ಕೊಳೆತು ನಾರುತ್ತಿರುವ ಸಂತೆ ತ್ಯಾಜ್ಯ

7
ಪಟ್ಟಣದಲ್ಲಿನ ಸಂತೆ ಮೈದಾನದ ದುರವಸ್ಥೆ

ಕೊಳೆತು ನಾರುತ್ತಿರುವ ಸಂತೆ ತ್ಯಾಜ್ಯ

Published:
Updated:
Deccan Herald

ಮೂಡಿಗೆರೆ: ಪಟ್ಟಣದ ಸಂತೆ ಮೈದಾನದಲ್ಲಿ ಸಂತೆ ನಡೆದು ನಾಲ್ಕು ದಿನ ಕಳೆದರೂ ಅಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಇರುವುದರಿಂದ ಕಸವೆಲ್ಲವೂ ಕರಗಿ ನಾರುತ್ತಿದ್ದು, ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‌ಬಾಪು ನಗರದಲ್ಲಿರುವ ಸಂತೆ ಮೈದಾನದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ಸಂತೆ ದಿನದಂದು ಸುಮಾರು 300ಕ್ಕೂ ಅಧಿಕ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಲಾಗುತ್ತದೆ. ಆದರೆ, ಸಂತೆ ನಡೆದ ಬಳಿಕ ಆ ಸ್ಥಳವನ್ನು ಸ್ವಚ್ಛಗೊಳಿಸದ ಕಾರಣ ಸಂತೆಯಲ್ಲಿ ಉಳಿಯುವ ಮೀನು, ಮಾಂಸ, ಹಣ್ಣು, ತರಕಾರಿ ಮುಂತಾದವುಗಳ ತ್ಯಾಜ್ಯಗಳೆಲ್ಲವೂ ಕರಗಿ ದುರ್ವಾಸನೆ ಬೀರುತ್ತಿದ್ದು, ಸಂತೆ ಮೈದಾನದ ಅಕ್ಕಪಕ್ಕದಲ್ಲಿರುವ ಜನರೆಲ್ಲರೂ ಮೂಗು ಮುಚ್ಚಿಕೊಂಡು ಬದುಕುವಂತಾಗಿದೆ.

ಸಂತೆ ಮೈದಾನದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹತ್ತು ಸಂತೆಕಟ್ಟೆಗಳನ್ನು ನಿರ್ಮಿಸಿದ್ದು, ಆ ಜಾಗದಲ್ಲಿ ಈಗ ಗಿಡ–ಗಂಟಿಗಳು ಬೆಳೆದು ನಿಂತಿವೆ. ವ್ಯಾಪಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ಸಂತೆ ಶೆಡ್‌ಗಳಲ್ಲಿ ಮಣ್ಣಿನ ಕೆಲಸ ಮಾಡುವವರು, ಭಿಕ್ಷುಕರು, ನಿರ್ಗತಿಕರು ವಾಸಮಾಡತೊಡಗಿದ್ದು, ಇವರೆಲ್ಲರೂ ಗಿಡ ಬೆಳೆದು ನಿಂತಿರುವ ಸಂತೆಕಟ್ಟೆಗಳಲ್ಲಿ ಬಯಲು ಮಲ ವಿಸರ್ಜನೆ ಮಾಡುತ್ತಿದ್ದು, ಇದರಿಂದಾಗಿ ಸಂತೆ ಮೈದಾನದ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ರೋಗ ಹರಡುವ ಭೀತಿ ಉಂಟಾಗಿದೆ. ಮಲ ವಿಸರ್ಜನೆ ಮಾಡಿ ನಾರುತ್ತಿರುವ ಪ್ರದೇಶದಲ್ಲಿಯೇ ಪ್ರತಿ ಶುಕ್ರವಾರದಂದು ತರಕಾರಿ, ಹಣ್ಣು ಮುಂತಾದ ವಸ್ತುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಇದೆ.

