾರ್ಥನೆಯ ಮೊದಲಿನಿಂದ ಕೊನೆಯ ತನಕವೂ ತಾನು ದೇವರೆದುರು ಅಂತಿಮ ಪ್ರಳಯಕಾಲದ ಸರ್ವನಾಶದ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂಬ ಭಾವವಿರುತ್ತದೆ. ಹಜ್ರತ್ ಅಲ್ ಹರೀತ್ ಅಲ್ ಮುಹಾಸಿಬಿ ತನ್ನ ಗ್ರಂಥ ‘ಕಿತಾಬ್ ಅರ್ರಿದಿಯಾ ಲಿ ಹಕ್ ಅಲ್ಲಾಹ’ದಲ್ಲಿ ಈ ಭಾವವನ್ನು ಹೀಗೆ ವಿವರಿಸುತ್ತಾರೆ:

‘ನಮಾಜಿನಲ್ಲಿ ನಿರತನಾದ ಅಧ್ಯಾತ್ಮಿಯ ಹೃದಯವು ದೇವರ ಅಧ್ಯಾತ್ಮ ರಹಸ್ಯವನ್ನು ಸ್ವೀಕರಿಸಲು ತಯಾರಾಗಿ ನಿಂತವನಾಗಿರುವ ಉದ್ದೇಶದ ಸಂಪೂರ್ಣ ಹತೋಟಿಯಲ್ಲಿರುತ್ತದೆ. ಜೊತೆಗೆ ಅವನ ಸಂಪೂರ್ಣ ಪ್ರೇಮವನ್ನು ಸ್ವೀಕರಿಸಲು ತಯಾರಾಗಿರುತ್ತದೆ. ಅವನು ಅಧ್ಯಾತ್ಮಿಯ ಹೃದಯದಲ್ಲಿ ತನ್ನೊಂದಿಗೆ ಬಯಸುವ ಭಾವೈಕ್ಯವನ್ನು ಕರುಣಿಸುತ್ತಾನೆ. ತನ್ನ ನಮಾಜನ್ನು ಕೊನೆಗೊಳಿಸುವ ತನಕವೂ ಅಧ್ಯಾತ್ಮಿ ದೇವರ ಸಾಂಗತ್ಯವನ್ನು ಅನುಭ
ವಿಸುತ್ತಿರುತ್ತಾನೆ. ಇಂತಹ ಸಂದರ್ಭದಲ್ಲಿ ಅಧ್ಯಾತ್ಮಿಯ ಪರಿಚಿತ ಸ್ನೇಹಿತರು, ಅನುಯಾಯಿಗಳನ್ನು ಗುರುತು ಹಿಡಿಯಲಾರದಷ್ಟು ಅಪರಿಚಿತ
ನಾಗಿಬಿಡುತ್ತಾನೆ. ಅವನ ಭವ್ಯ ಸಮ್ಮುಖದಲ್ಲಿ ಮೂಡಿದ ಭಯಭಕ್ತಿಯಿಂದ ಅಧ್ಯಾತ್ಮಿಯ ಮುಖದಲ್ಲಾದ ಬದಲಾವಣೆಯಿಂದಾಗಿ ಹೀಗಾಗುತ್ತದೆ. ಇದು ಹೇಗಿರುತ್ತದೆಂದರೆ ಸರ್ವಶ್ರೇಷ್ಠ ರಾಜನೊಬ್ಬನ ವ್ಯೆಭವಪೂರ್ಣ ಸಮ್ಮುಖದಲ್ಲಿ ಸಾಮಾನ್ಯನೊಬ್ಬ ಅಸ್ಥಾನವನ್ನು ಪ್ರವೇಶಿಸಿದಾಗ ಹಿಂದಿನ ತನ್ನ ಗುಣ ನಡತೆಯನ್ನು ಸಂಪೂರ್ಣವಾಗಿ ಮರೆತು ಭಯಭಕ್ತಿಯಿಂದ ನಿಂತಂತೆ! ತಾನೇನಾಗಿದ್ದೇನೋ ಅದಾಗಿರದೆ, ತನ್ನಂತೆ ಇತರರು ಯಾರೂ ಇಲ್ಲವಾಗಿ, ಸ್ಥಿತಪ್ರಜ್ಞನಾಗಿ!’

ಹಜ್ರತ್ ಮುಹಾಸಬಿಯವರ ಸಮಕಾಲೀನ ಹಜ್ರತ್ ಅಲ್ ಖರ್ರಾಜ್ ತನ್ನ ಗ್ರಂಥದಲ್ಲಿ ಸಾಂಪ್ರದಾಯಿಕ ನಮಾಜಿನ ಸದಾಚಾರವನ್ನು ವಿವರಿಸುತ್ತಾರೆ:
‘ಪ್ರಳಯಕಾಲದ ಅಂತಿಮ ದಿನದ ವಿಚಾರಣೆಗಾಗಿ ದೇವರ ಮುಂದೆ ನಿಂತಂತೆ ಅಧ್ಯಾತ್ಮ ಸಾಧಕನಿಗೆ ನಮಾಜಿಗೆ ನಿಂತಾಗ ಅನಿಸಬೇಕು. ಯಾವ ಮಧ್ಯವರ್ತಿಯೂ ಇಲ್ಲದೆ ನೇರವಾಗಿ ಅವನ ಮುಂದೆ ನಿಂತಂತೆ ಅನಿಸಬೇಕು. ಆತ್ಮೀಯವಾಗಿ ಅವನು ಸ್ವಾಗತಿಸಿದಾಗ, ವೈಯಕ್ತಿಕ ಮಾತುಗಳನ್ನು ಅವನ ಮುಂದಿಡಲು ಅಧ್ಯಾತ್ಮಿ ಬಯಸುತ್ತಾನೆ. ಯಾಕೆಂದರೆ ಯಾರ ಮುಂದೆ ತಾನು ನಿಂತಿದ್ದೇನೆಂದು ಮತ್ತು ಅವನು ರಾಜರಾಜರ ಮಹಾರಾಜನೆಂಬುದು ಅಧ್ಯಾತ್ಮಿಗೆ ಗೊತ್ತಿರುತ್ತದೆ. ತನ್ನ ಕೈಯೆತ್ತಿ ದೇವರು ಪರಮ ಶ್ರೇಷ್ಠನು(ಅಲ್ಲಾಹು ಅಕ್ಬರ್) ಎನ್ನುವಾಗ ಹೃದಯದಲ್ಲಿ ಅವನ ವೈಭವಗಳ ವಿಚಾರಗಳನ್ನು ಬಿಟ್ಟು ಏನೊಂದೂ ಇರುವುದಿಲ್ಲ, ತಲೆಯಲ್ಲಿ ಕೂಡ ಅವನ ವೈಭವಘೋಷಗಳೇ ತುಂಬಿರುತ್ತದೆ. ಈ ಸಂದರ್ಭದಲ್ಲಿ ಅಧ್ಯಾತ್ಮಿ ತಾನಿರುವ ಜಗತ್ತನ್ನೇ ಮರೆತುಬಿಟ್ಟು ಪಾರಮಾರ್ಥಿಕ ಜಗವೇ ತುಂಬಿರುತ್ತದೆ. ಇದಲ್ಲದೆ ಅವನ ಪರಮಶ್ರೇಷ್ಠತೆಯ ಮುಂದೆ ತಾನು ತೃಣಸಮಾನನು ಎಂಬ ದೈನ್ಯತಾ ಭಾವ ಕೂಡ ತುಂಬಿರುತ್ತದೆ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT