ಶುಕ್ರವಾರ, ಡಿಸೆಂಬರ್ 4, 2020
24 °C
ಬೆಳೆಗಾರರಲ್ಲಿ ಮೂಡಿದ ಆಶಾಭಾವ– ಇನ್ನಷ್ಟು ದರ ಹೆಚ್ಚಳದ ನಿರೀಕ್ಷೆ

ನರಸಿಂಹರಾಜಪುರ: ರಬ್ಬರ್ ಧಾರಣೆಯಲ್ಲಿ ಕೊಂಚ ಚೇತರಿಕೆ

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ತಾಲ್ಲೂಕಿನಲ್ಲಿ ಕೇವಲ ಭತ್ತ ಬೆಳೆಯುತ್ತಿದ್ದ ರೈತರು ಅದರ ಬೆಲೆಯಲ್ಲಾದ ಕುಸಿತದಿಂದ ಸಂಕಷ್ಟಕ್ಕೀಡಾದಾಗ ವಾಣಿಜ್ಯ ಬೆಳೆ ರಬ್ಬರ್ ಬೆಳೆದು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡಿದ್ದರು. ಕಳೆದ ಕೆಲವು ವರ್ಷಗಳಿಂದ ರಬ್ಬರ್ ಧಾರಣೆಯಲ್ಲಿ ಉಂಟಾದ ಕುಸಿತ ಬೆಳೆಗಾರರಲ್ಲಿ ನಿರಾಶೆ ಮೂಡಿಸಿತ್ತು. ಪ್ರಸ್ತುತ ರಬ್ಬರ್ ಧಾರಣೆಯಲ್ಲಿ ಏರಿಕೆ ಕಂಡು ಬರುತ್ತಿರುವುದು ಬೆಳೆಗಾರರಲ್ಲಿ ಆಶಾವಾದವನ್ನುಂಟು ಮಾಡಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ 2,799 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. 2013ರಲ್ಲಿ ರಬ್ಬರ್ ಧಾರಣೆ ಕೆಜಿಗೆ ₹ 250ವರೆಗೂ ಏರಿಕೆ ಕಂಡಿತ್ತು. ಬೆಲೆ ಹೆಚ್ಚಾಗಿದ್ದರಿಂದ ಪ್ರೇರಣೆಗೊಂಡ ಬಹುತೇಕ ಕೃಷಿಕರು ನೀರಾವರಿ ಇಲ್ಲದ ಜಾಗದಲ್ಲಿ ರಬ್ಬರ್ ಬೆಳೆದಿದ್ದರು. ರಬ್ಬರ್ ತೋಟವನ್ನು ಗುತ್ತಿಗೆ ಕೊಡುವ ಪದ್ಧತಿಯು ರೂಢಿಯಲ್ಲಿತ್ತು.

ನಾಲ್ಕೈದು ವರ್ಷಗಳಿಂದ ರಬ್ಬರ್ ಧಾರಣೆ ₹ 100ರ ಅಸುಪಾಸಿನಲ್ಲಿ ನಿಗದಿಯಾಗುತ್ತಿತ್ತು. ಒಂದು ಕಡೆ ಹೆಚ್ಚುತ್ತಿದ್ದ ಕೂಲಿ ದರದಿಂದ ರಬ್ಬರ್ ಟ್ಯಾಪಿಂಗ್ ಮಾಡುವುದನ್ನೇ ರೈತರು ಕೈಬಿಟ್ಟಿದ್ದರು. ಬೆಲೆ ಕುಸಿತದಿಂದ ಬೇಸತ್ತ ಸಾಕಷ್ಟು ಬೆಳೆಗಾರರು ರಬ್ಬರ್ ಮರ ತೆರವುಗೊಳಿಸಿ, ಆ ಜಾಗದಲ್ಲಿ ಅಡಿಕೆ ಬೆಳೆಯುವತ್ತ ಚಿತ್ತ ಹರಿಸಿದ್ದರು. ಪ್ರಸ್ತುತ ರಬ್ಬರ್ ಧಾರಣೆ ಕೆ.ಜಿಗೆ ₹ 130ರ ಅಸುಪಾಸಿನಲ್ಲಿ ನಿಗದಿಯಾಗಿ, ಏರುಮುಖವಾಗುತ್ತಿರುವುದು ಬೆಳೆ ಗಾರರಲ್ಲಿ ಮಂದಹಾಸ ಮೂಡಿಸಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ 2,079 ಹೆಕ್ಟೇರ್ ರಬ್ಬರ್ ತೋಟದಲ್ಲಿ ಟ್ಯಾಂಪಿಗ್ ಮಾಡಿ 2,874 ಮೆಟ್ರಿಕ್ ಟನ್ ರಬ್ಬರ್ ಉತ್ಪಾದನೆ ಮಾಡಲಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಬೇಡಿಕೆ ಹೆಚ್ಚಾಗುತ್ತಿರುವುದು, ಕೊರೊನಾ ಹರಡುವಿಕೆ ನಿಯಂತ್ರಿಸಲು ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ರಬ್ಬರ್ ಆಮದು ಸ್ಥಗಿತಗೊಳಿಸಿರುವುದು ರಬ್ಬರ್ ಧಾರಣೆ ಯಲ್ಲಿ ಏರಿಕೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ ಬೆಳೆಗಾರರು.

‘ದೇಶದಲ್ಲಿ ಆಂತರಿಕವಾಗಿ 12 ಲಕ್ಷ ಮೆಟ್ರಿಕ್ ಟನ್ ರಬ್ಬರ್‌ಗೆ ಬೇಡಿಕೆ ಇದೆ. ಉತ್ಪಾದನೆಯಾಗುತ್ತಿರುವುದು 8 ಲಕ್ಷ ಮೆಟ್ರಿಕ್ ಟನ್. ಹಾಗಾಗಿ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಯಾ ಗುತ್ತಿರುವುದರಿಂದ ರಬ್ಬರ್ ಧಾರಣೆ ಏರಿಕೆ ಯಾಗಿದೆ’ ಎನ್ನುತ್ತಾರೆ ಶಿವಮೊಗ್ಗ ದಲ್ಲಿರುವ ರಬ್ಬರ್ ಮಂಡಳಿಯ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಾದೇಶಿಕ ಅಧಿಕಾರಿ ಡಿ.ಸುರೇಶ್.

ಪ್ರಸ್ತುತ ಚಳಿಗಾಲದ ಋತು ಆರಂಭ ವಾಗಿರುವುದರಿಂದ ರಬ್ಬರ್ ಟ್ಯಾಪಿಂಗ್ ಪ್ರಮಾಣ ಹೆಚ್ಚಿ ಉತ್ಪಾದನೆಯೂ ಹೆಚ್ಚಾಗಲಿದೆ. ಉತ್ಪಾದನೆ ಹೆಚ್ಚಾದರೂ ಬೆಲೆ ಸ್ಥಿರವಾಗಿದ್ದರೆ ಮಾತ್ರ ಅನುಕೂಲ ವಾಗಲಿದೆ ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.