ಸಂತೆಯಲ್ಲಿ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೇ ಸಾಗಿದ್ದು, ಅಳಿದುಳಿದ ಪ್ಲಾಸ್ಟಿಕ್‌ ತ್ಯಾಜ್ಯವೆಲ್ಲವೂ ಸಂತೆಮೈದಾನದಲ್ಲಿರುವ ಒಳಚರಂಡಿಗಳಲ್ಲಿ ಸಿಕ್ಕಿ ಹಾಕಿಕೊಂಡು ಒಳಚರಂಡಿಯೆಲ್ಲವೂ ಕಟ್ಟಿಕೊಂಡಿವೆ. ಇದರಿಂದಾಗಿ ಮಳೆಗಾಲದಲ್ಲಿ ಮಳೆ ನೀರೆಲ್ಲವೂ ರಸ್ತೆ ಮೇಲೆ ಹರಿಯತೊಡಗಿದೆ. ಸಂತೆಯಿಂದ ಪಟ್ಟಣ ಪಂಚಾಯಿತಿಗೆ ಅಪಾರ ಆದಾಯವಿದ್ದರೂ ವರ್ತಕರಿಗೆ ಮಾತ್ರ ಶೌಚಾಲಯ, ಕುಡಿಯುವ ನೀರು ಮುಂತಾದ ಕನಿಷ್ಠ ಸವಲತ್ತುಗಳನ್ನು ಕಲ್ಪಿಸದೇ ವಂಚಿಸಲಾಗುತ್ತಿದೆ ಎಂಬುದು ವರ್ತಕರ ಆರೋಪವಾಗಿದೆ.

‘ಸಂತೆಯಲ್ಲಿ ಶೌಚಾಲಯ ಇಲ್ಲದಿರುವುದು ಮಹಿಳಾ ವರ್ತಕರಿಗೆ ಬಹಳ ತೊಂದರೆಯಾಗಿದೆ. 80ಕ್ಕೂ ಅಧಿಕ ಮಹಿಳಾ ವರ್ತಕರಿದ್ದು, ಬೆಳಿಗ್ಗೆ ಸಂತೆಗೆ ಬರುವ ಮಹಿಳಾ ವರ್ತಕರು ರಾತ್ರಿ ಮನೆಗೆ ತೆರಳುವವರೆಗೂ ಪರಿಸರ ಕರೆಗಳಿಗೆ ತೆರಳದಂತೆ ತಡೆದುಕೊಳ್ಳುವ ಹೀನಾಯ ಸ್ಥಿತಿಯನ್ನು ಅನುಭವಿಸುವಂತಾಗಿದೆ. ಕೆಲವರಂತೂ ಅನಿವಾರ್ಯವಾಗಿ ಪೊದೆಗಳ ಮರೆಯಲ್ಲಿ ಜಲಬಾಧೆಯನ್ನು ನಿವಾರಿಸಿಕೊಳ್ಳುವಂತಾಗಿದೆ’ ಎಂದು 20 ವರ್ಷಗಳಿಂದ ವ್ಯಾಪಾರ ಮಾಡುವ ಕಮಲಮ್ಮ ಅವರು ಆಡಿದ ಮಾತುಗಳು ಸಂತೆ ಮೈದಾನದ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದ್ದವು.

ದೇಶದಲ್ಲಿ ಸ್ವಚ್ಛ ಭಾರತ ಯೋಜನೆ ಬಂದು ನಾಲ್ಕು ವರ್ಷ ಕಳೆಯುತ್ತಾ ಬಂದರೂ ಪಟ್ಟಣದ ಸಂತೆ ಮೈದಾನದ ಚಿತ್ರಣ ಬದಲಾಗದಿರುವುದು ನಗರಾಭಿವೃದ್ಧಿ ಇಲಾಖೆಗೆ ಸ್ವಚ್ಛ ಭಾರತ ಯೋಜನೆಯಲ್ಲಿರುವ ನಿರಾಸಕ್ತಿ ತೋರಿಸುತ್ತದೆ. ಕನಿಷ್ಠ ವಾರಕ್ಕೊಮ್ಮೆಯಾದರೂ ಸಂತೆಕಟ್ಟೆಗಳನ್ನು ಸ್ವಚ್ಛಗೊಳಿಸಿ ಸ್ಥಳೀಯರಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

ಸಂತೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಮಹಿಳಾ ವರ್ತಕರಿಗೆ ನರಕವಾಗಿ ಪರಿಣಮಿಸಿದೆ
- ಕಮಲಮ್ಮ, ಮಹಿಳಾ ವರ್ತಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !