ಗುರುವಾರ , ಜುಲೈ 29, 2021
25 °C

ಮುಜೆಕಾನು: ಸ್ಥಳೀಯರಿಂದಲೇ ರಸ್ತೆ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ಇಲ್ಲಿಗೆ ಸಮೀಪದ ಮುಜೇಕಾನು ಗ್ರಾಮಕ್ಕೆ ತೆರಳುವ ರಸ್ತೆಯನ್ನು ಸ್ಥಳೀಯರೇ ಇತ್ತೀಚೆಗೆ ದುರಸ್ತಿ ಮಾಡಿದ್ದಾರೆ.

ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮುಜೇಕಾನು ಗ್ರಾಮದಲ್ಲಿ 15 ಮನೆಗಳು ಇವೆ. ಈ ಗ್ರಾಮ ತಲುಪಲು ಕಳಸದಿಂದ ಹಳುವಳ್ಳಿ ಮೂಲಕ ಹೊರನಾಡು ಕಡೆಗೆ 3 ಕಿ.ಮೀ. ಡಾಂಬರು ರಸ್ತೆ ಇದೆ. ಆದರೆ, ಕೊನೆಯ 3 ಕಿ.ಮೀ ರಸ್ತೆಯೇ ಈ ಗ್ರಾಮದ ಜನರ ದೊಡ್ಡ ಸಮಸ್ಯೆ.

ಪ್ರತಿ ವರ್ಷವೂ ಮಳೆಗಾಲದ ಆರಂಭದಲ್ಲಿ ಗ್ರಾಮದ ಎಲ್ಲ ಮನೆಯವರೂ ಸೇರಿ ಈ ರಸ್ತೆಗೆ ಮಣ್ಣು ಹಾಕಿ ಚರಂಡಿ ಬಿಡಿಸುತ್ತಾರೆ. ಆದರೆ, ಮಳೆಗಾಲದಲ್ಲಿ ಈ ರಸ್ತೆ ಗುಂಡಿಗಳಿಂದ ತುಂಬಿಕೊಳ್ಳುತ್ತದೆ. ಮತ್ತೆ ಮಾರನೆ ವರ್ಷ ರಸ್ತೆ ದುರಸ್ತಿಯ ಕಾರ್ಯಕ್ರಮ ಏರ್ಪಾಡಾಗುತ್ತದೆ.

‘ಗ್ರಾಮ ಪಂಚಾಯಿತಿಗೆ ರಸ್ತೆ ದುರಸ್ತಿಗೆ ಅನುದಾನ ಕೊಡುವಂತೆ ಕೇಳಿದೆವು. ಆದರೆ, ಈಗ ಅವಧಿ ಮುಗಿದಿದೆ ಎಂಬ ಉತ್ತರ ಬಂತು. ಆದ್ದರಿಂದ ನಾವೆಲ್ಲರೂ ಕೈ ಜೋಡಿಸಿ ಕೆಲಸ ಮಾಡಿದೆವು’ ಎಂದು ಯುವಕ ನಾಗೇಂದ್ರ ಹೇಳುತ್ತಾರೆ.

‘ಕಳೆದ ವರ್ಷವೇ ನಮ್ಮ ಊರಿನ ರಸ್ತೆಗೆ ₹ 50 ಲಕ್ಷ ಮಂಜೂರು ಆಯಿತು ಎಂಬ ಮಾಹಿತಿ ಇತ್ತು. ಆದರೆ ಈವರೆಗೆ ಒಂದು ರೂಪಾಯಿಯೂ ರಸ್ತೆಗೆ ಬರಲೇ ಇಲ್ಲ. ನಮ್ಮೂರಿನ ರಸ್ತೆ ಹದಗೆಟಿದ್ದಕ್ಕೆ ಆಟೊಗಳು ಬರಂಗಿಲ್ಲ, ಜೀಪ್ ಬಂದ್ರೆ ₹ 1000 ಕೊಡಬೇಕು’ ಎಂದು ಗ್ರಾಮದ ಯುವಕ ಕೃಷ್ಣ ಬೇಸರ ವ್ಯಕ್ತಪಡಿಸುತ್ತಾರೆ.

ರಾಜಕೀಯ ಪಕ್ಷಗಳಲ್ಲಿ ಈ ಗ್ರಾಮದ ಯಾವ ವ್ಯಕ್ತಿಯೂ ಸಕ್ರಿಯವಾಗಿಲ್ಲ. ಅದೇ ಕಾರಣಕ್ಕೆ ನಮ್ಮ ಊರಿಗೆ ರಸ್ತೆ ಆಗುತ್ತಿಲ್ಲ ಎಂಬ ನಂಬಿಕೆ ಹಳ್ಳಿಗರಲ್ಲಿ ಇದೆ. ಮನೆಗಳಿಗೆ ದಿನಸಿ, ವಿದ್ಯಾರ್ಥಿಗಳಿಗೆ ಶಾಲೆ, ರೋಗಿಗಳಿಗೆ ಆಸ್ಪತ್ರೆ ಕಾರಣಕ್ಕೆ ಮುಜೇಕಾನು ಜನರಿಗೆ ಕಳಸದ ಭೇಟಿ ಅನಿವಾರ್ಯ. ಆದರೆ, ರಸ್ತೆ ಅನುದಾನ ಮತ್ತು ದುರಸ್ತಿ ಬಗೆಗಿನ ಲೆಕ್ಕಾಚಾರದಲ್ಲಿ ಮಾತ್ರ ಅವರು ಅತ್ಯಂತ ಅಮಾಯಕರಾಗಿ ಕಾಣುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು