ಗುರುವಾರ , ಸೆಪ್ಟೆಂಬರ್ 19, 2019
22 °C
ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿ; ದುಬಾರಿ ದಂಡ

ವಿವಿಧ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಕೆ ಹೆಚ್ಚಳ

Published:
Updated:
Prajavani

ಚಿಕ್ಕಮಗಳೂರು: ಮೋಟಾರು ವಾಹನ ತಿದ್ದುಪಡಿ ಕಾಯ್ದೆ–2019 ಜಾರಿಗೊಳಿಸಿದಾಗಿನಿಂದ ಚಾಲನಾ ಪರವಾನಗಿ (ಡಿಎಲ್‌) ಪಡೆಯಲು, ವಾಹನ ನೋಂದಣಿ (ಆರ್‌ಸಿ), ನವೀಕರಣ (ಆರ್‌ಆರ್‌ಸಿ), ಕ್ಷಮತೆ ಪತ್ರ (ಎಫ್‌ಸಿ) ಮೊದಲಾದವಕ್ಕಾಗಿ ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಜನರ ದಾಂಗುಡಿ ಹೆಚ್ಚಾಗಿದೆ.

ಈವರೆಗೆ (ನಾಲ್ಕು ರಜಾದಿನ ಹೊರತುಪಡಿಸಿ) ನಗರದ ಆರ್‌ಟಿಒ ಕಚೇರಿಯಲ್ಲಿ ಕಲಿಕಾ ಪರವಾನಗಿ (ಎಲ್‌ಎಲ್‌)–680, ಡಿಎಲ್‌ ನವೀಕರಣ–243, ಎಡಿಎಲ್‌–88, ವಾಹನ ನೋಂದಣಿ ನವೀಕರಣ ಪತ್ರ (ಆರ್‌ಆರ್‌ಸಿ)– 300, ಕ್ಷಮತೆ ಪತ್ರ– 258 ಪಡೆದಿದ್ದಾರೆ. ನೋಂದಣಿ, ಭಾವಚಿತ್ರ ತೆಗೆಸಿಕೊಳ್ಳುವ ವಿಭಾಗ, ಶುಲ್ಕ ಪಾವತಿ ಸಹಿತ ಎಲ್ಲ ಕೌಂಟರ್‌ಗಳಲ್ಲೂ ದಟ್ಟಣೆ ಹೆಚ್ಚಾಗಿದೆ.

‘ಬೆಳಿಗ್ಗೆಯಿಂದ ಸಂಜೆವರೆಗೂ ಜನ ದಾಂಗುಡಿ ಇಡುತ್ತಿದ್ದಾರೆ. ಬಹಳಷ್ಟು ಮಂದಿಗೆ ತಾಳ್ಮೆ ಇರುವುದಿಲ್ಲ. ತಕ್ಷಣಕ್ಕೆ ಕೆಲಸ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ’ ಎಂದು ಆರ್‌ಟಿಒ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿಗೆ ತಿಳಿಸಿದರು.

‘ತಿದ್ದುಪಡಿ ಕಾಯ್ದೆ ಅನ್ವಯ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡ ದುಬಾರಿಯಾಗಿದೆ. ಹೆಲ್ಮೆಟ್‌ ಧರಿಸದಿದ್ದಕ್ಕೆ ನಮ್ಮ ಪಕ್ಕದ ಮನೆಯವರಿಗೆ ₹ 1,000 ದಂಡ ವಿಧಿಸಿದ್ದಾರೆ. ನನ್ನ ಡಿಎಲ್‌ ವಾಯಿದೆ ಮುಗಿದಿತ್ತು. ನವೀಕರಣ ಮಾಡಿಸಲು ಬಂದಿದ್ದೇನೆ’ ಎಂದು ಬಸವನಹಳ್ಳಿಯ ಸ್ಮಿತಾ ಹೇಳಿದರು.

‘ವಾಯಿದೆ ಮೀರಿದ ನಂತರ ಡಿಎಲ್‌ ನವೀಕರಣ, ಕ್ಷಮತಾ ಪತ್ರ ಪಡೆಯುವುದಕ್ಕೆ ಹೆಚ್ಚು ಶುಲ್ಕ ವಿಧಿಸಲಾಗುತ್ತಿತ್ತು. ಈಗ ಅದನ್ನು ತಗ್ಗಿಸಲಾಗಿದೆ’ ಎಂದು ತಾಂತ್ರಿಕ ಅಧಿಕಾರಿ ಸಂತೋಷ್‌ ತಿಳಿಸಿದರು.

Post Comments (+)